ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ 09: ಊರಿಗೆ ಬಂದರೂ ಸಿಎಂ ಭೇಟಿ ಮಾಡದ ಬಿಜೆಪಿ ಶಾಸಕ ಸೇರಿದಂತೆ ಸಮಗ್ರ ರಾಜಕೀಯ ವರದಿ!

|
Google Oneindia Kannada News

ಬೆಂಗಳೂರು, ಆ. 09: ಮೈಸೂರಿಗೆ ಬಂದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡದ ಬಿಜೆಪಿ ಶಾಸಕ, ಸೋಮವಾರ ಮತ್ತೆ ಸ್ವಾಮೀಜಿಗಳ ಭೇಟಿ ಮುಂದುವರೆಸಿದ ಸಿಎಂ ಬೊಮ್ಮಾಯಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿ ಮಾತನಾಡಿದ ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ.

ಬೆಂಗಳೂರಿನಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕ್ವಿಟ್ ಇಂಡಿಯಾ ಚಳುವಳಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಂದೆ ಚರ್ಚೆಗೆ ಕಾರಣ ಆಗಬಹುದಾದ ಹೇಳಿಕೆ ಕೊಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಟ್ವಿಟರ್ ಖಾತೆ ಸ್ಥಗಿತ ಗೊಳಿಸಿದ್ದನ್ನು ಪ್ರತಿಭಟನೆ ಮೂಲಕ ವಿರೋಧಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು.

ಬಯಸಿದ ಖಾತೆ ಸಿಗದ ಬಗ್ಗೆ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಚ್ಚರಿ ಎಂಬಂತೆ ಮುಖ್ಯಮಂತ್ರಿ ಬೊಮ್ಮಾಯಿ ಬೆಂಬಲಕ್ಕೆ ನಿಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. ಇವು ಇಂದು ಕರ್ನಾಟಕದ ರಾಜಕೀಯಕ್ಕೆ ಸಂಬಂಧಿಸಿದಂತೆ ಸೋಮವಾರ ಕಂಡು ಬಂದ ಮಹತ್ವದ ಬೆಳವಣಿಗೆಗಳು.

ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಹಾರ್ಡ್‌ಕೋರ್ ಬಿಜೆಪಿ ನಾಯಕ ಸಿ.ಟಿ. ರವಿ ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದು ಮತ್ತೊಂದು ಮಹತ್ವದ ಬೆಳವಣಿಗೆ. ಇಬ್ಬರೂ ನಾಯಕರ ಭೇಟಿ ಅಚ್ಚರಿಗೆ ಕಾರಣವಾಗಿದ್ದು, ಆ ಸುದ್ದಿಯನ್ನು ಮೊದಲಿಗೆ ಓದೋಣ!

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಸಿ.ಟಿ. ರವಿ!

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಸಿ.ಟಿ. ರವಿ!

ದೆಹಲಿಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭೇಟಿ ಮಾಡಿದ್ದಾರೆ. ಸಹಜವಾಗಿಯೇ ಈ ಭೇಟಿ ರಾಜ್ಯದ ರಾಜಕೀಯ ನಾಯಕರು ಹಾಗೂ ಜನ ಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ. ಬಹಳ ಹೊತ್ತು ಇಬ್ಬರೂ ನಾಯಕರು ರಾಜಕೀಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿರುವ ಮಾಹಿತಿ ಸಿಕ್ಕಿದೆ. ಜೊತೆಗೆ ಭೇಟಿಯ ಬಳಿಕ ಎಚ್.ಡಿ. ದೇವೇಗೌಡರನ್ನು ಸಿಟಿ ರವಿ ಮನತುಂಬಿ ಹೊಗಳಿರುವುದು ವಿಶೇಷ.

ಅಷ್ಟಕ್ಕೂ ಸಿ.ಟಿ. ರವಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿರುವುದು ಯಾವುದೇ ರಾಜಕೀಯ ಕಾರಣದ ಹಿನ್ನೆಯಿಂದಲ್ಲ. ಬದಲಿಗೆ ಮಾಜಿ ಸಚಿವ ಸಿ.ಟಿ. ರವಿ ಭಾರತದ ರಾಜಕೀಯದ ಮೇಲೆ ಪಿಎಚ್‌ಡಿ ಮಾಡುತ್ತಿದ್ದಾರೆ. ಸಂಶೋಧನೆಯ ವಿಷಯದ ಭಾಗವಾಗಿ ದೇವೇಗೌಡರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಭೇಟಿ ಬಳಿಕ, ಭಾರತದ ರಾಜಕೀಯದ ಕುರಿತು ಮಾಜಿ ಪ್ರಧಾನಿ ದೇವೇಗೌಡರಿಗೆ ಇರುವ ಆಳವಾದ ಜ್ಞಾನವನ್ನು ಸಿ.ಟಿ. ರವಿ ಮನತುಂಬಿ ಹೊಗಳಿದ್ದಾರೆ.

ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೈಸೂರು ಜಿಲ್ಲಾ ಪ್ರವಾಸ, ಸಂಪುಟ ಸಂಕಟದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ಶಾಸಕ ಎಸ್‌.ಎ. ರಾಮದಾಸ್ ಸಿಎಂ ಬೊಮ್ಮಾಯಿ ಭೇಟಿ ಮಾಡದಿರುವುದು ಕುತೂಹಲ ಮೂಡಿಸಿದೆ.

ಊರಿಗೆ ಬಂದರೂ ಸಿಎಂ ಭೇಟಿ ಮಾಡದ ಬಿಜೆಪಿ ಶಾಸಕ!

ಊರಿಗೆ ಬಂದರೂ ಸಿಎಂ ಭೇಟಿ ಮಾಡದ ಬಿಜೆಪಿ ಶಾಸಕ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ತೆರಳಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ಮಳೆ ಕುರಿತು ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, "ಕೇವಲ 10 ತಿಂಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹೊಸದಾಗಿ 24 ಸಾವಿರ ಹಾಸಿಗೆಗಳ ಸೌಲಭ್ಯ ಹಾಗೂ 6 ಸಾವಿರ ಐ.ಸಿ.ಯು ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಔಷಧೋಪಚಾರ ಒದಗಿಸಲಾಗಿದೆ. ಅದರೊಂದಿಗೆ 2 ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದ್ದು, ಕೋವಿಡ್ 19 ವಿರುದ್ಧ ದೊಡ್ಡ ಸಮರವನ್ನೇ ನಾವು ಸಾರಿದ್ದೇವೆ. ನಮ್ಮ ಈ ಸಾಧನೆ ಹಿಂದೆ ಕಾರ್ಯಕರ್ತರು ಕಾರಣ" ಎಂದರು.

ಇದೇ ಸಂಕಷ್ಟದ ಸಂದರ್ಭದಲ್ಲಿ ನಾಡಿನ ಜನತೆಗೆ ಸಿಎಂ ಬೊಮ್ಮಾಯಿ ಸಂತಸದ ಸುದ್ದಿ ಕೊಟ್ಟಿದ್ದಾರೆ. "ಕೋವಿಡ್ ಸಂಕಷ್ಟ ಇದ್ದರೂ ಆರ್ಥಿಕ ಚಟುವಟಿಕೆಗಳು ಮತ್ತೆ ಚಿಗುರುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ-ದೇಶ ಮುನ್ನಡೆಯುತ್ತಿದೆ" ಎಂದರು.

ಆದರೆ ಮೈಸೂರಿಗೆ ಬಂದಿದ್ದರೂ ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್ ಭೇಟಿ ಮಾಡಲಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಸ್ಥಾನ ತಪ್ಪಿರುವುದರ ಹಿನ್ನೆಲೆಯಲ್ಲಿ ರಾಮದಾಸ್ ಅವರು ಸಿಎಂ ಬೊಮ್ಮಾಯಿ ಭೇಟಿ ಮಾಡಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದರು.

ಸುತ್ತೂರು ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ

ಸುತ್ತೂರು ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಎರಡನೇ ಕಂತಿನ ಹಣವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರ ಜೊತೆಗೆ ವಿಡಿಯೋ ಸಂವಾದದಲ್ಲಿ ಮಾಡಿದರು. ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಿಂದ ಭಾಗವಹಿಸಿದ್ದರು.

ಜೊತೆಗೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಮೇಕೆದಾಟು ಯೋಜನೆಯ ವಿಸ್ತ್ರತ ಯೋಜನಾ ವರದಿಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮೇಕೆದಾಟು ಯೋಜನೆಯ ಡಿಪಿಆರ್‌ನ್ನು ಕೇಂದ್ರ ಜಲ ಆಯೋಗಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಕಳೆದ ಬಾರಿ ದೆಹಲಿಗೆ ತೆರಳಿದಾಗ ಈ ಯೋಜನೆಗೆ ಒಪ್ಪಿಗೆ ನೀಡುವುದಾಗಿ ಭರವಸೆ ದೊರೆತಿದೆ. ಇದಕ್ಕೆ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಇದು ಪೂರ್ಣಗೊಂಡ ಕೂಡಲೇ ಕೇಂದ್ರದ ಒಪ್ಪಿಗೆ ದೊರೆಯುವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಂಜನಗೂಡು ತಾಲೂಕಿನ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಶ್ರೀಗಳನ್ನು ಭೇಟಿ ಮಾಡಿರುವ ಮಾಹಿತಿಯಿದೆ. ನಂತರ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ ನಿರಾಣಿ, ಎಸ್ ಟಿ ಸೋಮಶೇಖರ್, ಡಾ. ನಾರಾಯಣಗೌಡ ಮತ್ತು ಇತರರು ಉಪಸ್ಥಿತರಿದ್ದರು. ಮೈಸೂರಿನಿಮದ ಹಿಂದಿರುಗಿದ ಬಳಿಕ ಮಾಜಿ ಸಿಎಂ ಎಸ್‌ಎಂ ಕೃಷ್ಣಾ ಅವರನ್ನು ಭೇಟಿ ಮಾಡಿದರು.

 ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಮವಾರ ರಾತ್ರಿ ಬೆಂಗಳೂರಿನ ಸದಾಶಿವನಗರ ಬಡಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಾದ ಎಸ್ ಟಿ ಸೋಮಶೇಖರ್, ಡಾ. ಕೆ ಸುಧಾಕರ್, ಡಾ. ನಾರಾಯಣ ಗೌಡ, ಬೈರತಿ ಬಸವರಾಜ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಕೃಷ್ಣಾ ಜೀ, ನಮ್ಮ ತಂದೆ ಬಹಳ ಆತ್ಮೀಯರು. ಭೇಟಿ‌ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ. ನವಕರ್ನಾಟಕದ ನಿರ್ಮಾಣ ಅವರ ಕಾಲದಲ್ಲೇ ಆಗಿದ್ದು. ಈ ಭೇಟಿಯಿಂದ ಆತ್ಮವಿಶ್ವಾಸ ಮೂಡಿದೆ. ಕೃಷ್ಣ ಅವರ ಆಶೀರ್ವಾದ ನನಗೆ ದೊಡ್ಡ ಶಕ್ತಿ ನೀಡಿದೆ. ಮೂರನೇ ಕೊರೊನಾ ಅಲೆ ಬಗ್ಗೆ ಚರ್ಚಿಸಿದ್ದೇವೆ. ಪ್ರಮುಖ ಗಡಿಗಳನ್ನು ಗಮನಿಸುತ್ತಿದ್ದೇವೆ. ನಾವು ಕೊರೊನಾ ಸೋಂಕನ್ನು ಗಂಭೀರವಾಗಿ ನೋಡುತ್ತಿದ್ದೇವೆ. ಹೌದು, ಬೆಂಗಳೂರಿಗೆ ನೇರವಾಗಿ ಕೇರಳದಿಂದ ಬರ್ತಾರೆ. ಸಾವಿರಾರು ಜನರನ್ನು ಟೆಸ್ಟ್ ಮಾಡೋದು ಕಷ್ಟ ಎಂದು ಸಿಎಂ ಬಸವರಾಜ‌ ಬೊಮ್ಮಾಯಿ‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ‌ ಕೇಂದ್ರ ಸಚಿವ ಎಸ್. ಎಂ. ಕೃಷ್ಣ ಅವರೂ ಕೂಡ ಮಾತನಾಡಿದ್ದಾರೆ. "ನಾವು ಒಂದು ರಾಜಕೀಯ ಪರಂಪರೆಯಿಂದ ಬಂದವರು. ನನಗೆ ಬಹಳ ತೊಂದರೆ ಕೊಡುತ್ತಿದ್ದರು. ನನ್ನ ಹಾಗೂ ಅವರ ದೃಷ್ಟಿಕೋನ ಸರ್ವತೋಮುಖ. ಈ ನಾಡನ್ನು ಮುನ್ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ. ಅವರಿಗೆ ನನ್ನ ಅಭಿನಂದನೆಗಳು" ಎಂದು ಮಾಜಿ ಸಿಎಂ ಎಸ್ಎಂಕೆ ಸಿಎಂ ಬೊಮ್ಮಾಯಿಗೆ ಶುಭಾಶಯ ಹೇಳಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರವ ಟ್ವಿಟರ್ ಖಾತೆ ಸ್ಥಗಿತಗೊಳಿಸಿದ್ದನ್ನು ಯುಬವ ಕಾಂಗ್ರೆಸ್ ಕಾರ್ಯರ್ತರು ಬಲವಾಗಿ ಖಂಡಿಸಿದ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದರು.

Recommended Video

IPL ಮುಂದುವರೆದರೆ ಯಾವ ದೇಶದ ಆಟಗಾರರು ಪಾಲ್ಗೊಳ್ಳಲಿದ್ದಾರೆ | Oneindia Kannada
ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಂದ್: ಯುವ ಕಾಂಗ್ರೆಸ್ ಗರಂ!

ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಂದ್: ಯುವ ಕಾಂಗ್ರೆಸ್ ಗರಂ!

ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ದಲಿತ ಬಾಲಕಿಯ ಪೋಷಕರಿಗೆ ಸಾಂತ್ವಾನ ಹೇಳುವ ಚಿತ್ರ ಪ್ರಕಟಿಸಿದ ಕಾರಣಕ್ಕಾಗಿ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯನ್ನು ಸ್ಥಗಿತೊಳಿಸಿದ್ದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ಖಾತೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಬೆಂಗಳೂರಿನ ಟ್ವಿಟರ್ ಕಚೇರಿ ಮುಂದೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ಬೆನ್ನಿಗಾನ ಹಳ್ಳಿಯ ಟ್ವಿಟರ್ ಇಂಡಿಯಾ ಕಚೇರಿ ಮುಂದೆ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆ ಸಂಸ್ಥೆಯ ಧೋರಣೆಯನ್ನು ಖಂಡಿಸಿದರು. ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಕೂಡಲೇ ಪುನರ್ ಸ್ಥಾಪಿಸದಿದ್ದರೆ ಟ್ವಿಟರ್ ಇಂಡಿಯಾ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

"ಅತ್ಯಾಚಾರಿಗಳನ್ನು ಟ್ವಿಟರ್ ಯಾಕೆ ರಕ್ಷಿಸುತ್ತಿದೆ?", "ಕೂಡಲೇ ರಾಹುಲ್ ಗಾಂಧಿ ಅವರು ಟ್ವಿಟರ್ ಖಾತೆ ಪುನರ್ ಸ್ಥಾಪಿಸಿ" ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್: 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ನೂತನ ಶಿಕ್ಷಣ ಸಚಿವ ನಾಗೇಶ್ ಫಲಿತಾಂಶ ಘೋಷಣೆ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ 3.30ಕ್ಕೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಫಲಿತಾಂಶ ಪ್ರಕಟಗೊಳಿಸಿದ್ದಾರೆ.

ಇದೇ ಮೊದಲ ಬಾರಿ ಶೇ 99.09 ರಷ್ಟು ಫಲಿತಾಂಶ ಬಂದಿದೆ. ಮೊದಲ ಬಾರಿ 8.74 ಲಕ್ಷ ವಿದ್ಯಾರ್ಥಿಗಳು ಪಾಸ್‌ ಆಗಿರುವುದಾಗಿ ಮಾಹಿತಿ ನೀಡಿದ್ದಾರೆ. 4.70 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದು, 4.1 ಲಕ್ಷ ವಿದ್ಯಾರ್ಥಿನಿಯರು ಎಸ್ಎಸ್ಎಲ್‌ಸಿ ಉತ್ತೀರ್ಣರಾಗಿದ್ದಾರೆ.

ಕೊರೊನಾ ವೈರಸ್ ಸಂಕಷ್ಟದ ಮಧ್ಯೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿತ್ತು. 2 ದಿನ ನಡೆದ ಪರೀಕ್ಷೆಯಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದರು. ಒಎಂಆರ್ ಉತ್ತರ ಪತ್ರಿಕೆಗಳನ್ನು ಬಳಸಲಾಗಿತ್ತು. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರಿಚಯಿಸಲಾಗಿತ್ತು. ಈ ಒಎಂಆರ್ ಶೀಟ್ ಡಿಜಿಟಲ್ ಸ್ಕ್ಯಾನಿಂಗ್‌ಗೆ ಕಳುಹಿಸಿ ನಂತರ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ: ಗೃಹ ಖಾತೆ ವಹಿಸಿಕೊಂಡ ನಂತರ ಮೊದಲ ಬಾರಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಚಿವ ಆರಗ ಜ್ಞಾನೇಂದ್ರ ಸುಧೀರ್ಘ ಸಭೆ ನಡೆಸಿದರು.

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ಮಾಡಲಾಯ್ತು. ಜೊತೆಗೆ ರಾಜ್ಯದಲ್ಲಿನ ಅಪರಾಧ ಪ್ರಕರಣ, ಅಕ್ರಮ ವಲಸಿಗರು, ಡ್ರಗ್ಸ್‌ ದಂಧೆಗೆ ಕಡಿವಾಣ, ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಚರ್ಚೆ ನಡೆಯಿತು.

ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಗೃಹ ಸಚಿವನಾಗಿ ಮೊದಲ ಸಭೆ ನಡೆಸಿದ್ದೇನೆ. ಅಧಿಕಾರಿಗಳ ಜೊತೆ ಪರೀಶೀಲನಾ ಸಭೆ ನಡೆಸಿದ್ದೇನೆ. ಇಲಾಖೆ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಇಲಾಖೆಯ ನ್ಯೂನತೆ ಹೋಗಲಾಡಿಸಬೇಕಿದೆ. ನಮ್ಮ ಪೊಲೀಸ್ ಇಲಾಖೆ ದೇಶದಲ್ಲೇ ಕೀರ್ತಿ ಗಳಿಸಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ನೋಡಿಕೊಳ್ಳಬೇಕು. ನಾಳೆ ನಾನು ಸಿಎಂ ಬೊಮ್ಮಾಯಿ ಅವರ ಜೊತೆ ಮಾತನಾಡುತ್ತೇನೆ. ಅವರ ಮಾರ್ಗದರ್ಶನ ಕೂಡ ಪಡೆಯುತ್ತೇನೆ. ಜನ ಇನ್ನಷ್ಟು ನೆಮ್ಮದಿಯಿಂದ ಇರಬೇಕು ಅಂದರೆ ಪೊಲೀಸರು ಜಾಗೃತರಾಗಿರಬೇಕು. ಜನರ ರಕ್ಷಣೆಯನ್ನು ಪೋಲಿಸರೇ ಮಾಡಬೇಕು ಎಂದು ಹೇಳಿದರು.

ಸಿಎಂ ಬೊಮ್ಮಾಯಿ ಬೆಂಬಲಕ್ಕೆ ನಿಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಬೊಮ್ಮಾಯಿ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಚ್‌ಡಿಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಸಚಿವರಿಗೆ ತಾತ್ಕಾಲಿಕವಾಗಿ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಿದ್ದರು. ಆಯಾ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ, ಕೊರೊನಾ ವೈರಸ್‌ ಸ್ಥಿತಿಗಳ ನಿರ್ವಹಣೆ ಮಾಡುವಂತೆ ಸೂಚಿಸಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದಾಶಯದಿಂದ ಜವಾಬ್ದಾರಿ ನೀಡಿದರೆ, ಜವಾಬ್ದಾರಿ ಮರೆತ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಖಾತೆ ಹಂಚಿಕೆ ಕುರಿತು ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಖಾತೆ ಹಂಚಿಕೆ ವಿಚಾರದಲ್ಲಿ ನನಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಯಲ್ಲಿ ಕೆಲಸ ಮಾಡುತ್ತಿರುವುದೇ ಸಂತೋಷ, ಸಮಾಧಾನದ ವಿಚಾರವಾಗಿದೆ. ಯಾವುದೇ ವಿಚಾರ ಬಂದಾಗ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು. ನಾನು ಕಳೆದ 30 ವರ್ಷಗಳಿಂದ ಜನರ ಸೇವೆಗಾಗಿಯೇ ಬದುಕಿದ್ದೇನೆ, ನಾನು ಮುಂಚೆಯಿಂದಲೂ ಖಾತೆ ಬಗ್ಗೆ ಪ್ರಶ್ನೆ ಎತ್ತಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುವ ಸಮಾಧಾನ ಇದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

English summary
Karnataka Political News Roundup (9th August 2021): Today's News on the latest Karnataka politics-Stay informed about the recent political developments in Karnataka today. For all the latest Karnataka politics news, follow Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X