ಕರ್ನಾಟಕ ಚುನಾವಣೆ: ಮೂರು ವಿಶೇಷ ರೈಲುಗಳ ಸಂಚಾರ, ಹೆಚ್ಚುವರಿ ಕೋಚ್ ಅಳವಡಿಕೆ: ವಿವರ ತಿಳಿಯಿರಿ
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಅನುಕೂಲಕ್ಕಾಗಿ ಮೂರು ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಹೆಚ್ಚುವರಿ ಜನರು ಓಡಾಟ ಮಾಡುವುದರಿಂದ ಈಗ ಸಂಚರಿಸುತ್ತಿರುವ ರೈಲುಗಳಿಗೂ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ಬೆಂಗಳೂರು-ಬೆಳಗಾವಿ, ಬೆಂಗಳೂರು-ಬೀದರ್, ಬೆಂಗಳೂರು (ಯಶವಂತಪುರ) -ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿವೆ. ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಒಂದು ರೈಲು ಸಂಚರಿಸಲಿದ್ದು ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮೇ 9ರಂದು 8.30ಕ್ಕೆ ಹೊರಡಲಿದ್ದು, ಮೇ 10ರಂದು ಬೆಳಗ್ಗೆ 8.20ಕ್ಕೆ ಬೆಳಗಾವಿ ತಲುಪಲಿದೆ. ಮೇ 10 ರ ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡಲಿದ್ದು ಮೇ 11ರ ಮುಂಜಾನೆ 5 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ತಲುಪಲಿದೆ.

ಯಶವಂತಪುರದಿಂದ ಮುರುಡೇಶ್ವರಕ್ಕೂ ವಿಶೇಷ ರೈಲು ಮೇ 9 ರಂದು ರಾತ್ರಿ 11.55ಕ್ಕೆ ಹೊರಡಲಿದ್ದು, ಮೇ 10ರಂದು ಮಧ್ಯಾಹ್ನ 12.55ಕ್ಕೆ ತಲುಪಲಿದೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ಮುರುಡೇಶ್ವರದಿಂದ ಹೊರಡಲಿದ್ದು ಮರುದಿನ 4 ಗಂಟೆಗೆ ಯಶವಂತಪುರಕ್ಕೆ ಬರಲಿದೆ.
ಬೀದರ್ ಗೆ ತಲುಪುವ ರೈಲು ಮೇ 9ರಂದು ಸಂಜೆ 5 ಗಂಟೆಗೆ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಮೆಜೆಸ್ಟಿಕ್) ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 7.20ಕ್ಕೆ ಬೀದರ್ ತಲುಪಲಿದೆ. ಮೇ 10ರಂದು ರಾತ್ರಿ 8 ಗಂಟೆಗೆ ಬೀದರ್ ನಿಂದ ಹೊರಟು ಮರುದಿನ ಬೆಳಗ್ಗೆ 11 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬರಲಿದೆ.
ಈಗಾಗಲೇ ಸಂಚರಿಸುತ್ತಿರುವ ರೈಲುಗಳಿಗೆ ಕೂಡ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. 17307/ 17308 ಬಾಗಲಕೋಟೆ, ಮೈಸೂರು, ಬಸವ ಎಕ್ಸ್ಪ್ರೆಸ್ಗೆ ಹಾಗೂ 16593/94 ಬೆಂಗಳೂರು ನಾಂದೇಡ್ ವಯಾ ರಾಯಚೂರು, ಯಾದಗಿರಿ ರೈಲಿಗಳಿಗೆ ತಲಾ ಒಂದು ಕೋಚ್ ಸೇರ್ಪಡೆ ಮಾಡಲಾಗುತ್ತದೆ. ಬೆಂಗಳೂರು-ಕಾರವಾರ ಮಧ್ಯೆ ಸಂಚರಿಸುವ 16595/96 ಸಂಖ್ಯೆಯ ರೈಲಿಗೂ ಹೆಚ್ಚುವರಿ ಕೋಚ್ ಇರಲಿದೆ, 12079/80 ಬೆಂಗಳೂರು-ಹುಬ್ಬಳ್ಳಿ ಜನಶತಾಬ್ಧಿ ಎಕ್ಸ್ಪ್ರೆಸ್ಗೆ ಎರಡು ಹೆಚ್ಚುವರಿ ಕೋಚ್ಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈಗಾಗಲೇ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಬಾಡಿಗೆಗೆ ಪಡೆದುಕೊಂಡಿದೆ, ಈ ಹಿನ್ನಲೆಯಲ್ಲಿ ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮತದಾನಕ್ಕೆ ಊರಿಗೆ ತೆರಳುವವರಿಗೆ ಟಿಕೆಟ್ ದರ ಏರಿಕೆ ಬಿಸಿ ತಟ್ಟಿದೆ.












Click it and Unblock the Notifications