Karnataka Rain: ಇಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rain: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಷ್ಟೇ ಮಳೆರಾಯ ಕರುಣೆ ತೋರಿದ್ದು, ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರಿಗೆ ತಂಪೆರೆದಿದ್ದಾನೆ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬರೀ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಈ ಭಾಗಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಏಪ್ರಿಲ್ 12ರಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆಯನ್ನು ನೀಡಿದೆ.
ಇದೀಗ ರಾಜ್ಯ ರಾಜಧಾನಿ, ತೋಟಗಳ ನಗರಿ, ಐಟಿ ಸಿಟಿ ಅಂತಲೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇನ್ನು ಇಷ್ಟು ದಿನ ಬಿಸಿಲಿನ ಝಳಕ್ಕೆ ಬೆಂದಿದ್ದ ಬೆಂಗಳೂರಿಗೆ ಇದೀಗ ಹವಾಮಾನ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಏಪ್ರಿಲ್ 12ರಂದು ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 12) ಬೆಳಂಬೆಳಗ್ಗೆ ಭಾರೀ ಬಿಸಿಲು ಇದ್ದು, ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ನಿನ್ನೆ ರಾಜ್ಯದ ವಿಜಯಪುರ, ಚಿಕ್ಕಮಗಳೂರು, ಗದಗ, ಕಲಬುರಗಿ, ಬೆಳಗಾವಿ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಇನ್ನು ಸಿಡಲಿಗೆ ವಿಜಯಪುರ ಜಿಲ್ಲೆಯಲ್ಲಿ ಒಂದೇ ದಿನ ಬಾಲಕ ಸೇರಿ ಇಬ್ಬರು ಬಲಿಯಾಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಇನ್ನು ಇಂದಿನಿಂದ ಮುಂದಿನ ಎರಡು ದಿನಗಳ ಕಾಲ ಹಲವು ಜಿಲ್ಲೆಗಳಿಗೆ ಮಳೆರಾಯ ತಂಪೆರೆಯಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಶುಭಸುದ್ದಿಯಿಂದ ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರು ಸಂತಗೊಂಡಿದ್ದಾರೆ. ಒಟ್ಟಿನಲ್ಲಿ ಯುಗಾದಿ ನಂತರ ಭಾರೀ ಮಳೆಯಾಗಲಿದೆ ಎನ್ನುವ ಹಲವು ಭವಿಷ್ಯಗಳು ನಿಜವಾಗುತ್ತಿವೆ. ಮತ್ತೊಂದೆಡೆ ಕೆಲವೆಡೆ ಮಳೆಯೇ ಇಲ್ಲದೆ ಜನರು ಮೋಡದ ಕಡೆ ಮುಖ ಮಾಡಿ ಕುಳಿತಿದ್ದಾರೆ.












Click it and Unblock the Notifications