Land survey: ಇನ್ಮುಂದೆ 10 ನಿಮಿಷದಲ್ಲೇ ಮುಗಿಯುತ್ತೆ ನಿಮ್ಮ ಜಮೀನು ಸರ್ವೇ, ಹೇಗೆ?
ಜಮೀನು ಸರ್ವೇ ಮಾಡುವ ವಿಧಾನದಲ್ಲಿ ಕಂದಾಯ ಇಲಾಖೆಯು ಐತಿಹಾಸಿಕ ಬದಲಾವಣೆ ತಂದಿದೆ. ದಶಕಗಳಿಂದ ಚಾಲ್ತಿಯಲ್ಲಿದ್ದ ಚೈನ್ ಹಿಡಿದು ಜಮೀನು ಅಳತೆ ಮಾಡುವ ಪದ್ಧತಿಗೆ ಗುಡ್‌ಬೈ ಹೇಳಿದೆ. ಚೈನ್ ಬದಲಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಅನ್ನು ಭೂ ಮಾಪಕರಿಗೆ ವಿತರಿಸಿದೆ. ಸರ್ವೇ ಆಯುಕ್ತರ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 465 ಭೂ ಮಾಪಕರಿಗೆ ಈ ಆಧುನಿಕ ತಂತ್ರಜ್ಞಾನವುಳ್ಳ ರೋವರ್ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ವಿತರಿಸಿದರು.
ಸರ್ವೇ ಕೆಲಸವನ್ನು ಮೊದಲಿನಿಂದಲೂ ಚೈನ್ ಹಿಡಿದೇ ಭೂಮಿಯನ್ನು ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಬಿಸಿಲಿನಲ್ಲಿ ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಾಗಿತ್ತು. ಸರ್ವೇ ಮಾಡಲು ಕನಿಷ್ಟ 70 ನಿಮಿಷ ಹಾಗೂ ಅದನ್ನು ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಈ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷದಲ್ಲಿ ಪೂರ್ಣಗೊಳಿಸಲಿದೆ ಎಂದು ಸಚಿವ ಕೃಷ್ಣಬೈರೇಗೌಡ ವಿವರಿಸಿದರು.

ರಾಜ್ಯದಲ್ಲಿ 1830ರಿಂದ 1870ರ ವರೆಗೆ ಮಾತ್ರ ಸರ್ವೇ ಕೆಲಸ ಆಗಿದೆ. 1967ರಲ್ಲಿ ಅಲ್ಪ ಸಲ್ಪ ಸರ್ವೇ ಆಗಿದೆ ಅನ್ನೋದು ಬಿಟ್ಟರೆ ಉಳಿದಂತೆ ಸರ್ವೇ ಕಾರ್ಯ ಆಗಿಲ್ಲ. ಈಗ ರೈತರ ನಾನಾ ಸಮಸ್ಯೆಗಳಿಗೆ ಸರ್ವೇ ಹಾಗೂ ರೀ ಸರ್ವೇ ಕೆಲಸಗಳನ್ನು ವೇಗ ಹೆಚ್ಚಿಸಬೇಕಾಗಿದೆ. ಆದರೆ 1806ರಿಂದಲೂ ಸರ್ವೇ ಕೆಲಸಗಳಿಗೆ ಬಳಸಿದ ಚೈನ್ ವ್ಯವಸ್ಥೆಯನ್ನೇ ಈಗಲೂ ಮುಂದುವರಿಸುತ್ತಿರುವುದು ಆಘಾತಕಾರಿ ಎಂದರು.
ಕಳೆದ 200 ವರ್ಷದಲ್ಲಿ ಪ್ರಪಂಚ ಇಷ್ಟೆಲ್ಲ ಬದಲಾದರೂ ನಮ್ಮ ಕಾರ್ಯವಿಧಾನ ಹಾಗೆಯೇ ಇದೆ. ಪ್ರಪಂಚದ ಮುಖ ಅಂತರಾಳ ಬದಲಾದರೂ, ಕಂದಾಯ ಇಲಾಖೆ ಕೆಲಸ ಮಾಡುವ ರೀತಿ ನೀತಿ ಮಾತ್ರ ಬದಲಾಗಿಲ್ಲ. ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ, ಕೆಲಸ ಮಾಡಲು ಜನ ಇದ್ದಾರೆ ಎಂದು ಉಡಾಫೆಯಿಂದ ನೌಕರರ ಮೇಲೆ ಹೊರೆ ಹಾಕುವುದು ಅಮಾನವೀಯ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಬೇಸರ ವ್ಯಕ್ತಪಡಿಸಿದರು.
ಚೈನ್ ಸರ್ವೇ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸರ್ವೇಯಲ್ಲಿ ಬದಲಾವಣೆ ಮಾಡಬಹುದು. ಇದರಿಂದ ಹಲವರು ಇಂದಿಗೂ ಕೋರ್ಟು ಕಚೇರಿಗಳಿಗೆ ಅಲೆಯುವಂತಾಗಿದೆ. ಆದರೆ, ರೋವರ್ ಸರ್ವೇಯಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ತ್ವರಿತ ಸರ್ವೇ ಮಾಡಿಕೊಡುವುದು ಹಾಗೂ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡುವುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಎಲ್ಲ ಭೂ ಮಾಪಕರಿಗೂ ಈ ರೋವರ್ ನೀಡುವುದು ನಮ್ಮ ಗುರಿ ಎಂದರು.

ಈ ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಹಾಗೂ ಭೂ ಮಾಪನಾ ಇಲಾಖೆ ಆಯುಕ್ತ ಮಂಜುನಾಥ್ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.












Click it and Unblock the Notifications