D.K.Shivakumar: ಹೊನ್ನಾವರ: ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ಪಕ್ಕದಲ್ಲೇ ಹೊತ್ತಿ ಉರಿದ ಬೆಂಕಿ
ಹೊನ್ನಾವರ, ಮೇ, 05: ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರಕ್ಕಾಗಿ ಡಿ.ಕೆ.ಶಿವಕುಮಾರ್ ಹೊನ್ನಾವರದ ರಾಮತೀರ್ಥಕ್ಕೆ ಆಗಮಿಸಿದ್ದು, ಈ ವೇಳೆ ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ಪಕ್ಕದಲ್ಲೇ ಇದ್ದ ಹುಲ್ಲಿಗೆ ಬೆಂಕಿ ಬಿದ್ದಿದೆ.
ಸ್ಮೋಕ್ ಕ್ಯಾಂಡಲ್‌ನಿಂದ ಹೆಲಿಪ್ಯಾಡ್ ಬಳಿ ಹುಲ್ಲಿಗೆ ಬೆಂಕಿ ಹತ್ತಿಕೊಂಡಿದ್ದು,ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮೈಸೂರಿನಿಂದ ಹೊನ್ನಾವರಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ಮೊನ್ನೆಯಷ್ಟೇ ಎಚ್‌ಎಎಲ್ ಬಳಿ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಆಗಲೂ ಹೆಲಿಕಾಪ್ಟರ್‌ನ ಗಾಜು ನುಜ್ಜುಗುಜ್ಜಾಗಿತ್ತು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೊನ್ನೆ ಮಧ್ಯಾಹ್ನ ಕೋಲಾರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್, ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜತೆಗಿದ್ದು, ನನ್ನನ್ನು ಕಾಪಾಡಿದ್ದಾರೆ ಹೇಳಿದ್ದರು.
ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದ ಹದ್ದು
ಇನ್ನು ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಪೈಲಟ್ ಜಾಗರೂಕತೆಯಿಂದ ಭಾರಿ ಅವಘಡ ತಪ್ಪಿದೆ. ಶಿವಕುಮಾರ್ ಅವರು ಮುಳಬಾಗಿಲಿನಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮಕ್ಕೆ ಮಂಗಳವಾರ ಮಧ್ಯಾಹ್ನ 12.10 ಸುಮಾರಿಗೆ ಜಕ್ಕೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿದ್ದು, ಹೊಸಕೋಟೆ ಸಮೀಪ ಹದ್ದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ಗಾಜು ಒಡೆದಿತ್ತು.
ಈ ಸಂದರ್ಭದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದಿದ್ದು, ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂ ಸ್ಪರ್ಶ ಮಾಡಿದ್ದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜೊತೆಗಿದ್ದು, ನನ್ನನ್ನು ಕಾಪಾಡಿದ್ದಾರೆ ಎಂದಿದ್ದರು.
ನಮ್ಮ ಹೆಲಿಕಾಪ್ಟರ್ ಟೇಕಾಫ್ ಆಗಿ 7 ರಿಂದ8 ನಿಮಿಷ ಕಳೆದಿತ್ತು. ನಾವು ಹೊಸಕೋಟೆ ಹತ್ತಿರ ತಲುಪಿದಾಗ ದೊಡ್ಡ ಹದ್ದು ಬಂದು ಡಿಕ್ಕಿ ಹೊಡೆಯಿತು. ಮಾಧ್ಯಮದವರು ಪಕ್ಷದ ಪ್ರಣಾಳಿಕೆ ಕುರಿತು ಸಂದರ್ಶನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್ ಹಾರಾಟದ ಎತ್ತರವನ್ನು ಕಡಿಮೆ ಮಾಡಿ ನಮ್ಮನ್ನು ರಕ್ಷಿಸಿದ್ದಾರೆ. ಈಗ ಬೇರೆ ಹೆಲಿಕಾಪ್ಟರ್ ಸಿಗದ ಕಾರಣ, ರಸ್ತೆ ಮಾರ್ಗವಾಗಿ ಮುಳಬಾಗಿಲಿಗೆ ತೆರಳುತ್ತಿದ್ದೇವೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ, ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ ಎಂದು ತಿಳಿಸಿದ್ದರು.
ಪ್ರಯಾಣದ ವೇಳೆ ಮೂರು ಹದ್ದುಗಳು ಎದುರಾಗಿದ್ದು, ಪೈಲಟ್ ಎರಡು ಹದ್ದುಗಳನ್ನು ದಾಟಿದ್ದರು. ಮೂರನೇ ಹದ್ದು ಕೆಳಗಡೆಯಿಂದ ಮೇಲೆ ಬಂದು ಡಿಕ್ಕಿ ಹೊಡೆಯಿತು. ಯಾರೂ ಇದರಿಂದ ಗಾಬರಿಯಾಗುವುದು ಬೇಡ, ಇದೊಂದು ಆಕಸ್ಮಿಕ, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಸಾಗೋಣ ಎಂದು ತಿಳಿಸಿದ್ದರು.












Click it and Unblock the Notifications