
Karnataka Ratna : ಕರ್ನಾಟಕ ರತ್ನ ಅಪ್ಪು ಸ್ಮರಿಸಿದ ರಜನಿಕಾಂತ್, ಜ್ಯೂ. ಎನ್‌ಟಿಆರ್
ಬೆಂಗಳೂರು, ನವೆಂಬರ್ 01: ದಿ. ಡಾ. ಪುನೀತ್ ರಾಜಕುಮಾರ್ ತಮ್ಮ ಸರಳತೆ, ನಗು, ವ್ಯಕ್ತಿತ್ವದಿಂದಲೇ ಇಡಿ ರಾಜ್ಯವನ್ನೇ ಗೆದ್ದಿದ್ದಾರೆ. 'ಕರ್ನಾಟಕ ರತ್ನ' ಪ್ರಶಸ್ತಿಗೆ ಅರ್ಥವೇ ಡಾ. ಪುನೀತ್ ರಾಜಕುಮಾರ್ ಎಂದು ತೆಲುಗು ನಟ ಜ್ಯೂನಿಯರ್ ಎನ್‌ಟಿ ಆರ್ ಹೇಳಿದರು.
ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನಡೆದ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಪಾಲ್ಗೊಂಡಿದ್ದರು. ಕನ್ನಡದಲ್ಲೇ ಮಾತನಾಡಿದ ಅವರು ರಾಜ್ಯದ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದರು.
Breaking: ಪುನೀತ್‌ಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ
"ಹಿರಿಯರಿಂದ ಜನ್ಮನಾಮ ಬರುತ್ತದೆ. ಆದರೆ ಸರಳ ವ್ಯಕ್ತಿತ್ವ, ಉತ್ತಮ ಗುಣ, ಸರಳತೆ ಸಂಪಾದಿಸಿದ್ದ ಡಾ.ಪುನೀತ್ ರಾಜ್ ಕುಮಾರ್ ರಾಜ್ಯವನ್ನೇ ಗೆದ್ದಿದ್ದಾರೆ. ಅವರೊಬ್ಬ ಉತ್ತಮ ಮನುಷ್ಯ, ಉತ್ತಮ ತಂದೆ, ಉತ್ತಮ ಸ್ನೇಹಿತ ಅಲ್ಲದೇ ಉತ್ತಮ ನಟರಾಗಿದ್ದರು. ಪುನೀತ್ ರಾಜ್ ಕುಮಾರ್ ಕರ್ನಾಟಕದ ಸೂಪರ್ ಸ್ಟಾರ್" ಎಂದು ಸ್ನೇಹಿತ ಪುನೀತ್‌ರನ್ನು ಶ್ಲಾಘಿಸಿದರು.
ಡಾ. ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕದ ಸೂಪರ್ ಸ್ಟಾರ್ ಆಗಿದ್ದಾರೆ. ಅವರ ನಗುವಿನಲ್ಲಿ ಅಡಗಿದ್ದ ಶ್ರೀಮಂತಿಕೆಯನ್ನು ನಾವು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಅದಕ್ಕಾಗಿ ಅವರನ್ನು ನಗುವಿನ ಒಡೆಯ ಎಂದು ಕರೆಯುತ್ತಾರೆ. ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಹಾಗೂ ಆತ್ಮೀಯವಾಗಿ ಉಪಚರಿಸಿದ ಡಾ.ರಾಜ್ ಕುಟುಂಬಕ್ಕೆ ಅವರು ಧನ್ಯವಾದ ತಿಳಿಸಿದರು.
ಕಲಿಯುಗದ ಅಪ್ಪು, ದೇವರ ಮಗು: ರಜನಿಕಾಂತ್
ಅತೀ ಕಡಿಮೆ ವಯಸ್ಸಿನಲ್ಲೇ ಹೇಗೆ ಬದುಕಬೇಕು? ಎಂದು ತೋರಿಸಿ ಪುನೀತ್ ರಾಜ್ ಕುಮಾರ್ ದೇವರ ಮಗು. ಅವರು ಕಲಿಯುಗ ಅಪ್ಪು ಆಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ತಮಿಳು ಹಿರಿಯ ನಟ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದರು.
'ಕರ್ನಾಟಕ ರತ್ನ' ಇದು ಬಹಳ ಶ್ರೇಷ್ಟ ಪ್ರಶಸ್ತಿ. ಈ ಶ್ರೇಷ್ಠ ಪ್ರಶಸ್ತಿಯನ್ನು ದಿ. ಡಾ. ರಾಜಕುಮಾರ್ ಅವರಿಗೆ ಇದೇ ವೇದಿಕೆಯಲ್ಲಿ ನೀಡುವಾಗಲೂ ಸಹ ಅಂದು ಮಳೆ ಬಂದಿತ್ತು. ರಾಷ್ಟ್ರಕವಿ ಕುವೆಂಪು, ತುಮಕೂರಿನ ಶಿವಕುಮಾರ ಸ್ವಾಮೀಜಿ ನೀಡಲಾಗಿತ್ತು. ಅವರ ನಂತರ ಅತೀ ಕಡಿಮೆ ವಯಸ್ಸಿನಲ್ಲೇ ಸಾಧನೆ ಮಾಡಿದ ಡಾ.ಪುನೀತ್ ರಾಜಕುಮಾರ್ ಅವರಿಗೆ ನೀಡಲಾಗಿದೆ ಎಂದರು.

1979ರಲ್ಲಿ ಶಬರಿಮಲೆಗೆ ಮಾಲೆ ಹಾಕಿ ಬರುತ್ತಿದ್ದ ಡಾ. ರಾಜಕುಮಾರ್ ಅವರ ಜೊತೆಗೆ ಅಂದು ಪುನೀತ್ ರಾಜ್ ಕುಮಾರ್ ಸಹ ಆಗಮಿಸಿದ್ದರು. ಆಗ ಪುನೀತ್‌ಗೆ ನಾಲ್ಕು ವರ್ಷ. ಅಪ್ಪುನನ್ನು 48 ಕಿಲೋಮಿಟರ್ ಹೊತ್ತುಕೊಂಡೆ ಡಾ. ರಾಜ್ ನಡೆದಿದ್ದರು. ಆಗ ಮೊದಲ ಬಾರಿಗೆ ಅಪ್ಪುನನ್ನು ನೋಡಿದ್ದೆ.
ನಂತರ ಅಪ್ಪು ಚಿತ್ರದಲ್ಲಿ ಪುನೀತ್ ಅವರ ನಟನೆ, ಡಾನ್ಸ್ ನೋಡಿ ರೋಮಾಂಚನಗೊಂಡಿದ್ದೆ. ಡಾ. ರಾಜಕುಮಾರ್ ಅವರ ಮಾತಿನಂತೆ ನಾನು ಅಪ್ಪು ಚಿತ್ರ ಶತದಿನೋತ್ಸವ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ್ದೇ ಎಂದು ಅವರು ಪುನೀತ್ ರಾಜ್‌ಕುಮಾರ್ ಅವರ ಕುರಿತು ಸ್ಮರಿಸಿದರು.
ಮಹನೀಯರಂತೆ ಪುನೀತ್ ಎಲ್ಲರಿಗೂ ಮಾದರಿ; ಪುನೀತ್ ಅವರ ನಿಧನ ವೇಳೆ ನನಗೆ ಆಪರೇಷನ್ ಆಗಿದ್ದರಿಂದ ಮೂರು ದಿನದ ನಂತರ ತಡವಾಗಿ ವಿಷಯ ಗೊತ್ತಾಗಿ ತೀವ್ರ ಬೇಸರವಾಯಿತು. ಅಪ್ಪುವಿನ ಅಂತಿಮ ದರ್ಶನ ಪಡೆಯಲು ಮೂರು ದಿನ ಲಕ್ಷಾಂತರ ಮಂದಿ ಆಗಮಿಸಿದ್ದರು. ಇಷ್ಟು ಜನ ಆರಾಧನೆಯಿಂದ ಅಪ್ಪು ಅವರ ಸಾಮಾಜಿಕ ಕಾರ್ಯಗಳು, ಆರ್ಥಿಕ ಸಹಾಯ, ಅವರ ವ್ಯಕ್ತಿತ್ವ, ಸರಳತೆ ಇನ್ನಷ್ಟು ಜಗತ್ತಿಗೆ ತಿಳಿಯುವಂತಾಯಿತು ಎಂದು ಹೇಳಿದರು.
ಎನ್‌ಟಿಆರ್, ಎಂಜಿಆರ್ ಅವರು ಚಿತ್ರಗಳಲ್ಲಿ ದಾನ ಧರ್ಮ ಬಗ್ಗೆ ತೋರಿಸಿದ್ದನ್ನು ನೋಡಿದ್ದೇವೆ. ಅವರ ದೈವ ಭಕ್ತಿಯ ಚಿತ್ರಗಳನ್ನು ನೋಡಿದ್ದೇವೆ. ಅದೇ ರೀತಿ ಡಾ. ರಾಜಕುಮಾರ್ ಅವರು ಮಾಡದ ದೈವ ಭಕ್ತಿಯ ಪಾತ್ರಗಳೇ ಇಲ್ಲ. ಅವರ ಸರಳ ಬದುಕು ಇಂದಿಗೆ ಅನೇಕರಿಗೆ ಮಾದರಿ ಆಗಿದೆ. ಅಂತಹ ಮಹನೀಯರಂತೆಯೇ ಪುನೀತ್ ರಾಜಕುಮಾರ್ ಅತೀ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಬದುಕು, ಕೆಲಸಗಳಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.