Karnataka SIR: VIPಗಳಿಗೆ ಮನೆ ಬಾಗಿಲಿಗೆ ಸೇವೆ, ಜನಸಾಮಾನ್ಯರಿಗೆ ಕ್ಯೂ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಧಿಕಾರಿಗಳ ತಾರತಮ್ಯ
ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂದು ಹೇಳಲಾಗುತ್ತದೆ, ಆದರೆ ವಾಸ್ತವದಲ್ಲಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಸ್ಪಷ್ಟ ನಿದರ್ಶನವಾಗಿದೆ. ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವಿಐಪಿಗಳಿಗೆ ಚುನಾವಣಾ ಅಧಿಕಾರಿಗಳು ಮನೆಗೇ ಹೋಗಿ ವಿಶೇಷ ಸೇವೆ ನೀಡುತ್ತಿದ್ದರೆ, ವಯಸ್ಸಾದವರು, ರೋಗಿಗಳು ಹಾಗೂ ಅಂಗವಿಕಲರು ಸೇರಿದಂತೆ ಸಾಮಾನ್ಯ ಮತದಾರರು ಮಾತ್ರ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚುನಾವಣಾ ಆಯೋಗದ ಅಧಿಕಾರಿಗಳು ಗಣ್ಯರಿಗೆ ಯಾವ ರೀತಿ ಮಣೆ ಹಾಕುತ್ತಿದ್ದಾರೆ ಎಂಬುದಕ್ಕೆ ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಅವರ ಪ್ರಕರಣವೇ ಸಾಕ್ಷಿ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿವರಾಜ್‌ಕುಮಾರ್ ಅವರ 2002ರ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದ ಕಾರಣ ಅವರ ದಾಖಲೆಯನ್ನ ನೋ ಮ್ಯಾಪಿಂಗ್ ಎಂದು ನಮೂದಿಸಲಾಗಿತ್ತು. ಆದರೆ, ಅವರು ವಿಐಪಿ ಆಗಿರುವ ಕಾರಣ ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.

ನೋಟಿಸ್ ನೀಡುವ ಬದಲು, ಬಿಬಿಎಂಪಿ ಜಂಟಿ ಆಯುಕ್ತರು, ಚುನಾವಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ದೊಡ್ಡ ತಂಡವೇ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ನಟನ ನಿವಾಸಕ್ಕೆ ಖುದ್ದಾಗಿ ತೆರಳಿ ಅವರ ಪಾಸ್‌ಪೋರ್ಟ್ ಪರಿಶೀಲನೆ ನಡೆಸಿದೆ.
ಕೇವಲ ಶಿವರಾಜ್‌ಕುಮಾರ್ ಮಾತ್ರವಲ್ಲದೆ, ಇನ್ಫೋಸಿಸ್ ಸಂಸ್ಥಾಪಕ ನಂದನ್ ನಿಲೇಕಣಿ, ಭಾರತರತ್ನ ಸಿ.ಎನ್.ಆರ್. ರಾವ್, ಝೆರೋದಾ ಸಂಸ್ಥಾಪಕರಾದ ನಿಖಿಲ್ ಮತ್ತು ನಿತಿನ್ ಕಾಮತ್ ಹಾಗೂ ಅವರ ತಾಯಿ ರೇವತಿ ಕಾಮತ್ ಮುಂತಾದ ಪ್ರಭಾವಿ ಗಣ್ಯರಿಗೂ ಅಧಿಕಾರಿಗಳು ಇದೇ ರೀತಿಯ ವಿಶೇಷ ಸೌಲಭ್ಯಗಳನ್ನ ಒದಗಿಸಿದ್ದಾರೆ.
ಸಾಮಾನ್ಯ ಜನರಿಗೆ ತಪ್ಪದ ಪರದಾಟ
ಗಣ್ಯರಿಗೆ ತಮ್ಮ ಮನೆಯಲ್ಲಿಯೇ ಕುಳಿತು ಮತದಾರರ ಗುರುತಿನ ಚೀಟಿಯ ವಿವರಗಳನ್ನ ಸರಿಪಡಿಸಿಕೊಳ್ಳುವ ಸೌಲಭ್ಯವಿದ್ದರೆ, ಜನಸಾಮಾನ್ಯರ ಪಾಡು ಮಾತ್ರ ಹೇಳತೀರದು. ನೋಟಿಸ್ ಪಡೆದ ಸಾಮಾನ್ಯ ಮತದಾರರು, ಅವರು ಎಷ್ಟೇ ವಯಸ್ಸಾಗಿದ್ದರೂ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಖುದ್ದಾಗಿ ವಿಚಾರಣಾ ಕೇಂದ್ರಗಳಿಗೆ ತೆರಳಿ ಅಧಿಕಾರಿಗಳ ಮುಂದೆ ಹಾಜರಾಗಬೇಕಾದ ಅನಿವಾರ್ಯತೆ ಇತ್ತು.
ಅಲ್ಲದೇ, ವಿಚಾರಣಾ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುವುದು, ಯಾವ ದಾಖಲೆಗಳನ್ನ ತರಬೇಕು ಎಂಬ ಗೊಂದಲ, ಮತ್ತು ಮೂಲ ದಾಖಲೆಗಳನ್ನ ತರುವಂತೆ ಅಧಿಕಾರಿಗಳು ಪದೇ ಪದೇ ಅಲೆದಾಡಿಸುವುದು ದಿನನಿತ್ಯದ ಆಟವಾದಂತಾಗಿದೆ. ಉದ್ಯೋಗಸ್ಥರು ತಮ್ಮ ಕೆಲಸ ಬಿಟ್ಟು ಬರುವಂತಿರಲಿಲ್ಲ, ವೃದ್ಧರು ನಡೆದಾಡಲಾಗದೆ ಪರದಾಡುತ್ತಿದ್ದರು. ಅದ್ರೆ ಇದ್ರಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಚುನಾವಣಾ ಆಯೋಗದ ಹೊಸ ಆದೇಶ
ಈ ತಾರತಮ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯು, ಸೆಪ್ಟೆಂಬರ್ 11ರಂದು ಹೊಸ ಮಾರ್ಗಸೂಚಿಯೊಂದನ್ನ ಹೊರಡಿಸಿದೆ. ಈ ಹೊಸ ಆದೇಶದ ಅನ್ವಯ, ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು, ವಿಕಲಚೇತನರು ಮತ್ತು ವಿದೇಶದಲ್ಲಿ ನೆಲೆಸಿರುವ ಮತದಾರರ ಪರವಾಗಿ ಅವರ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಅಗತ್ಯ ದಾಖಲೆಗಳನ್ನು ಚುನಾವಣಾಧಿಕಾರಿಗಳ ಮುಂದೆ ಹಾಜರುಪಡಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಈ ಆದೇಶ ಹೊರಬೀಳುವಷ್ಟರಲ್ಲಿ ಸಾವಿರಾರು ವೃದ್ಧರು ಹಾಗೂ ಅಸಹಾಯಕರು ಈಗಾಗಲೇ ವಿಚಾರಣಾ ಕೇಂದ್ರಗಳಿಗೆ ಅಲೆದಾಡಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿಲುವು
ಬಿಹಾರದಲ್ಲಿ 2025ರಲ್ಲಿ ಮೊದಲ ಬಾರಿಗೆ ಆರಂಭವಾದ ಈ 'ವಿಶೇಷ ತೀವ್ರ ಪರಿಷ್ಕರಣೆ' ಪ್ರಕ್ರಿಯೆಯ ಮೂರನೇ ಹಂತವು ಈಗ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿದೆ. ಆದರೆ, ಈ ಪ್ರಕ್ರಿಯೆಯಿಂದ ನಿಜವಾದ ಮತದಾರರನ್ನ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ತೀವ್ರ ಆತಂಕವೂ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಎಸ್‌ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆಯನ್ನ ಎತ್ತಿಹಿಡಿದಿದೆಯಾದರೂ, ಈ ಪರಿಷ್ಕರಣೆಯು ಯಾವುದೇ ವ್ಯಕ್ತಿಯ ಪೌರತ್ವವನ್ನ ನಿರ್ಧರಿಸುವ ಪರಮಾಧಿಕಾರವನ್ನ ಚುನಾವಣಾ ಆಯೋಗಕ್ಕೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು, ಆದರೆ ವಾಸ್ತವದಲ್ಲಿ ವಿಐಪಿ ಮತ್ತು ಜನಸಾಮಾನ್ಯರ ನಡುವಿನ ಅಂತರ ಇನ್ನೂ ಹಾಗೆಯೇ ಇದೆ.


Click it and Unblock the Notifications
