DK Shivakumar: ರಾಮನಗರದಲ್ಲಿ ಟ್ರಬಲ್ ಶೂಟರ್ ಅಬ್ಬರ: ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಡಿ ಕೆ ಶಿವಕುಮಾರ್
ರಾಮನಗರ, ಮೇ 08: ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರ ಇಂದು ( ಸೋಮವಾರ) ಸಂಜೆ 6 ಗಂಟೆಗೆ ತೆರೆ ಬೀಳಲಿದೆ. ರಾಜಕೀಯ ಪಕ್ಷಗಳು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದು, ಜೆಡಿಎಸ್ ಭದ್ರಕೋಟೆ ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಬ್ಬರದ ಭಾಷಣದ ಮೂಲಕ ಮತದಾರರ ಓಲೈಕೆಗೆ ಕಸರತ್ತು ನಡೆಸುತ್ತಿದ್ದಾರೆ.
ಈ ಕುರಿತು ರಾಮನಗರಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಶಿವಲಿಂಗೇಗೌಡ, ವಾಸು, ಶ್ರೀನಿವಾಸ ಗೌಡರು, ಮಧುಬಂಗಾರಪ್ಪ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಕೂಡ ಅಧಿಕಾರಕ್ಕೆ ಬರುವುದಿಲ್ಲ, ಜಗದೀಶ್ ಶೆಟ್ಟರ್, ಸವದಿ, ಪುಟ್ಟಣ್ಣ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಹಾಗೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದವರೆಲ್ಲಾ ದಡ್ಡರಾ? ನನ್ನ ವಿರುದ್ಧ ಸ್ಪರ್ಧಿಸಿದ್ದ ಪಿಜಿಆರ್ ಸಿಂಧ್ಯಾ, ಮಂಜುನಾಥ್ ನಾರಾಯಣ ಗೌಡರು ಜೆಡಿಎಸ್ ತೊರೆದು ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಕೂರಿಸಲು ಕಾಂಗ್ರೆಸ್ ಸೇರಿದ್ದಾರೆ ಎಂದು ತಿಳಿಸಿದರು.
ರಾಮನಗರದಲ್ಲಿ ಪ್ರವಾಹ ಬಂದಾಗ ಇಲ್ಲಿನ ಶಾಸಕರು ಬಂದು ಫೋಟೋ ಹೊಡೆದುಕೊಂಡು ಹೋದರು. ಆದರೆ ಇಕ್ಬಾಲ್ ಹುಸೇನ್ ಹಾಗೂ ಸುರೇಶ್ ನಿಮ್ಮ ಮನೆ ಮುಂದೆ ಇದ್ದ ಕಸ ಎತ್ತಿದರು. ನಿಮಗೆ ಪರಿಹಾರ ಕೊಡಿಸಲು ಹೋರಾಟ ಮಾಡಿದರು. ಕಾಂಗ್ರೆಸ್ ಪಕ್ಷ ಈ ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ, ನಿಮಗೆ ಆರ್ಥಿಕವಾಗಿ ಶಕ್ತಿ ತುಂಬುತ್ತೇವೆ.
ಇಕ್ಬಾಲ್ ಹುಸೇನ್ ನಾಯಕ ಅಲ್ಲ, ಕಾರ್ಯಕರ್ತ ಎಂದು ಹೇಳುತ್ತೇನೆ. ದಿನಬೆಳಗಾದರೆ ಅವರು ನಿಮಗೆ ಸಿಗುತ್ತಾರೆ, ಕೆಲಸ ಮತ್ತು ಸೇವೆ ಮಾಡುತ್ತಾರೆ. ಇಲ್ಲಿ ಇಕ್ಬಾಲ್ ಹುಸೇನ್ ನೆಪಕ್ಕೆ ಮಾತ್ರ ಅಭ್ಯರ್ಥಿ. ಇಲ್ಲಿ ಸ್ಪರ್ಧಿಸುತ್ತಿರುವುದು ಡಿ.ಕೆ. ಶಿವಕುಮಾರ್. ನನ್ನ ರಾಜಕಾರಣದ ಅವಧಿಯಲ್ಲಿ ಅನೇಕ ಸಚಿವಾಲಯ ನಿಭಾಯಿಸಿದ್ದೇನೆ. ಈ ಅವಧಿಯಲ್ಲಿ ಈ ಭಾಗದ ಪ್ರತಿಯೊಬ್ಬ ರೈತನಿಗೆ ಒಂದೂವರೆ ಲಕ್ಷ ವೆಚ್ಚದಲ್ಲಿ ಉಚಿತ ಟ್ರಾನ್ಸ್ ಫಾರಂ ಉಚಿತವಾಗಿ ಅಳವಡಿಸಿದ್ದೇವೆ.

ರೈತನಿಗೆ ಯಾವುದೇ ಸರ್ಕಾರಿ ಉದ್ಯೋಗದ ಸೌಲಭ್ಯಗಳಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ರೈತನನ್ನು ನಾವು ಬದುಕಿಸಬೇಕು. ಗೊಬ್ಬರ ಬೆಲೆ ಹೆಚ್ಚಾಗಿದೆ, ಬೆಂಬಲ ಬೆಲೆ ಸಿಗುತ್ತಿಲ್ಲ ಇದರ ಬಗ್ಗೆ ಯಾರಾದರೂ ಧ್ವನಿ ಎತ್ತಿದ್ದಾರಾ? ಹೋರಾಟ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಕೋವಿಡ್ ಸಮಯದಲ್ಲಿ ನಿಮ್ಮ ಮನೆ ಬಾಗಿಲಿಗೆ ಯಾರಾದರೂ ಬಂದು ಸೇವೆ ಮಾಡಿದ್ದಾರಾ? ಆದರೆ ಡಿ.ಕೆ. ಸುರೇಶ್ ಹಾಗೂ ಇಕ್ಬಾಲ್ ಹುಸೇನ್ ನಿಮ್ಮ ಮನೆ ಬಾಗಿಲಿಗೆ ಆಹಾರ ಕಿಟ್, ಔಷಧಿ, ದಿನಸಿ, ತರಕಾರಿ ಕೊಟ್ಟಿದ್ದಾರೆ.
ಬಿಜೆಪಿ ಸರ್ಕಾರ ಕೋವಿಡ್ ನಿಂದ ಸತ್ತವರಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡುತ್ತಿರಲಿಲ್ಲ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರವನ್ನು ರಾಜ್ಯಕ್ಕೆ ತಂದು ಅಂತ್ಯ ಸಂಸ್ಕಾರ ಮಾಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ನಿಮ್ಮ ಊರಿನಲ್ಲಿ ನನ್ನ ತಮ್ಮ ಪಿಪಿಇ ಕಿಟ್ ಧರಿಸಿ ಶವಸಂಸ್ಕಾರ ಮಾಡಿದ್ದಾನೆ. ಈ ವಿಚಾರವಾಗಿ ಕುಮಾರಣ್ಣ ಉತ್ತರಿಸಲು ಸಾಧ್ಯವೇ? ನನಗೆ ರಾಮನಗರ ಬದುಕಿನ ಬಗ್ಗೆ ನನಗೆ ನಂಬಿಕೆ ಇದೆ. ಈ ಜಿಲ್ಲೆ ನಾಯಕರುಗಳನ್ನು ತಯಾರು ಮಾಡಿರುವ ಜಿಲ್ಲೆ. ನಿಮ್ಮ ಮೇಲೆ ನನಗೆ ನಂಬಿಕೆ ಇದೆ. ನೀವು ಸಂಕಲ್ಪ ಮಾಡಿ ಬದಲಾವಣೆ ಮಾಡಬೇಕು.
ಕ್ಷೇತ್ರದ ಎಲ್ಲಾ ಕಾರ್ಯಕರ್ತರು ಇಲ್ಲಿ ನನಗೆ ಸ್ಪರ್ಧಿಸುವಂತೆ ಹೇಳಿದರು. ನಂತರ ಹೈಕಮಾಂಡ್ ಅವರು ನಿಖಿಲ್ ವಿರುದ್ಧ ಸುರೇಶ್ ಅವರನ್ನು ಸ್ಪರ್ಧಿಸುವಂತೆ ತಿಳಿಸಿದರು. ಆದರೆ ನಾವು ಕಳೆದ ಬಾರಿ ಕುಮಾರಸ್ವಾಮಿಗೆ ಬೆಂಬಲ ನೀಡಿ, ಅನಿತಾ ಕುಮಾರಸ್ವಾಮಿ ಅವರನ್ನು ಬೆಂಬಲ ನೀಡಿದ್ದೇವೆ. ಈ ಸಮಯದಲ್ಲಿ ನಮ್ಮ ಕಾರ್ಯಕರ್ತ, ಕೋವಿಡ್ ಸಮಯವನ್ನು ಲೆಕ್ಕಿಸದೇ ನಿಮಗಾಗಿ ಹಗಲುರಾತ್ರಿ ಸೇವಕನಾಗಿ ಕೆಲಸ ಮಾಡಿರುವ ಇಕ್ಬಾಲ್ ಹುಸೇನ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇಲ್ಲಿ ಜಾತಿ ಧರ್ಮಕ್ಕಿಂತ ಕಾರ್ಯಕರ್ತ ಹಾಗೂ ಆತನ ಸೇವೆ ಮುಖ್ಯ ಎಂದು ಅವರಿಗೆಬೆಂಬಲ ನೀಡಿ ಎಂದರು.












Click it and Unblock the Notifications