ಹೊರ ರಾಜ್ಯಗಳಿಗೆ ಮೇವು ಮಾರಾಟ ನಿಷೇಧಿಸಿದ ಕರ್ನಾಟಕ ಸರ್ಕಾರ
ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿತ್ತನೆ ಚಟುವಟಿಕೆಗಳು ಕುಂಠಿತವಾಗಿರುವ ಕಾರಣ ಕರ್ನಾಟಕ ಸರ್ಕಾರ ನೆರೆಯ ರಾಜ್ಯಗಳಿಗೆ ಮೇವು ಮಾರಾಟ ಮತ್ತು ಸಾಗಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದ ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಮೇವು ಮಾರಾಟ ಮತ್ತು ಸಾಗಾಣಿಕೆ ನಿಷೇಧಿಸುವಂತೆ ಸೂಚಿಸಲಾಗಿದೆ. ಜಾನುವಾರುಗಳಿಗೆ ಮೇವು ಬೆಳೆಯಲು ರೈತರಿಗೆ ಉಚಿತವಾಗಿ ಬೀಜಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಕಾಲುಬಾಯಿ ಜ್ವರದಿಂದ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕುರಿತು ವೆಂಕಟೇಶ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಪರಿಹಾರ ನೀಡುವುದನ್ನು ನಿಲ್ಲಿಸಿತ್ತು, ಇದೀಗ ಹೊಸ ಕಾಂಗ್ರೆಸ್ ಸರ್ಕಾರವು ಪ್ರತಿ ಜಾನುವಾರು ಸಾವಿಗೆ 10 ಸಾವಿರ ರೂ., ಕುರಿ ಮತ್ತು ಆಡುಗಳು ಸತ್ತರೆ 5 ಸಾವಿರ ರೂಪಾಯಿ ನೀಡುವುದಾಗಿ ಹೇಳಿದರು. ಕಳೆದ ವರ್ಷ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದಕ್ಕಾಗಿ 20 ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಕೇಂದ್ರ ಸರಕಾರ ಪಶು ಸಹಾಯಕ ಯೋಜನೆಗೆ ಅನುದಾನ ನೀಡಿದ್ದು, ಜಾನುವಾರು ನಿರ್ವಹಣೆಯಲ್ಲಿ ತರಬೇತಿ ಪಡೆದು ದನಗಳ ಮಾಲೀಕರು ಮತ್ತು ಪಶುವೈದ್ಯರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಪ್ರತಿ ಮಹಿಳಾ ಪಶು ಸಹಾಯಕರಿಗೆ ಮಾಸಿಕ 3,900 ರೂ. ನೀಲಾಗುವುದು ಎಂದರು.
ವರುಣಾ ಕ್ಷೇತ್ರದ ಉತ್ತನಹಳ್ಳಿಯಲ್ಲಿ ಸೆ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಶು ಸಹಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಕಾಲು ಮತ್ತು ಬಾಯಿ ರೋಗವನ್ನು ತಡೆಗಟ್ಟಲು ಸರ್ಕಾರವ ಯೋಜಿಸಿದ್ದು ನಾಲ್ಕನೇ ಸುತ್ತಿನ ಲಸಿಕೆಯನ್ನು ಸಹ ಪ್ರಾರಂಭಿಸುತ್ತದೆ ಎಂದು ಅವರು ಹೇಳಿದರು.
ಕೈಕೊಟ್ಟ ಮುಂಗಾರು ಮೇವು ಕೊರತೆ ಆತಂಕ
ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಅನಿಶ್ಚಿತ ಮಳೆಯಿಂದಾಗಿ ಮುಂಗಾರು ಬೆಳೆಗಳ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಕೂಡ ನಾಶವಾಗಿದೆ. ಮೆಕ್ಕೆಜೋಳ, ರಾಗಿ, ಭತ್ತ ಬಿತ್ತನೆ ಪ್ರಮಾಣ ಭಾರಿ ಕಡಿಮೆಯಾದ ಕಾರಣ ಬೇಸಿಗೆ ಸಂದರ್ಭದಲ್ಲಿ ರಾಜ್ಯದಲ್ಲಿ ಜಾನುವಾರುಗಳ ಮೇವಿಗೂ ಕೊರತೆಯಾಗುವ ಆತಂಕ ಎದುರಾಗಿದೆ. ಹಿಂಗಾರು ಉತ್ತಮವಾಗಿ ನಡೆಸಿದರೆ ಜಾನುವಾರುಗಳಿಗೆ ಮೇವು ಬೆಳೆದುಕೊಳ್ಳಬಹುದಾಗಿದೆ.
ಕಬಿನಿ, ಕೆಆರ್ ಎಸ್ ಜಲಾಶಯದಲ್ಲಿ ನೀರು ಕಡಿಮೆಯಾಗಿರುವ ಕಾರಣ ಜಲಾನಯನ ಪ್ರದೇಶದಲ್ಲಿರುವ ಕರ್ನಾಟಕ ರೈತರಿಗೆ ಬೆಳೆ ಬೆಳೆಯದಂತೆ ಸೂಚನೆ ನೀಡಲಾಗಿತ್ತು. ಅಕ್ಬೋಬರ್ ತಿಂಗಳಿನಲ್ಲಿ ಭಾರಿ ಮಳೆಯಾದರೆ ಮಾತ್ರ ರೈತರ ಬೆಳೆಗಳಿಗೆ ನೀರು ಬಿಡುವ ಸಾಧ್ಯತೆ ಇದ್ದು, ಇಲ್ಲವಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.












Click it and Unblock the Notifications