Karnataka Ratna: ನಟ ಅಂಬರೀಶ್‌ಗೆ ಕರ್ನಾಟಕ ರತ್ನ ಗೌರವ; ರಾಮಲಿಂಗಾ ರೆಡ್ಡಿ ಮಹತ್ವದ ಪ್ರಸ್ತಾವನೆ
ಬೆಂಗಳೂರು: "ಬೆಳ್ಳಿ ತೆರೆಯ ಮೇಲಿನ 'ರೆಬೆಲ್ ಸ್ಟಾರ್', ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅಚ್ಚುಮೆಚ್ಚಿನ 'ಮಂಡ್ಯದ ಗಂಡು' ಡಾ. ಅಂಬರೀಶ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸುವಂತೆ ಅರಣ್ಯ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಖುದ್ದು ಸಚಿವರು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಶಕಗಳ ಕಾಲ ಚಿತ್ರರಂಗದಲ್ಲಿದ್ದು ನಮ್ಮನ್ನೆಲ್ಲ ರಂಜಿಸಿದ ದಿವಂಗತ ನಟ ಅಂಬರೀಶ್ ಅವರು ಕನ್ನಡ ನಾಡು, ನುಡಿ, ಕಲೆ ಹಾಗೂ ರಾಜಕೀಯ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

2026ರ ರಾಜ್ಯೋತ್ಸವದಂದು ನೀಡಲು ಮನವಿ
ಅಂಬರೀಶ್ ಅವರ ಅಭಿಮಾನಿಗಳ ಆಶಯದಂತೆ ಮತ್ತು ಅವರ ಜನಪ್ರಿಯತೆಯನ್ನು ಗುರುತಿಸಿ, ಮುಂಬರುವ ರಾಜ್ಯೋತ್ಸವದ ವೇಳೆಗೆ ಅವರಿಗೆ 'ಕರ್ನಾಟಕ ರತ್ನ' (ಮರಣೋತ್ತರವಾಗಿ) ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ. ಅಂಬರೀಶ್ ಅವರಿಗೆ ಸಲ್ಲಬೇಕಾದ ಈ ಗೌರವ ನಾಡಿನ ಪ್ರತಿಯೊಬ್ಬ ಕನ್ನಡಿಗನ ಗೌರವವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ರಾಜ್ಯ ಸರ್ಕಾರ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಿತ್ತು. ಅಂದು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವವಿತ್ತು. ವಿಧಾನಸೌಧ ಮುಂಭಾಗ ಬೃಹತ್ ಕಾರ್ಯಕ್ರಮದಲ್ಲಿ ಮಳೆಯಲ್ಲೇ ನಟ ಅಪ್ಪುವಿಗೆ 'ಕರ್ನಾಟಕ ರತ್ನ' ಗೌರವ ನೀಡಲಾಗಿತ್ತು. ಇದಕ್ಕೆ ತಮಿಳು, ತೆಲುಗು ಚಿತ್ರರಂಗದ ಗಣ್ಯರು ಆಗಮಿಸಿದ್ದರು.


Click it and Unblock the Notifications
