ಕೈ ಗ್ಯಾರಂಟಿಗೆ ಮನಸೋತ ಕರುನಾಡ ಜನತೆ : ಮೊದಲ ಕ್ಯಾಬಿನೆಟ್ ನಲ್ಲೇ ಈಡೇರುತ್ತಾ ಭರವಸೆ!?
ಬೆಂಗಳೂರು, ಮೇ13: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದಂತೆ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಮೂರು ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಕಾಂಗ್ರೆಸ್ ಬರೋಬ್ಬರಿ 136 ಸ್ಥಾನಗಳನ್ನ ಗೆದ್ದರೆ, ಬಿಜೆಪಿ 64 ಹಾಗೂ ಜೆಡಿಎಸ್ 20 ಸ್ಥಾನಗಳಲ್ಲಿ ಜಯಗಳಿಸಿದೆ.
ಈಗಾಗಲೇ ಕರುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ರೆಡಿಯಾಗಿದ್ರೆ, ಇತ್ತ ಬಿಜೆಪಿ ಸೋಲಿನ ಲೆಕ್ಕಾಚಾರದಲ್ಲಿದೆ. ಈಗಾಗಲೇ ಸುಳ್ಳು ಗ್ಯಾರಂಟಿಗಳನ್ನ ನೀಡಿರುವುದೇ ಕಾಂಗ್ರೆಸ್ ಗೆಲುವಿಗೆ ಕಾರಣ ಎಂದಿರುವ ಬಿಜೆಪಿ ನಾಯಕರು ಈ ಎಲ್ಲಾ ಗ್ಯಾರಂಟಿಗಳನ್ನ ಕಾಂಗ್ರೆಸ್ ನಾಯಕರು ಯಾವ ರೀತಿಯಲ್ಲಿ ಕೊಡುತ್ತಾರೆ ನೋಡುತ್ತೇವೆ ಎಂದು ಹೇಳಿದ್ದಾರೆ.

ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆಯಿಂದ ರಾಜ್ಯದ ಜನತೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೊದಲ ಕ್ಯಾಬಿನೆಟ್ ನಲ್ಲೇ ಕಾಂಗ್ರೆಸ್ ತನ್ನೆಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆಯನ್ನು ನೀಡಿತ್ತು.
ಇನ್ನೂ ಬಿಜೆಪಿ ಸರ್ಕಾರದ ಅವದಿಯಲ್ಲಿ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ದರವನ್ನ ವಿಧಿಸಲಾಗಿತ್ತು. ಹೀಗಾಗಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಮೊದಲ ಗ್ಯಾರಂಟಿಯನ್ನು ಕಾಂಗ್ರೆಸ್ ಘೋಷಿಸಿತ್ತು. ಪ್ರಮುಖವಾಗಿ ಉಚಿತ ವಿದ್ಯುತ್ ನೀಡುವ ಭರವಸೆ ಜನರನ್ನು ತಲುಪಿದ್ದು, ರಾಜ್ಯದ ಹಿಂದುಳಿದ ವರ್ಗದ ಜನತೆಯೂ ಸೇರಿದಂತೆ ಎಲ್ಲಾ ವರ್ಗದ ಜನರಿಂದಲೂ ಭರ್ಜರಿ ಬೆಂಬಲ ದೊರಕಿದೆ.
ಇನ್ನು, ಮಹಿಳಾ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವುದಾಗಿ ಗ್ಯಾರಂಟಿ ಘೋಷಣೆಯನ್ನ ನೀಡಿತ್ತು, ಈ ಗ್ಯಾರಂಟಿ ಘೋಷಣೆ ಮಹಿಳಾ ಮತದಾರರನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಬೆಲೆ ಏರಿಕೆಯಿಂದ ಮಹಿಳೆಯರು ತತ್ತರಿಸಿದ್ದರು. ಪ್ರತಿ ತಿಂಗಳು 2000 ರೂ. ಅನ್ನು ಮನೆ ಯಜಮಾನಿಗೆ ನೀಡುತ್ತೇವೆ ಎಂದು ಹೇಳಿ ಮಹಿಳಾ ಮತದಾರರ ಮನಗೆಲ್ಲುವ ಪ್ರಯತ್ನವನ್ನು ನಡೆಸಿದ್ದ ಕಾಂಗ್ರೆಸ್ ಯಶಸ್ವಿಯಾಗಿದೆ. ಅದು ಅಲ್ಲದೇ ಮಹಿಳೆಯರಿಗೆ ಉಚಿತ ಸಾರಿಗೆಯನ್ನು ಘೋಷಣೆ ಮಾಡಿದೆ.

ಇನ್ನೂ ಸಿದ್ದರಾಮಯ್ಯ ಅವರ ಅನ್ನ ಭಾಗ್ಯ ಮತ್ತೆ ಕಾಂಗ್ರೆಸ್ ಕೈ ಹಿಡಿದಿದೆ ಎಂದರೇ ತಪ್ಪಾಗಲ್ಲ. ಅನ್ನ ಭಾಗ್ಯ ಕಾಂಗ್ರೆಸ್ ನ ಗ್ಯಾರಂಟಿ ಘೋಷಣೆಯಲ್ಲಿ ಒಂದಾಗಿದ್ದು, ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಪ್ರತಿಯೊಬ್ಬರಿಗೂ ಉಚಿತ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಘೋಷಿಸಿದ್ದು, ಈ ಮೂಲಕ ಬಡ ವರ್ಗದ ಮತಗಳನ್ನು ಸೆಳೆಯುವ ಕಾಂಗ್ರೆಸ್ ಪ್ರಯತ್ನ ಫಲ ನೀಡಿದೆ.
ಇತ್ತ ಬಿಜೆಪಿ ಸರ್ಕಾರ ರಾಜ್ಯ ಹಾಗೂ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಯುವ ಸಮುದಾಯವನ್ನ ಸೆಳೆಯುವ ನಿಟ್ಟಿನಲ್ಲಿ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ಹಾಗೂ ನಿರುದ್ಯೋಗ ಡಿಪ್ಲೋಮಾ ಪದವೀಧರರಿಗೆ 1,500 ರೂ. ಅನ್ನು ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆ ಮೂಲಕ ಯುವ ಮತದಾರರನ್ನು ಕಾಂಗ್ರೆಸ್ ತಲುಪಿರುವುದು ಫಲಿತಾಂಶದಲ್ಲಿ ಕಂಡುಬರುತ್ತಿದೆ.

ಒಟ್ನಾಲಿ ಕಾಂಗ್ರೆಸ್ ಕೊಟ್ಟ ಭರವಸೆಯ ಮೇರೆಗೆ ರಾಜ್ಯದ ಜನತೆ ಕಾಂಗ್ರೆಸ್ ಗೆ ಅಧಿಕಾರವನ್ನ ನೀಡಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ಸುಳ್ಳು ಭರವಸೆಯನ್ನ ನೀಡಿದ್ದಾರೆ. ಈ ಗ್ಯಾರಂಟಿ ಘೋಷಣೆಗಳನ್ನ ಜಾರಿಗೊಳಿಸಲು ರಾಜ್ಯದ ಬಜೆಟ್ ಎಷ್ಟು ಎಂಬುದಾಗಿ ಪ್ರಶ್ನಿಸಿದ್ದು, ಕೆಪಿಸಿಸಿ ಅಧ್ಯಕ್ಷ ಶನಿವಾರ ರಾಮನಗರದಲ್ಲಿ ಕೊಟ್ಟ ಭರವಸೆಯನ್ನ ಈಡೇರಿಸುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. ಆದರೆ, ಈ ಎಲ್ಲಾ ಗ್ಯಾರಂಟಿಗಳನ್ನ ಮೊದಲ ಕ್ಯಾಬಿನೆಟ್ ನಲ್ಲಿಯೇ ಜಾರಿಗೆ ಬರುತ್ತಾ ಎಂಬುದನ್ನ ಕಾದುನೋಡ್ಬೇಕು.












Click it and Unblock the Notifications