Arun Yogiraj: ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತಿದ್ದ ಕರ್ನಾಟಕ ಶಿಲ್ಪಿಗೆ ಪ್ರತಿಷ್ಠಿತ ಬಿರುದು
ಕಾರವಾರ, ಮಾರ್ಚ್ 05: ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಎಲ್ಲರಿಗೂ ಚಿರಪರಿಚಿತ ಹೆಸರು. ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ರಾಮಲಲ್ಲಾ ವಿಗ್ರಹ ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಪ್ರತಿಷ್ಠಿತ ಬಿರುದು ಲಭಿಸಿದೆ.
ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ವಿಗ್ರಹವನ್ನು ಕೆತ್ತಿರುವ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಡಾ. ಹಿರೇಮಠ ಫೌಂಡೇಷನ್ ವತಿಯಿಂದ ಪ್ರತಿಷ್ಠಿತ "ಅಭಿನವ ಅಮರಶಿಲ್ಪಿ" ಬಿರುದು ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಗರ್ ದರ್ಶನ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅರುಣ್ ಯೋಗಿರಾಜ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
'ಅಭಿನವ ಅಮರಶಿಲ್ಪಿ' ಬಿರುದು
ಬೇಲೂರು ಮತ್ತು ಹಳೆಬೀಡಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಸುಂದರ ಶಿಲ್ಪಗಳನ್ನು ಕೆತ್ತಿರುವ ಶಿಲ್ಪಿ ಜಕಣಾಚಾರಿಗೆ ಅಮರಶಿಲ್ಪಿ ಎಂಬ ಬಿರುದು ಹೊಂದಿದ್ದಾರೆ. ಅದಕ್ಕೆ ಸಮಾನಾರ್ಥವಾಗಿ ಅಯೋಧ್ಯೆಯ ರಾಮಮಂದಿರದ ಬಾಲಕ ರಾಮನ ಸುಂದರ ಮೂರ್ತಿಯನ್ನು ಕೆತ್ತಿರುವ ಮೈಸೂರು ಮೂಲದ ಅರುಣ್ ಯೋಗಿರಾಜ್ ಡಾ. ಹಿರೇಮಠ ಫೌಂಡೇಷನ್ 'ಅಭಿನವ ಅಮರಶಿಲ್ಪಿ' ಬಿರುದು ನೀಡಿ ಗೌರವಿಸಿತು.
ಮೈಸೂರು ಜಿಲ್ಲೆಯ ಒಂದು ಹಳಿಯ ದಲಿತರ ಜಮೀನಿನಿಂದ ತೆಗೆದುಕೊಂಡು ಹೋಗಲಾಗಿದ್ದು, ಕೃಷ್ಣ ಶಿಲೆಯಲ್ಲಿ 51 ಇಂಚಿನ ರಾಮಲಲ್ಲಾನ ಮೂರ್ತಿಯನ್ನು ಅರುಣ್ ಯೋಗಿರಾಜ್ ಕೆತ್ತಿದ್ದರು. ಈ ವಿಗ್ರವನ್ನು ಕಳೆದ ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.

ಅರುಣ್ ಯೋಗಿರಾಜ್ ಅವರ ಕೆತ್ತಿದ ಮೂರ್ತಿಯು ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಾಣಪ್ರತಿಷ್ಠಾಪನೆ ಆಯಿತು.
ಅಯೋಧ್ಯೆಗೆ 65 ಲಕ್ಷ ಜನ ಭೇಟಿ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಅಯೋಧ್ಯೆಯಲ್ಲಿ ಇಡೀ ದೇಶವೇ ಬೆರಗಾಗುವಂತಹ ಅದ್ಭುತ ಶ್ರೀರಾಮ ಮಂದಿರ ನಿರ್ಮಿಸಿ ಉದ್ಘಾಟಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಪ್ರಧಾನಿ ಮೋದಿಯವರಲ್ಲದೇ ಮತ್ಯಾರಿಂದಲೂ ಈ ಕೆಲಸ ಕೈಗೂಡುವುದು ಅಸಾಧ್ಯದ ಮಾತಾಗಿತ್ತು ಎಂದು ತಿಳಿಸಿದರು.
ದೇಶದ ಜನತೆ ಶ್ರೀರಾಮನ ಮೇಲಿಟ್ಟಿರುವ ಶೃದ್ಧಾಭಕ್ತಿಗೆ ಬೆರಗಾಗಿದ್ದೇನೆ. ಒಂದು ತಿಂಗಳ ಆಸು ಪಾಸಿನಲ್ಲಿ 65 ಲಕ್ಷ ಜನರು ಈಗಾಗಲೇ ಅಯೋಧ್ಯೆಯ ನೂತನ ರಾಮಮಂದಿರಕ್ಕೆ ಭೇಟಿ ನೀಡಿರುವುದು ನಿಜಕ್ಕೂ ಅದ್ಭುತ ಎಂದರು.
ಕಲೆ-ಜ್ಞಾನ ರಕ್ಷಣೆಗೆ ಶ್ರಮಿಸುತ್ತೇನೆ: ಯೋಗಿರಾಜ್
ಈ ಪ್ರಶಸ್ತಿ ದೊರಕಿರುವುದು ನನಗೆ ಅತೀವ ಸಂತೋಷ ತಂದಿದ್ದು, ಇದೆಲ್ಲದ್ದಕ್ಕೆ ಕಾರಣೀಕರ್ತರಾದ ನನ್ನ ಸಹ ಕಲಾವಿದರು, ತಂತ್ರಜ್ಞರು ಹಾಗೂ ತಂಡದ ಪ್ರತಿ ಸದಸ್ಯರಿಗೂ ಅವರು ಧನ್ಯವಾದ ತಿಳಿಸಿದರು. ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮೂರ್ತಿ ಕೆತ್ತನೆಯ ಕಲೆ ಹಾಗೂ ಜ್ಞಾನವನ್ನು ಮುಂದಿನ ಪೀಳಿಗೆಗೆ ಕಲಿಸಿಕೊಟ್ಟು, ಅದನ್ನು ಉಳಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ 200ಕ್ಕೂ ಅಧಿಕ ಧಾರ್ಮಿಕ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಡಾ. ಹಿರೇಮಠ ಫೌಂಡೇಷನ್‌ನ ಡಾ. ವಿಶ್ವನಾಥ ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications