ಸಾಲು ಸಾಲು ರಜೆ: ಖಾಸಗಿ ಬಸ್ ಟಿಕೆಟ್ ದರ ಕೇಳಿ ಪ್ರಯಾಣಿಕರು ಶಾಕ್
ಬೆಂಗಳೂರು ಏಪ್ರಿಲ್ 17: ಬೆಂಗಳೂರಿನಲ್ಲಿ ವಾರಾಂತ್ಯ ಬಂದರೆ ಸಾಕು ಜನ ಊರುಗಳತ್ತ ಪ್ರಯಾಣ ಮಾಡಲು ಶುರುಮಾಡುತ್ತಾರೆ. ಅದರಲ್ಲೂ ಸಾಲು ಸಾಲು ರಜೆಗಳಿದ್ದರೆ ಮುಗಿತು ಪ್ರಯಾಣಿಕರ ದಂಡೇ ಮೆಜೆಸ್ಟಿಕ್ ಹಾಗೂ ಆನಂದ್ ರಾವ್ ಸರ್ಕಲ್‌ನಲ್ಲಿ ಸೇರಿರುತ್ತದೆ. ಇದೇ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ದುಪ್ಪಟ್ಟು ಮಾಡುತ್ತವೆ. ಇದರಿಂದಾಗಿ ಊರಿಗೇ ತೆರಳಲೇಬೇಕು ಅಂದುಕೊಂಡವರಿಗೆ ಪ್ರಯಾಣ ದರದ ಹೊಡೆತ ಭರ್ಜರಿಯಾಗೇ ಬೀಳುತ್ತದೆ.
ಹೌದು ನಾಳೆ ಗುಡ್ ಫ್ರೈಡೇ. ಇನ್ನೂ ಶನಿವಾರ ಭಾನುವಾರ ಬೆಂಗಳೂರಿನ ಬಹುತೇಕ ಕೆಲಸಗಾರರಿಗೆ ರಜೆಗಳಿರುತ್ತವೆ. ಹೀಗಾಗಿ ರಜೆ ನಿಮಿತ್ತ ದೂರದೂರುಗಳಿಗೆ ಪ್ರಯಾಣ ಮಾಡಲು ಯೋಚಿಸುತ್ತಾರೆ. ಆದರೆ ಹೀಗೆ ದೂರದ ಪ್ರಯಾಣ ಮಾಡುವ ಪ್ರಯಾಣಿಕರು ಖಾಸಗಿ ಬಸ್‌ಗಳ ಪ್ರಯಾಣ ದರ ಕೇಳಿ ಶಾಕ್ ಆಗಿದ್ದಾರೆ.

ಇತ್ತೀಚಿಗೆ ರಾಜ್ಯದಲ್ಲಿ ಎಲ್ಲಾ ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಾಗಿದೆ. ಹೀಗಾಗಿ ಒಂದೊಳ್ಳೆ ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಬೇಕು ಅಂದುಕೊಂಡರೆ 1000 ರೂಪಾಯಿ ಬೇಕೇ ಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಎಸಿ, ನಾನ್ ಎಸಿ, ಸ್ಲೀಪರ್ ಕೋಚ್ ಪ್ರಯಾಣ ದರ 1500 ರೂಪಾಯಿ ತಲುಪಿರುತ್ತದೆ. ಅದರಲ್ಲೂ ಬಸ್‌ಗಳ ಅನುಕೂಲತೆಯ ಆಧಾರದ ಮೇಲೆ ಪ್ರಯಾಣ ದರ ಹೆಚ್ಚಾಗುತ್ತದೆ. ಕೆಎಸ್‌ಆರ್‌ಟಿಸಿ ಪ್ರಯಾಣ ದರ ಹೀಗಿರಬೇಕಾದರೆ ಇನ್ನೂ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ನಾವು ಹಿಂದೆ ತಿರುಗಿ ನೋಡುವುದು ಕಷ್ಟವಿದೆ.
ಸಾಲು ಸಾಲು ರಜೆಗಳು ಬಂದರೆ ಒಂದು ತಿಂಗಳಿಗಿಂತ ಮುಂಚೆ ಬುಕ್ಕಿಂಗ್ ಶುರುವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಸಾವಿರ ರೂಪಾಯಿಗಿಂತ ಹೆಚ್ಚು ಪ್ರಯಾಣ ದರ ಇರುವಾಗ ಇನ್ನೂ ವಿಶೇಷ ದಿನಗಳಲ್ಲಿ ಈ ಬೆಲೆ 3000 ರೂಪಾಯಿಗೆ ಮುಟ್ಟಿರುತ್ತದೆ. ಇನ್ನೂ ಹಬ್ಬ ಹರಿದಿನಗಳು ಬಂದರೆ ಸಾಕು ಬಸ್‌ಗಳು ಸಾಕಾಗುವುದೇ ಇಲ್ಲ. ಈ ಸಮಯದಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರಿಗೆ 5000 ರೂಪಾಯಿವರೆಗೂ ಪ್ರಯಾಣ ದರ ಇರುತ್ತದೆ.

ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ರಜೆಗಳ ಸಮಯದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಜೇಬು ಖಾಲಿಯಾಗುವುದು ಖಚಿತ ಎಂಬಂತಾಗಿದೆ. ಮತ್ತೊಂದು ಶಾಕಿಂಗ್ ವಿಚಾರ ಅಂದರೆ ಪ್ರಯಾಣ ದರ ಹೆಚ್ಚಳಕ್ಕೆ ಖಾಸಗಿ ಬಸ್ ಮಾಲೀಕರು ನಿರ್ಧರಿಸಿದ್ದಾರೆ. ಬೆಲೆ ಏರಿಕೆ ಹಾಗೂ ಡೀಸೆಲ್ ದರ ಏರಿಕೆ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರಯಾಣ ದರ ಹೆಚ್ಚಿಸಲು ಖಾಸಗಿ ಬಸ್ ಮಾಲೀಕರು ಮುಂದಾಗಿದ್ದಾರೆ. ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನ ಸಾಕಷ್ಟು ಆರ್ಥಿಕ ಹೊರೆಯನ್ನು ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪ್ರಯಾಣ ದರವೂ ಹೆಚ್ಚಾದರೆ ಜನಸಾಮಾನ್ಯರು ಮತ್ತಷ್ಟು ಆರ್ಥಿಕ ಸಮಸ್ಯೆಗಳಿಗೆ ಸಿಲುಕಿಕೊಳ್ಳುವುದು ಖಚಿತ. ಹಾಗಾದರೆ ಯಾವ ಮಾರ್ಗದಲ್ಲಿ ಪ್ರಯಾಣ ದರ ಎಷ್ಟಿದೆ ಎಂದು ಈಗ ತಿಳಿಯೋಣ.
ಇದೀಗ ರಜೆಗಳು ಶುರುವಾಗಿದೆ. ಹೆಚ್ಚು ಜನ ಗೋವಾ ಪ್ರವಾಸ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಭಾಗದಲ್ಲಿ ತೆರಳಬೇಕು ಅಂದರೆ ಸಾಮಾನ್ಯ ದಿನಗಳಲ್ಲಿ ಪ್ರಯಾಣ ದರ 600-700ರೂಪಾಯಿ ಇರುತ್ತದೆ. ಆದರೆ ಪ್ರಸ್ತುತ ಗೋವಾಕ್ಕೆ 1500 ರೂಪಾಯಿಕ್ಕಿಂತ ಹೆಚ್ಚು ಪ್ರಯಾಣ ದರ ಇದೆ. ಈ ಪ್ರಯಾಣ ದರ ಬಸ್ ಅನುಕೂಲತೆಗೆ ತಕ್ಕಂತೆ ಇನ್ನೂ ಹೆಚ್ಚಾಗಿರುತ್ತದೆ.
ಇನ್ನೂ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಕಡೆಗೆ ಸಾಮಾನ್ಯ ದಿನಗಳಲ್ಲಿ ಸಾವಿರ ರೂಪಾಯಿ ಪ್ರಯಾಣ ದರ ಇದ್ದರೆ, ಪ್ರಸ್ತುತ ದರ 2000 ಸಾವಿರಕ್ಕಿಂತ ಹೆಚ್ಚಾಗಿದೆ. ಈ ಮಾರ್ಗದಲ್ಲೂ ಬಸ್‌ಗಳ ಅನುಕೂಲತೆಗೆ ತಕ್ಕಂತೆ ಪ್ರಯಾಣ ದರ ಭಿನ್ನವಾಗಿರುತ್ತದೆ. ಕಳೆದ ವರ್ಷ ದಸರಾ, ದೀಪಾವಳಿ, ಕ್ರಿಸ್‌ಮಸ್ ಸಮಯದಲ್ಲಿ ದರಗಳು 5000 ರೂಪಾಯಿ ತಲುಪಿತ್ತು.
ಹೀಗೆ ವಿಶೇಷ ದಿನಗಳಲ್ಲಿ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಮಾಡುವುದು ಕಷ್ಟವಾಗಿದೆ. ಖಾಸಗಿ ಬಸ್ ಟಿಕೆಟ್ ದರ ವಿಶೇಷ ದಿನಗಳಲ್ಲಿ ಸಾಮಾನ್ಯ ಜನರ ಕೈಗೆಡಕದಷ್ಟು ಏರಿಕೆಯಾಗಿರುತ್ತದೆ. ಇದರಿಂದಾಗಿ ಪ್ರಯಾಣಿಕರು ಖಾಸಗಿ ಬಸ್ ಟಿಕೆಟ್ ದರ ಏರಿಕೆಗೆ ಕಡಿವಾಣ ಹಾಕಲು ಮನವಿ ಮಾಡುತ್ತಿದ್ದಾರೆ.












Click it and Unblock the Notifications