Rain Alert: ಮುಂದಿನ 24 ಗಂಟೆ ಚಿಕ್ಕಮಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ
ಚಿಕ್ಕಮಗಳೂರು, ನವೆಂಬರ್ 24: ಈ ವರ್ಷ ಮುಂಗಾರಿನಲ್ಲಿ ಕೈಕೊಟ್ಟಿದ್ದ ಮಳೆರಾಯ ಹಿಂಗಾರಿನಲ್ಲಿ ಸ್ವಲ್ಪ ಮಟ್ಟಿಗೆ ಕೈ ಹಿಡಿದಿದ್ದಾನೆ. ಈಗಾಗಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದೊಂದು ವಾರದಿಂದ ಹಿಂಗಾರು ಮಳೆ ಆರಂಭವಾಗಿದ್ದು, ಇನ್ನೂ ಕೆಲವು ದಿನಗಳು ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 2 ದಿನ ಭಾರೀ ಮಳೆಯಾಗಲಿದ್ದು, ಮುಂದಿನ 24 ಗಂಟೆಗಳಲ್ಲಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ತೊಂಡೆಭಾವಿ, ಧರ್ಮಸ್ಥಳ, ಸೋಮವಾರಪೇಟೆ, ವಿರಾಜಪೇಟೆ, ಗೌರಿಬಿದನೂರು, ಅರಕಲಗೂಡು, ಬಂಡೀಪುರ, ಕೊಣನೂರು, ಕುಣಿಗಲ್ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.

ಇನ್ನು ಕರಾವಳಿ ಜಿಲ್ಲೆಗಳಲ್ಲಿಯೂ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು (ನವೆಂಬರ್ 24) ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಮಳೆ ಆರಂಭವಾಗಿದೆ.
ಇನ್ನು ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.ಎರಡು ದಿನಗಳ ನಂತರವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ತುಸು ದುರ್ಬಲಗೊಂಡರು ಸಹಿತ ಮತ್ತೆ ಡಿಸೆಂಬರ 1ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಮಿಳುನಾಡು ಹಾಗೂ ಕೇರಳ ಭಾಗದ ಸಮುದ್ರ ಮೇಲ್ಮೈ ಮಟ್ಟಕ್ಕಿಂತ 3.1 ಕಿಲೋ ಮೀಟರ್ ಸುಳಿಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬಳ್ಳಾರಿಯಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಇಂದು ಕೂಡ ಭಾರೀ ಮಳೆ
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಳೆದರಡು ದಿನಗಳಿಂದ ಮಳೆಯಾಗುತ್ತಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಸಿಲಿಕಾನ್ ಸಿಟಿಯ ಜನಕ್ಕೆ ವರುಣ ತಂಪರೆದಿದ್ದಾನೆ. ಸದ್ಯ ಬೆಂಗಳೂರು ಕೂಲ್ ಕೂಲ್ ಆಗಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ. ಬೆಂಗಳೂರು ನಗರದಾದ್ಯಂತ ಇಂದು ಸಂಜೆ ಕೂಡ ಮಳೆಯಾಗುವ ಸಾಧ್ಯತೆ ಇದೆ.
ಎಚ್ಎಎಲ್ನಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 27.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ ಎರಡು ದಿನ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಂಜೆ ವೇಳೆಯ ಪ್ರಯಾಣಗಳನ್ನು ಮುಂದೂಡುವುದು ಅಥವಾ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.












Click it and Unblock the Notifications