Shakti Scheme: ಆಧಾರ್ ಕಾರ್ಡ್ ಕಿರಿಕಿರಿ ಇನ್ಮುಂದೆ ಇರಲ್ಲ; ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬರಲಿದೆ 'ಸ್ಮಾರ್ಟ್ ಕಾರ್ಡ್'
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಹಾಗೂ ಜನಪ್ರಿಯ 'ಶಕ್ತಿ' ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವ ರಾಜ್ಯದ ಮಹಿಳೆಯರಿಗೆ ಸಾರಿಗೆ ಇಲಾಖೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಮಹಿಳೆಯರ ಉಚಿತ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶದಿಂದ ಶೀಘ್ರದಲ್ಲೇ 'ಸ್ಮಾರ್ಟ್ ಕಾರ್ಡ್' ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.
ಆಧಾರ್ ಕಾರ್ಡ್ ಕಿರಿಕಿರಿಗೆ ಮುಕ್ತಿ
ಪ್ರಸ್ತುತ ಶಕ್ತಿ ಯೋಜನೆಯಡಿ ಪ್ರಯಾಣಿಸುವಾಗ ಮಹಿಳೆಯರು ಉಚಿತ ಟಿಕೆಟ್ ಪಡೆಯಲು ತಮ್ಮ ಆಧಾರ್ ಕಾರ್ಡ್ ಅಥವಾ ಇತರ ಅಧಿಕೃತ ಗುರುತಿನ ಚೀಟಿಯನ್ನು ಕಂಡಕ್ಟರಿಗೆ ತೋರಿಸುವುದು ಕಡ್ಡಾಯವಾಗಿದೆ. ವಿಶೇಷವಾಗಿ ಬೆಳಗಿನ ಹಾಗೂ ಸಂಜೆಯ ಪೀಕ್ ಅವರ್‌ಗಳಲ್ಲಿ ಬಸ್ ಹತ್ತುವಾಗ ಮಹಿಳೆಯರು ತಮ್ಮ ಪರ್ಸ್‌ನಲ್ಲಿ ಆಧಾರ್ ಕಾರ್ಡ್ ಹುಡುಕುವುದು, ಅದನ್ನು ಕಂಡಕ್ಟರ್ ಪರಿಶೀಲಿಸಿ ಟಿಕೆಟ್ ನೀಡುವುದು ಸಾಕಷ್ಟು ವಿಳಂಬ ಹಾಗೂ ಗೊಂದಲಗಳಿಗೆ ಕಾರಣವಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಇದೀಗ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ತರಲಾಗುತ್ತಿದ್ದು, ಈ ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪ್ರಯಾಣದ ವೇಳೆ ಆಧಾರ್ ಕಾರ್ಡ್ ತೋರಿಸುವ ತೊಂದರೆ ತಪ್ಪಲಿದೆ.

ಸೋಮವಾರವಷ್ಟೇ ನೂತನ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೈರತಿ ಸುರೇಶ್ ಅವರು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, "ರಾಜ್ಯದ ಮೂರು ಕೋಟಿಗೂ ಅಧಿಕ ಮಹಿಳಾ ಫಲಾನುಭವಿಗಳಿಗೆ ಸರ್ಕಾರ ಉಚಿತವಾಗಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಿದೆ. ಇದರಿಂದ ದಿನನಿತ್ಯ ನಿರ್ವಾಹಕರಿಗೆ ಭೌತಿಕ ಗುರುತಿನ ಚೀಟಿ ತೋರಿಸುವ ಗೊಂದಲ ನಿವಾರಣೆಯಾಗಲಿದೆ" ಎಂದು ಹೇಳಿದ್ದಾರೆ.
ಪುರುಷರಿಗೂ ಮೆಟ್ರೋ ಮಾದರಿ ಕಾರ್ಡ್
ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ, ಪುರುಷರಿಗೂ ಅನುಕೂಲವಾಗುವಂತೆ ಮೆಟ್ರೋ ಕಾರ್ಡ್ ಮಾದರಿಯಲ್ಲಿ ಬಸ್ ಸ್ಮಾರ್ಟ್ ಕಾರ್ಡ್ ನೀಡಲು ಇಲಾಖೆ ಯೋಜನೆ ರೂಪಿಸಿದೆ. ಪುರುಷ ಪ್ರಯಾಣಿಕರು ನಿಗದಿತ ಶುಲ್ಕ ಪಾವತಿಸಿ ಈ ಕಾರ್ಡ್ ಪಡೆಯಬಹುದಾಗಿದೆ ಹಾಗೂ ಕಾರ್ಡ್‌ನಲ್ಲಿರುವ ಮೊತ್ತ ಮುಗಿದ ಬಳಿಕ ಮರು-ರಿಚಾರ್ಜ್ ಮಾಡಿಕೊಂಡು ಪ್ರಯಾಣಿಸುವ ವ್ಯವಸ್ಥೆಯೂ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಬರೋಬ್ಬರಿ ಮೂರು ಕೋಟಿಗೂ ಹೆಚ್ಚು ಸ್ಮಾರ್ಟ್ ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಬೇಕಿರುವ ಹಿನ್ನೆಲೆಯಲ್ಲಿ, ಸರ್ಕಾರ ಟೆಂಡರ್ ಆಹ್ವಾನಿಸಲು ಸಕಲ ಸಿದ್ಧತೆ ನಡೆಸಿದೆ. ಪೈಲಟ್ ಯೋಜನೆಯಡಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಶೇಕಡಾ 40 ರಷ್ಟು ಪ್ರಯಾಣಿಕರ ಹೆಚ್ಚಳ
ಸಚಿವರು ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಗೆ ಭೇಟಿ ನೀಡಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲಾಖೆಯ ಕಾರ್ಯವೈಖರಿ ಪರಿಶೀಲಿಸಿದರು. ಸಭೆಯ ಬಳಿಕ ಮಾತನಾಡಿದ ಅವರು, "ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನಜೀವನವನ್ನು ಉತ್ತಮಗೊಳಿಸಿವೆ. ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದು, ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಸುಮಾರು 40 ಶೇಕಡಾ ಹೆಚ್ಚಾಗಿದೆ" ಎಂದು ತಿಳಿಸಿದರು.
ದಿನನಿತ್ಯ ಉದ್ಯೋಗಕ್ಕೆ, ಶಾಲಾ-ಕಾಲೇಜುಗಳಿಗೆ ತೆರಳುವ ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್ ಯೋಜನೆ ಬಹುದೊಡ್ಡ ಅನುಕೂಲ ಮಾಡಿಕೊಡಲಿದ್ದು, ಬಸ್ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.












Click it and Unblock the Notifications