ಎಸ್ಎಸ್ಎಲ್‌ಸಿ ಪರೀಕ್ಷೆ - 2021 : ಪರೀಕ್ಷೆಗೆ ಹೋಗುವ ಮುನ್ನ ಈ ವಿಷಯ ಗೊತ್ತಿರಲಿ !
ಬೆಂಗಳೂರು, ಜು. 13: ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಇನ್ನೇನು ಮುಂದಿನ ಸೋಮವಾರ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದೆ. ಜು. 19 ರಂದು ಕೋರ್ ವಿಷಯ( ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ಗಳ ಪರೀಕ್ಷೆ ನಡೆಯಲಿದೆ. ಜು. 22 ರಂದು ಭಾಷಾ ವಿಷಯಗಳ ಪರೀಕ್ಷೆ ( ಕನ್ನಡ, ಇಂಗ್ಲೀಷ್, ಹಿಂದಿ ) ನಡೆಯಲಿದೆ.
ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಹಾಗೂ ಒಎಮ್‌ಆರ್ ಶೀಟ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ಒಎಮ್‌ಆರ್ ಶೀಟ್‌ನಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿದರೂ ಮಹಾ ಪ್ರಮಾದವಾಗಲಿದೆ. ಒಎಮ್‌ಆರ್ ಶೀಟ್‌ನ್ನು ಕಂಪ್ಯೂಟರ್‌ನಲ್ಲಿ ಸ್ಕ್ಯಾನ್ ಮಾಡಿ ಮೌಲ್ಯಮಾಪನ ಮಾಡುವುದರಿಂದ ಎಚ್ಚರಿಕೆಯಿಂದ ತುಂಬಬೇಕು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಹಾಗೂ ಒಎಮ್‌ಆರ್ ಶೀಟ್ ಕುರಿತು ತಿಳಿದುಕೊಳ್ಳಲೇಬೇಕಾದ ವಿಷಯವನ್ನು ಒನ್ಇಂಡಿಯಾ ಕನ್ನಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ನೀಡಲಾಗಿದೆ. ಜತೆಗೆ ಕೆಲವು ಟಿಪ್ಸ್ ಕೂಡ ನೀಡಲಾಗಿದೆ.

ಓಎಂಆರ್ ಶೀಟ್ ಮಾದರಿ
ಪರೀಕ್ಷೆಗೆ ಒಂದು ವಾರ ಇರುವಾಗಲೇ ಮಾದರಿ ಪ್ರಶ್ನೆ ಪತ್ರಿಕೆ ಜತೆಗೆ ಮಾದರಿ ಒಎಂಆರ್ ಶೀಟ್ ನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಜು. 19 ರಂದು ಸೋಮವಾರ ಪರೀಕ್ಷೆ ನಡೆಯಲಿದೆ. ವಿಷಯಕ್ಕೆ ನಲವತ್ತು ಪ್ರಶ್ನೆಗಳಿದ್ದು, ಒಟ್ಟು ಮೂರು ವಿಷಯಗಳಿಗೆ ಸಂಬಂಧಿಸಿದಂತೆ ತಲಾ 40 ಪ್ರಶ್ನೆಗಳಿರುತ್ತವೆ. ಮೂರು ವಿಷಯ ಆಧಾರಿತ ಒಟ್ಟು 120 ಪ್ರಶ್ನೆಗಳಿಗೆ ಅನುಗುಣವಾಗಿ ಪ್ರತ್ಯೇಕ ಮೂರು ಒಎಂಆರ್ ಶೀಟ್‌ನ್ನು ನೀಡಲಾಗುತ್ತಿದೆ. ಮೂರು ವಿಷಯಕ್ಕೆ ಅನುಗುಣವಾಗಿ ಬಣ್ಣ ನೀಡಲಾಗಿದೆ. ಗಣಿತ ವಿಷಯಕ್ಕೆ ಪಿಂಕ್, ವಿಜ್ಞಾನ ವಿಷಯಕ್ಕೆ ಕೇಸರಿ, ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ. ಭಾಷಾ ವಿಷಯಗಳಲ್ಲಿ ಪ್ರಥಮ ಭಾಷೆಗೆ ಪಿಂಕ್ ಬಣ್ಣ, ದ್ವಿತೀಯ ಭಾಷೆಗೆ ಆರೆಂಜ್, ತೃತೀಯ ಭಾಷೆಗೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ. ಬಣ್ಣವನ್ನು ಆಧರಿಸಿ ಒಎಂಆರ್ ಶೀಟ್‌ನ್ನು ಮುದ್ರಿಸಲಾಗಿದೆ. ಮೂರು ವಿಷಯಗಳಿಗೆ ಮೂರು ಒಎಂಆರ್ ಶೀಟ್ ನೀಡಲಾಗುತ್ತದೆ.

ಒಎಂಆರ್ ಶೀಟ್ ಹಾಳು ಮಾಡಬೇಡಿ
ಒಎಂಆರ್ ಶೀಟ್ ಅನ್ನು ವಿದ್ಯಾರ್ಥಿಗಳು ತುಂಬಾ ಜೋಪಾನವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ಒಎಂಆರ್ ಶೀಟ್‌ಗೆ ಒಂದು ಪಿನ್ ಸಹ ಚುಚ್ಚ ಬಾರದು. ಅಪ್ಪಿ ತಪ್ಪಿಯೂ ಒಎಂಆರ್ ಶೀಟ್ ಹರಿಯಬಾರದು. ಓಎಂಆರ್ ಶೀಟ್‌ನಲ್ಲಿ ಕೊಟ್ಟಿರುವ ಬಹು ಆಯ್ಕೆಯ ಉತ್ತರದ ವೃತ್ತವನ್ನು ತುಂಬುವಾಗಲೂ ಎಚ್ಚರಿಕೆಯಿಂದ ತುಂಬೇಕು. ಒಂದೇ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಎರಡು ಆಯ್ಕೆಯನ್ನು ಮಾಡಿಕೊಳ್ಳಬಾರದು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿರುವ ರೀತಿ ಯಾವುದೇ ಕಾರಣಕ್ಕೂ ವೈಟನರ್ ಅನ್ನು ಬಳಸಬಾರದು. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಗೈರು ಹಾಜರಾತಿ (ಎಬಿ) ವೃತ್ತವನ್ನು ಅಪ್ಪಿ ತಪ್ಪಿಯೂ ತುಂಬಬಾರದು. ಈ ಮೇಲೆ ಹೇಳಿರುವ ವಿಷಯದಲ್ಲಿ ಒಂದು ತಪ್ಪಾದರೂ ವಿದ್ಯಾರ್ಥಿಯ ಫಲಿತಾಂಶದಲ್ಲಿ ಏರು ಪೇರಾಗಲಿದೆ. ವಿದ್ಯಾರ್ಥಿಯ ಫಲಿತಾಂಶ ಪ್ರಕಟಗೊಳ್ಳುವುದಕ್ಕೆ ಅಡಚಣೆಯಾಗಲಿದೆ.

ಓಎಂಆರ್ ಶೀಟ್ ನಲ್ಲಿ ಏನೆಲ್ಲಾ ವಿವರ ಇರಲಿದೆ
ಪ್ರತಿ ವಿಷಯಕ್ಕೆ ಒಂದು ಪ್ರತ್ಯೇಕ ಒಎಂಆರ್ ಶೀಟ್ ನೀಡಲಾಗುತ್ತದೆ. ಇದರಲ್ಲಿ ಪ್ರಶ್ನೆ ಪತ್ರಿಕೆ ವಿಷಯ, ಪರೀಕ್ಷಾ ಕೇಂದ್ರದ ವಿವರ, ವಿದ್ಯಾರ್ಥಿಯ ವಿವರ ಮತ್ತು ಭಾವಚಿತ್ರ ವಿವರ ನೀಡಲಾಗಿದೆ. ಒಎಂಆರ್ ಶೀಟ್‌ನಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿಯ ಭಾವಚಿತ್ರ ಪ್ರಕಟವಾಗದಿದ್ದರೆ, ವಿದ್ಯಾರ್ಥಿಯಿಂದ ಭಾವಚಿತ್ರ ಸಂಗ್ರಹಿಸಿ ಪರೀಕ್ಷೆ ಪರಿವೀಕ್ಷಕರು ಅಂಟಿಸಿ ಅದರ ಮೇಲೆ ವಿದ್ಯಾರ್ಥಿಯ ಸಹಿ ಪಡೆಯಬೇಕು. ಪೋಟೋನ್ನು ಇಟ್ಟು ಯಾವುದೇ ಕಾರಣಕ್ಕೂ ಪಿನ್ ಒಡೆಯಬಾರದು. ಒಎಂಆರ್ ಶೀಟ್‌ನಲ್ಲಿ ಕೊಟ್ಟಿರುವ ಉತ್ತರ ಆಯ್ಕೆಯ ವೃತ್ತವನ್ನು ಕಪ್ಪು ಮತ್ತು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್‌ನಿಂದ ತುಂಬಬೇಕು. ಒಂದು ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರ ಆಯ್ಕೆ ನೀಡಿದ್ದು, ಅದರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬೇಕು. ಒಂದೇ ಪ್ರಶ್ನೆಗೆ ಎರಡು ಉತ್ತರ ಆಯ್ಕೆ ಮಾಡಿದರೆ, ಸರಿ ಉತ್ತರವಿದ್ದರೂ ಅದನ್ನು ಪರಿಗಣಿಸಲು ಅವಕಾಶವಿರುವುದಿಲ್ಲ. ಈ ಶೀಟ್‌ನ್ನು ತುಂಬಾ ಎಚ್ಚರಿಕೆಯಿಂದ ತುಂಬಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿರಬೇಕು.

ಪರೀಕ್ಷೆಗೆ ಹೋಗುವ ಮುನ್ನ ಪರೀಕ್ಷಿಸಿಕೊಳ್ಳಿ
ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವ ಮುನ್ನ ಒಂದೇ ರೀತಿಯ ಬಣ್ಣದ ( ಕಪ್ಪು ಅಥವಾ ನೀಲಿ) ಎರಡು ಬಾಲ್ ಪಾಯಿಂಟ್ ಪೆನ್ನು ತೆಗೆದುಕೊಂಡು ಹೋಗಬೇಕು. ( ಒಂದೇ ಕಂಪನಿಗೆ ) ಹೊಸ ಪೆನ್ನು ಖರೀದಿಸಿದರೂ ಸುಲಲಿತವಾಗಿ ಬರೆಯುವ ಹಾಗೆ ಪರೀಕ್ಷೆಗೆ ಹೋಗುವ ಮೊದಲೇ ಪೆನ್‌ಗಳನ್ನು ಬಳಸಿರಿ. ಪೆನ್ಸಿಲ್ ಹಾಗೂ ರಬ್ಬರ್ ಸಹ ತೆಗೆದುಕೊಂಡು ಹೋಗಿರಬೇಕು. ಜತೆಗೆ ಕಡ್ಡಾಯವಾಗಿ ಎರಡು ಭಾವಚಿತ್ರಗಳನ್ನು ತೆಗೆದುಕೊಂಡು ಹೋಗಿರಬೇಕು. ಆಕಸ್ಮಿಕ ಬೇರೆ ಯಾವುದೇ ಅನಾವಶ್ಯಕ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತೆಗೆದುಕೊಂಡು ಹೋಗಬಾರದು.

ಪ್ರಶ್ನೆ ಪತ್ರಿಕೆ ಬಗ್ಗೆ ಮಾರ್ಗದರ್ಶನ
ಪ್ರತಿ ವಿಷಯ ಆಧಾರಿತ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ ನೀಡಲಾಗುತ್ತದೆ. ಪ್ರಶ್ನೆಗಳ ಸಂಖ್ಯೆ ಮಾತ್ರ ಮೂರು ಕೋರ್ ವಿಷಯಗಳಿಗೆ ಆಧರಿಸಿ 1 ರಿಂದ 120 ವರೆಗೂ ಕ್ರಮವಾಗಿ ಪ್ರಶ್ನೆ ಸಂಖ್ಯೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಗಣಿತ ವಿಷಯಕ್ಕೆ ಪ್ರಶ್ನೆ ಕ್ರಮ ಸಂಖ್ಯೆ 1 ರಿಂದ 40 ವರೆಗೂ ಗಣಿತ, 41 ರಿಂದ 80 ರ ವರೆಗೂ ವಿಜ್ಞಾನ, 80 ರಿಂದ 120 ರ ವರೆಗೂ ಸಮಾಜ ವಿಜ್ಞಾನ ಪ್ರಶ್ನೆ ಸಂಖ್ಯೆಯಾಗಲಿವೆ. ಹೀಗಾಗಿ ಪ್ರಶ್ನೆ ಪತ್ರಿಕೆ ಹಾಗೂ ಅದಕ್ಕೆ ಸಂಬಧಿಸಿದ ಒಎಂಆರ್ ಶೀಟ್‌ನ್ನು ಜಾಗರೂಕವಾಗಿ ಪರಿಶೀಲಿಸಿ ವಿವರಗಳನ್ನು ತುಂಬಬೇಕು. ಈ ವಿಷಯ ಭಾಷಾ ವಿಷಯಗಳಿಗೆ ಸಹ ಅನ್ವಯವಾಗಲಿದೆ. ಪ್ರತಿ ವಿಷಯಕ್ಕೂ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಹಾಗೂ ಪ್ರತ್ಯೇಕ ಒಎಂಆರ್ ಶಿಟ್ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
Recommended Video

ಇದನ್ನು ಯಾವ ಕಾರಣಕ್ಕೂ ಮರೆಯಬೇಡಿ
ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿ ಸ್ವಲ್ಪ ತಪ್ಪಾದರೂ ಅಂಕ ಸಿಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಅತಿ ಸೂಕ್ಷ್ಮವಾಗಿ ಉತ್ತರದ ಆಯ್ಕೆ ಮಾಡಬೇಕು. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ವಿದ್ಯಾರ್ಥಿಗಳಿಗೆ ಹಲವು ಟಿಪ್ಸ್ ನೀಡಿದ್ದಾರೆ. ಒಂದು ಪ್ರಶ್ನೆ ಪತ್ರಿಕೆಗೆ 40 ಪ್ರಶ್ನೆಗಳಿದ್ದು, ಉತ್ತರಿಸಲಿಕ್ಕೆ ಒಂದು ತಾಸು ಸರಾಸರಿ ನೀಡಲಾಗಿದೆ. ಹೀಗಾಗಿ ಮೂರು ವಿಷಯಗಳಿಗೆ 120 ಪ್ರಶ್ನೆಗಳನ್ನು ಉತ್ತರಿಸಲಿಕ್ಕೆ ಮೂರು ತಾಸು ಅವಕಾಶ ನೀಡಲಾಗಿದೆ. ಕೇವಲ ವೃತ್ತ ತುಂಬುವ ಕಾರಣದಿಂದ ಮೊದಲು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಒಂದು ಸಲ ಅಲ್ಲ, ಎರಡು ಸಲ ಓದಿಕೊಳ್ಳಬೇಕು. ಖಚಿತ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಪೆನ್ಸಿಲ್‌ನಿಂದ ಗುರುತು ಹಾಕಿಕೊಳ್ಳಬೇಕು.
ಆನಂತರ ಅನುಮಾನ, ಸ್ವಲ್ಪ ಗೊಂದಲ ಇರುವ ಪ್ರಶ್ನೆಗಳ ಬಗ್ಗೆ ಪ್ರಶ್ನೆ ಪತ್ರಿಕೆಯಲ್ಲಿ ಕೊನೆಯಲ್ಲಿ ಇರುವ ನಿರುಪಯುಕ್ತ ಹಾಳೆಗಳನ್ನು ಬಳಸಿಕೊಳ್ಳಬಹುದು. ಅಪ್ಪಿ ತಪ್ಪಿ ಒಎಂಆರ್ ಶೀಟ್‌ನಲ್ಲಿ ಒಂದು ಚುಕ್ಕಿಯನ್ನು ಸಹ ಅನಾವಶ್ಯಕವಾಗಿ ಇಡಬಾರದು. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಇರುವ ಕಾರಣ ಏನೇ ಗೊಂದಲ ಮೂಡಿಸುವ ಪ್ರಶ್ನೆಗಳಿಗೆ ಇರುವ ಆಯ್ಕೆಗಳಲ್ಲಿ ಸರಿಯಲ್ಲದ್ದನ್ನು ಗುರುತಿಸಿ ಆನಂತರ ಸರಿ ಉತ್ತರ ಆಯ್ಕೆ ಮಾಡುವುದು ಬಹು ಸೂಕ್ತ. ಇನ್ನು ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನ ಬಂದರೂ ಶಾಲಾ ಪರಿವೀಕ್ಷಕರನ್ನು ಕೇಳಿ ಗೊಂದಲ ಇತ್ಯರ್ಥಪಡಿಸಿಕೊಳ್ಳಿ. ಯಾರನ್ನು ಕೇಳದೇ ಗೊಂದಲಕ್ಕೆ ಒಳಗಾಗಬೇಡಿ.












Click it and Unblock the Notifications