ಪರಭಾಷಿಕರ ದಬ್ಬಾಳಿಕೆಗೆ ಬಿಸಿ ಮುಟ್ಟಿಸಲು ಮುಂದಾದ ಕರವೇ
ಕರ್ನಾಟಕದಲ್ಲಿ ಪರಭಾಷಿಕರ ಹಾವಳಿ ಹಾಗೂ ದಬ್ಬಾಳಿಕೆ ಮಿತಿ ಮೀರಿರುವ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಸಮರ ಸಾರಿದೆ. ಇದಕ್ಕಾಗಿ ಇದೇ ಫೆಬ್ರವರಿ 1ರಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಏಳಿ ಕನ್ನಡಿಗರೇ ಎದ್ದೇಳಿ, ಪರಭಾಷಿಕರ ದಬ್ಬಾಳಿಕೆಯನ್ನು ಬಗ್ಗು ಬಡಿಯಲು ಏಳಿ ಎದ್ದೇಳಿ, ಫೆಬ್ರುವರಿ 1ನೇ ತಾರೀಕು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಕನ್ನಡಿಗರು ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಇದು ಕನ್ನಡಿಗರ ಸಾರ್ವಭೌಮತೆಗಾಗಿ ನಡೆಯುವ ಹೋರಾಟ, ಬನ್ನಿ ಕನ್ನಡಿಗರೇ ಬನ್ನಿ ಎಂದು ಕರೆದಿದ್ದಾರೆ.

ರಾಜ್ಯದ ಎಲ್ಲ ಉದ್ಯಮಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಂದು ನೆಲೆಯೂರಿರುವ ಉತ್ತರ ಭಾರತೀಯರನ್ನು ಈ ನೆಲದಿಂದ ತೊಲಗಿಸಿ, ರಾಜ್ಯದ ಎಲ್ಲ ಉದ್ಯಮಗಳಲ್ಲಿಯೂ ಕನ್ನಡಿಗರಿಗೆ ಸಿಂಹಪಾಲು ಸಿಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದ ಎಲ್ಲ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕು. ಕನ್ನಡ ಭಾಷೆ ಬರದ ಉತ್ತರ ಭಾರತೀಯ ಸಿಬ್ಬಂದಿಗಳು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕು. ಇಲ್ಲವೇ ತಮ್ಮ ತಮ್ಮ ಗಂಟು ಮೂಟೆ ಕಟ್ಟಿ. ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ದಿನಬಳಕೆ ವಸ್ತುಗಳಲ್ಲಿನ ಇಂಗ್ಲಿಷ್ ಬರಹ ನಿಷೇಧಕ್ಕೆ ಆಗ್ರಹಿಸಿ ಒಂದು ವರ್ಷಗಳ ಕಾಲ ನಿರಂತರ ಜಿಲ್ಲಾ ಕೇಂದ್ರಗಳಿಂದ ಹಿಡಿದು ಗ್ರಾಮ ಮಟ್ಟದವರೆಗೂ ಈ ಹೋರಾಟವನ್ನು ನಡೆಸಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಮುಂದಿನ ಸಂಕ್ರಾಂತಿಯೊಳಗೆ ಮೂರು ಮುಖ್ಯ ವಿಷಯಗಳು ನಮ್ಮ ಚಳವಳಿಯ ವಿಷಯವಾಗಿವೆ. ಈ ಮೂರು ಹಕ್ಕೊತ್ತಾಯಗಳು ಈಡೇರುವವರೆಗೆ ಯಾರೂ ವಿರಮಿಸಬಾರದು. ಈ ಚಳವಳಿಯಿಂದ ಏನೇ ಸಮಸ್ಯೆ ಬಂದರೂ ಧೃತಿಗೆಡದೆ, ಕನ್ನಡಿಗರ ಬಹುಕಾಲದ ಬೇಡಿಕೆಗಳು ಈಡೇರುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಮಾರಾಟವಾಗುವ, ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರಹಗಳು ಕನ್ನಡದಲ್ಲಿಯೇ ಇರಬೇಕು ಎಂದು ಕರವೇ ಆಗ್ರಹಿಸಿದೆ. ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು? ಪ್ರಮಾಣವೇನು? ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಗೊತ್ತಾಗಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ, ಖಾಸಗಿ, ಗ್ರಾಮೀಣ, ಸಹಕಾರಿ ಬ್ಯಾಂಕ್‌ಗಳು, ಫೈನಾನ್ಸ್‌ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ 100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ 60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ, ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಎಂದು ಕರವೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಇನ್ನು ಕೆ.ಆರ್.ಪುರದಲ್ಲಿ ನಡೆಯುತ್ತಿದ್ದ ತೆಲುಗು ಸಮಾವೇಶಕ್ಕೆ ಕರವೇ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ ಅವರ ನೇತೃತ್ವದಲ್ಲಿ ತೆಲುಗು ಬ್ಯಾನರ್‌ಗಳನ್ನು ತೆರವುಗೊಳಿಸುವ ಹೋರಾಟ ನಡೆಸಿದರು. ಇತ್ತೀಚೆಗೆ ತೆಲುಗು ಭಾಷಿಕರ ಹಾವಳಿ ಕೂಡ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಬೇಕು ಎಂದು ಕರವೇ ಆಗ್ರಹಿಸಿದೆ.












Click it and Unblock the Notifications