Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಕೆಲವೇ ಕ್ಷಣಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಎಚ್ಚರಿಕೆ ಸಂದೇಶಗಳು ಇಲ್ಲಿವೆ ಗಮನಿಸಿ
ಕರ್ನಾಟಕ, ಮೇ, 23: ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುವ ಮೂಲಕ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ ಹಲವೆಡೆ ಕೃಷಿ ಭೂಮಿಗಳು, ಬೆಳೆಗಳು ಜಲಾವೃತವಾಗಿ ಅನ್ನದಾತ ಸಂಕಷ್ಟಕ್ಕೆ ಸಿಲುಕಿದರೆ, ಮತ್ತೊಂದೆಡೆ ಮನೆ, ಮಠಗಳನ್ನು ಕಳೆದುಕೊಂಡ ಅದೆಷ್ಟೋ ಜನರು ಬೀದಿ ಪಾಲಾದ ಘಟನೆಗಳು ಕೂಡ ನಡೆದಿವೆ. ಹಾಗೆಯೆ ಮತ್ತೆ ಇನ್ನೆರಡು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹಾಗಾದರೆ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ ಯಾವ ಭಾಗದಲ್ಲಿ ಹೆಚ್ಚು ಮಳೆ ಮುಂದುವರೆಯಲಿದೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ. ಇನ್ನೆರಡು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಮಳೆ ಪಡೆಯಲಿರುವ ಜಿಲ್ಲೆಗಳ ವಿವರ
ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಅಬ್ಬರದ ಮಳೆಯಾಗಿದ್ದು, ಇದರಿಂದ ನಗರದಲ್ಲಿ ದೊಡ್ಡ ದೊಡ್ಡ ಅವಘಡಗಳೇ ಸಂಭವಿಸಿವೆ. ಮತ್ತೆ ನಗರದಲ್ಲಿ ಸೋಮವಾರ ಸಂಜೆಯಿಂದಲೇ ಧಾರಕಾರ ಮಳೆ ಆರಂಭವಾಗಿದೆ. ಹಾಗೆಯೇ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಸೇರದಂತೆ ವಿವಿಧೆಡೆ ಎರಡು ದಿನಗಳ ಕಾಲ ಧಾರಾಕಾರ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ರಾಯಚೂರು, ಯಾದಗಿರಿಯಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ. ಹಾಗೆಯೇ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಅದರಲ್ಲೂ ಪ್ರಮುಖವಾಗಿ ಸಿಲಿಕಾನ್ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದೆ ಎನ್ನುವ ಮಾಹಿತಿ ಇದ್ದು, ನಗರದಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದ ಮಹಾದೇವಪುರ ವಲಯದ ಕಾಡುಗೋಡಿ, ವರ್ತೂರು ಸುತ್ತಮುತ್ತಲಿನ ಪ್ರದೇಶ ಮತ್ತು ಯಲಹಂಕ ವಲಯಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದೆ.
ಹಾಗೆಯೇ ಬೆಂಗಳೂರಿನಲ್ಲಿ ಮಳೆರಾಯ ಮೊನ್ನೆ ಅವಾಂತರವನ್ನೇ ಸೃಷ್ಟಿಸಿದ ಕಾರಣ, ಈಗಾಗಲೇ ಎಲ್ಲಾ ಫೋನ್‌ಗಳಿಗೂ ಹವಾಮಾನ ಇಲಾಖೆಯಿಂದ ಒಂದು ಎಚ್ಚರಿಕೆಯ ಸಂದೇಶವನ್ನು ಕಳುಹಿಸಲಾಗಿದೆ. ಆ ಎಚ್ಚರಿಕೆ ಸಂದೇಶ ಏನಂತೀರಾ ಇಲ್ಲಿದೆ ನೋಡಿ ವಿವರ.
ಮುಂದಿನ 24 ಗಂಟೆಯಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ. ಗಾಳಿಯ ವೇಗವು ಗಂಟೆಗೆ 30-40 ಕಿಲೋ ಮೀಟರ್ ತಲುಪುವ ಸಾಧ್ಯತೆಯಿದ್ದು, ಈ ಸಮಯದಲ್ಲಿ ಮರದಡಿ ನಿಲ್ಲದಂತೆ ಎಚ್ಚರಿಕೆ ರವಾನಿಸಲಾಗಿದೆ. ಅಲ್ಲದೆ ಮನೆಯಿಂದ ಹೊರಗೆ ಇರುವವರು ಆದಷ್ಟು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಮತ್ತು ಗಾಳಿ ಮಳೆ ಇರುವಾಗ ವಾಹನವನ್ನು ಚಲಾಯಿಸಬಾರದೆಂದು ತಿಳಿಸಲಾಗಿದೆ.
ಅಷ್ಟೇ ಅಲ್ಲದೆ ಇನ್ನು ಕೆಲವೇ ಕ್ಷಣಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಸಾಧಾರಣ ಗುಡುಗು, ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ.
ಮತ್ತೊಂದೆಡೆ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮೊಬೈಲ್‌ಗಳಿಗೆ ಸಂದೇಶವನ್ನು ರವಾನಿಸಲಾಗಿದೆ.
ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು
1. ಗುಡುಗು, ಸಿಡಿಲು ಇದ್ದಾಗ ಮನೆ ಹೊರಗಡೆ ಹೋಗಬೇಡಿ.
2. ಆದಷ್ಟು ನಿಮ್ಮ ಮನೆಯ ಸುತ್ತಮುತ್ತಲಿನ ಒಣಗಿರುವ ಮರಗಳು ಇದ್ದರೆ, ಅವುಗಳನ್ನು ತೆಗೆಯುವುದು ಸೂಕ್ತವಾಗಿದೆ.
3. ಒಂದು ವೇಳೆ ನೀವು ಮೆಯಲ್ಲಿದ್ದರೆ, ಮನೆಯೊಳಗಿನ ಕಿಟಕಿಯಿಂದ ಸ್ವಲ್ಪ ಅಂತರ ಕಾಯ್ದುಕಳ್ಳುವುದು ಒಳಿತು.
4. ಅದರಲ್ಲೂ ನೀವು ಎಲ್ಲಾದರೂ ಹೊರಗಡೆ ಹೋಗಿದಂತಹ ಸಂದರ್ಭದಲ್ಲಿ ಮರದ ಕೆಳಗಡೆ ನಿಲ್ಲಬೇಡಿ.
5. ಹಾಗೆಯೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ.
6. ಮರಗಳು, ವಿದ್ಯುತ್ ಕಂಬ ಸೇರಿದಂತೆ ಮತ್ತಿತರ ಕಂಬಗಳ ಕೆಳಗಡೆ ನಿಲ್ಲುವುದು ಸೂಕ್ತವಲ್ಲ.
7. ಇನ್ನು ಪ್ರಮುಖವಾಗಿ ಈ ಸಮಯದಲ್ಲಿ ಅದರಲ್ಲೂ ಕೆರೆ, ನದಿ, ಹಳ್ಳ, ಕೊಳ್ಳ ಸೇರಿದಂತೆ ಇನ್ನಿತರ ನೀರಿನ ಮೂಲಗಳ ಬಳಿ ಹೋಗಬೇಡಿ.
ಈಗಾಗಲೇ ಮಳೆ ಸುರಿದಿದ್ದು, ಇದರಿಂದ ಎಷ್ಟೋ ಜನರು ಪ್ರಾಣ ಕಳೆದುಕೊಂಡ ಘಟನೆಗಳು ಕಳೆದ ಎರಡು ದಿನಗಳಿಂದ ನಡೆದಿದೆ. ಅದರಲ್ಲೂ ಮಕ್ಕಳು ಹೆಚ್ಚಾಗಿ ಎಂಜಾಯ್ ಮಾಡಲು ಕೆರೆ, ಹಳ್ಳಗಳ ಕಡೆಗೆ ಹೋಗಲು ಹಾತೊರೆಯುತ್ತಿರುತ್ತಾರೆ. ಆದ್ದರಿಂದ ಮನೆಯವರು ಎಚ್ಚೆತ್ತುಕೊಂಡು ಈ ಸಮಯದಲ್ಲಿ ಮಕ್ಕಳನ್ನು ಹೊರಗಡೆ ಬಿಡದಂತೆ ಜೋಪಾನ ಮಾಡುವುದು ಸೂಕ್ತವಾಗಿದೆ.












Click it and Unblock the Notifications