ರಸ್ತೆ ಅಪಘಾತ: ಕರ್ನಾಟಕದಲ್ಲಿ ದಿನಕ್ಕೆ 31 ಜೀವಗಳು ಬಲಿ; ಬೆಂಗಳೂರಲ್ಲೇ ಅತಿ ಹೆಚ್ಚು ಸಾವು
ಬೆಂಗಳೂರು: ಕರ್ನಾಟಕದ ರಸ್ತೆಗಳು ಇತ್ತೀಚಿನ ದಿನಗಳಲ್ಲಿ ಸಾವಿನ ಹಾದಿಯಾಗಿ ಬದಲಾಗುತ್ತಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡುತ್ತಿದೆ. ರಾಜ್ಯದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳ (Road Accidents) ಅಂಕಿ - ಅಂಶಗಳು ಅತ್ಯಂತ ಭಯಾನಕವಾಗಿದ್ದು, ಪ್ರತಿದಿನ ಸರಾಸರಿ 31 ಮಂದಿ ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ, ಕೇವಲ ಸಾವು ಮಾತ್ರವಲ್ಲದೆ ದಿನಕ್ಕೆ ಸುಮಾರು 86 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗುತ್ತಿದ್ದಾರೆ.
ಜಿಲ್ಲಾವಾರು ಅಂಕಿ - ಅಂಶಗಳ ವಿವರ
2025ರ ಅಂಕಿಅಂಶಗಳನ್ನು ಗಮನಿಸಿದರೆ, ಇಡೀ ವರ್ಷದಲ್ಲಿ ಒಟ್ಟು 11,408 ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಒಂದೇ ವರ್ಷದಲ್ಲಿ 891 ಜನರು ಬಲಿಯಾಗಿದ್ದಾರೆ. ಬೆಂಗಳೂರಿನ ನಂತರ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣಗಳು ವರದಿಯಾಗಿವೆ. ಆದರೆ 2026ರ ಕೇವಲ ಜನವರಿ ತಿಂಗಳೊಂದರಲ್ಲೇ ರಾಜ್ಯದಲ್ಲಿ 1,009 ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂಬುದು ಆಘಾತಕಾರಿ ಸಂಗತಿ.

ವರದಿಯ ಪ್ರಕಾರ, ಶೇ 62.68 ರಷ್ಟು ಅಪಘಾತಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲೇ ಸಂಭವಿಸುತ್ತಿವೆ. ಅತಿ ವೇಗದ ಚಾಲನೆ (Speeding) ಮತ್ತು ಅಜಾಗರೂಕತೆ ಈ ಸಾವುಗಳಿಗೆ ಶೇ 90 ರಷ್ಟು ಕಾರಣವಾಗಿವೆ. ಹೆದ್ದಾರಿಗಳಲ್ಲಿ ಸಕಾಲಕ್ಕೆ ಮುಗಿಯದ ಕಾಮಗಾರಿಗಳು, ಸಮರ್ಪಕ ಬೀದಿ ದೀಪಗಳ ಕೊರತೆ ಮತ್ತು ಅವೈಜ್ಞಾನಿಕ ತಿರುವುಗಳು ಅಪಘಾತವನ್ನು ಹೆಚ್ಚಿಸುತ್ತಿವೆ. ತುಮಕೂರು ಜಿಲ್ಲೆಯ ಹೆದ್ದಾರಿಗಳಲ್ಲಿ ಕಾಮಗಾರಿಗಳು ನಡೆಯುತ್ತಿರುವುದು ಮತ್ತು ಸೇವಾ ರಸ್ತೆಗಳ ಕೊರತೆಯು ಸಂಚಾರಕ್ಕೆ ದೊಡ್ಡ ಅಡಚಣೆಯಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಕಠಿಣ ಕ್ರಮಗಳು
ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಈಗ ಎಚ್ಚೆತ್ತುಕೊಂಡಿದ್ದು, ಹೆದ್ದಾರಿಗಳಲ್ಲಿ ನಿರಂತರ ಪೆಟ್ರೋಲಿಂಗ್ ನಡೆಸಲಾಗುತ್ತಿದ್ದು, ಅತಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ದಂಡ ವಿಧಿಸಲಾಗುತ್ತಿದೆ. "ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಮತ್ತು ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದಿರುವುದು ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ. ಸಾರ್ವಜನಿಕರು ಸ್ವಯಂ ಶಿಸ್ತು ಪಾಲಿಸಿದರೆ ಮಾತ್ರ ಈ ಇದನ್ನೂ ತಡೆಯಲು ಸಾಧ್ಯ," ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಹಾಸನ ಮತ್ತು ಇತರ ಜಿಲ್ಲೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಸ್ಪೀಡ್ ಬ್ರೇಕರ್‌ಗಳು ಮತ್ತು ರಸ್ತೆ ಬದಿ ಬೆಳೆದಿರುವ ಗಿಡಗಂಟಿಗಳು ಸವಾರರ ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ಈ ಕುರಿತು ಲೋಕೋಪಯೋಗಿ ಇಲಾಖೆಗೆ (PWD) ವರದಿ ಸಲ್ಲಿಸಲಾಗಿದ್ದು, ರಸ್ತೆಗಳಲ್ಲಿ ಪ್ರತಿಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ. ಅತಿ ವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ತಂತ್ರಜ್ಞಾನದ ನೆರವಿನಿಂದ ವಾಹನಗಳ ವೇಗದ ಮಿತಿ ಪತ್ತೆ ಹಚ್ಚಲಾಗುತ್ತಿದೆ.
ಒಟ್ಟಾರೆಯಾಗಿ, ರಸ್ತೆ ಸುರಕ್ಷತೆಯು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ವಾಹನ ಸವಾರನ ಜವಾಬ್ದಾರಿಯೂ ಹೌದು. ವೇಗಕ್ಕಿಂತ ಜೀವನ ಮುಖ್ಯ ಎಂಬ ಅರಿವು ಮೂಡದ ಹೊರತು ಈ ಸಾವಿನ ಸಂಖ್ಯೆ ಇಳಿಕೆಯಾಗುವುದು ಕಷ್ಟಕರವಾಗಿದೆ.












Click it and Unblock the Notifications