Siddaramaiah on PM Modi: ಪ್ರಧಾನಿ ಮೋದಿಗೆ ಓಟದ ಸ್ಪರ್ಧೆ ಚಾಲೆಂಜ್ ನೀಡಿದ ಸಿದ್ದರಾಮಯ್ಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೇ 10ರಂದು ರಾಜ್ಯದ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದಕ್ಕೂ ಮುನ್ನ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರ ಓಲೈಕೆಗೆ ಮುಂದಾಗಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಕರ್ನಾಟಕ ಕುರುಕ್ಷೇತ್ರದ ಅಖಾಡ ಇದೀಗ ಆರೋಪ-ಪ್ರತ್ಯಾರೋಪ, ನಿಂದನೆ ಮತ್ತು ವಾಗ್ದಾಳಿಗಳಿಗೆ ಸಾಕ್ಷಿಯಾಗಿದೆ. ರಾಜ್ಯ ನಾಯಕರಲ್ಲದೇ, ರಾಷ್ಟ್ರೀಯ ನಾಯಕರೂ ಮತಬೇಟೆಗೆ ಇಳಿದಿದ್ದು, ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏಪ್ರಿಲ್ 29)ದಿಂದಲೇ ಕರುನಾಡ ಕುರುಕ್ಷೇತ್ರಕ್ಕೆ ಧುಮುಕಿದ್ದು, ರಾಜ್ಯದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಇದೇ ವೇಳೆ ವರುಣಾ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಓಪನ್ ಚಾಲೆಂಜ್ ನೀಡಿದ್ದಾರೆ.
ನಾನು ನಿವೃತ್ತಿಯಾಗುತ್ತೇನೆ ಎಂದು ಹೇಳುತ್ತಿರುವುದು ಚುನಾವಣಾ ರಾಜಕಾರಣದಿಂದಲೇ ಹೊರತು, ಸಕ್ರಿಯ ರಾಜಕಾರಣದಿಂದ ಅಲ್ಲ.
— Siddaramaiah (@siddaramaiah) April 30, 2023
ರಾಜಕೀಯದಲ್ಲಿ ಸಕ್ರಿಯವಾಗಿರುವಷ್ಟು ಆರೋಗ್ಯದಿಂದ ಇದ್ದೇನೆ. @narendramodi ಅವರು ಸಿದ್ಧ ಇದ್ದರೆ ಅವರ ಜೊತೆಯಲ್ಲಿ ಓಟದ ಸ್ಪರ್ಧೆಗೆ ನಾನು ಸಿದ್ಧ.
2/2 pic.twitter.com/eQ4zCUir9m
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಚುನಾವಣೆ ರಾಜಕೀಯದಿಂದ ಮಾತ್ರ ಹಿಂದೆ ಸರಿಯುತ್ತೇನೆ. ಆದರೆ, ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿದಿಲ್ಲ ಎಂದು ಪ್ರಧಾನಿ ಮೋದಿಗೆ ಓಟದ ಸವಾಲು ಹಾಕಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಏನನ್ನು ಹೇಳಲಿಕ್ಕೆ ಹೊರಟಿದ್ದಾರೆ?, ಬಿ.ಎಸ್. ಯಡಿಯೂರಪ್ಪನವರನ್ನು ವಯಸ್ಸಿನ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವಮಾನಕಾರಿಯಾಗಿ ಕಿತ್ತುಹಾಕಿದ ಬಿಜೆಪಿ, ಈಗ ಅವರನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವುದಕ್ಕೆ ಕಾರಣ ಅವರ ಮೇಲಿನ ಗೌರವವೇ? ಅಥವಾ ಅನುಕಂಪ ಗಳಿಕೆಯ ತಂತ್ರವೇ?," ಎಂದು ಪ್ರಶ್ನೆ ಹಾಕಿದ್ದಾರೆ.
"ನಾನು ನಿವೃತ್ತಿಯಾಗುತ್ತೇನೆ ಎಂದು ಹೇಳಿರುವುದು ಚುನಾವಣಾ ರಾಜಕಾರಣದಿಂದಲೇ ಹೊರತು, ಸಕ್ರಿಯ ರಾಜಕಾರಣದಿಂದ ಅಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರುವಷ್ಟು ಆರೋಗ್ಯದಿಂದ ಇದ್ದೇನೆ. ನರೇಂದ್ರ ಮೋದಿಯವರು ಸಿದ್ಧ ಇದ್ದರೆ ಅವರ ಜೊತೆಯಲ್ಲಿ ಓಟದ ಸ್ಪರ್ಧೆಗೆ ನಾನು ಸಿದ್ಧ," ಎಂದು ತಮ್ಮ ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
ಇನ್ನು 100ನೇ ಮನ್ ಕೀ ಬಾತ್ಗೆ ಕಂಪ್ಯೂಟರ್ ಮುಂದೆ ಕಾಯುತ್ತಾ ಕುಳಿತಿರುವ ಅಸ್ತಿಪಂಜರದ ಫೋಟೋ ಹಾಕಿ ವರುಣಾ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ವ್ಯಂಗ್ಯವಾಡಿ, ಜನರು ಮತ್ತು ಪತ್ರಕರ್ತರು ಜನ್ ಕಿ ಬಾತ್‌ಗಾಗಿ ಕಾಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಶನಿವಾರ, ಏಪ್ರಿಲ್ 29ರಂದು ವಿಜಯಪುರದಲ್ಲಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ನರೇಂದ್ರ ಮೋದಿ ಟೀಕಿಸಿದ್ದರು.
"ಇದೇ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಜನರ ಸಿಂಪತಿ ಗಿಟ್ಟಿಸುತ್ತಿದ್ದಾರೆ. ಭಾವನಾತ್ಮಕವಾಗಿ ಜನರಲ್ಲಿ ಕಾಂಗ್ರೆಸ್‌ನವರು ಮತ ಕೇಳುತ್ತಿದ್ದಾರೆ. ಆದರೆ ಮತದಾರರು ಒಬ್ಬ ಉತ್ಸಾಹಭರಿತ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ತಯಾರಾಗಿದ್ದಾರೆ," ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದರು.
ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದಿದ್ದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಕಾರು ಹತ್ತುವಾಗ ಬಾಗಿಲಲ್ಲಿ ಕುಸಿದರು. ನಂತರ ಹಿಂಬಾಲಕರು ಅವರನ್ನು ಹಿಡಿದು ಕಾರಿನಲ್ಲಿ ಸುರಕ್ಷತೆಯಿಂದ ಕೂರಿಸಿದರು. ನೀರು ಮತ್ತು ಗ್ಲುಕೋಸ್ ನೀಡಿ ಸಾವಧಾನಿಸಿದ್ದರು. ಬಳಿಕ ತಾನು ಅರೋಗ್ಯದಿಂದ ಇರುವುದಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಮೇ 10ರಂದು ಒಂದೇ ಹಂತದಲ್ಲಿ ಮತದಾನ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications