ರಾಜ್ಯಸಭೆ ಚುನಾವಣೆ 2018 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಬೆಂಗಳೂರು, ಮಾರ್ಚ್ 23 : ಕರ್ನಾಟಕ ವಿಧಾನಸಭೆಯಿಂದ 4 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ ಪಕ್ಷದ 3, ಬಿಜೆಪಿಯ ಒಬ್ಬ ಅಭ್ಯರ್ಥಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ಮುಕ್ತಾಯಗೊಂಡಿತು. ಬಳಿಕ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು. 8.30ಕ್ಕೆ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ.
ವಿಧಾನಸೌಧದ 1ನೇ ಮಹಡಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜೀವ್ ಚಂದ್ರಶೇಖರ್ 50 ಮತಗಳನ್ನು ಪಡೆದು ಜಯಗಳಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಡಾ.ಎಲ್.ಹನುಮಂತಯ್ಯ 44, ನಾಸೀರ್ ಹುಸೇನ್ 42 ಮತ್ತು ಜಿ.ಸಿ.ಚಂದ್ರಶೇಖರ್ 46 ಮತಗಳನ್ನು ಪಡೆದು ಜಯಗಳಿಸಿದರು.

ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಂ.ಫಾರೂಕ್ ಕೇವಲ 2 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಜೆಡಿಎಸ್ ಪಕ್ಷ ರಾಜ್ಯಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡಿತ್ತು.
ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನಸೂರ್ ಅವರಿಗೆ ಎರಡು ಬಾರಿ ಮತಪತ್ರ ನೀಡಿದ್ದಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿತ್ತು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು ಮತ್ತು ಮತದಾನ ಬಹಿಷ್ಕಾರ ಮಾಡಿತ್ತು.
ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನಸೂರ್ ಅವರ ಮತಪತ್ರಗಳನ್ನು ಹೊರಗಿಟ್ಟು ಮತಎಣಿಕೆ ನಡೆಸಲಾಯಿತು.











Click it and Unblock the Notifications