ಕರ್ನಾಟಕ ಪೊಲೀಸರಿಂದ ಮಹತ್ವದ ಆದೇಶ: ಸೈಬರ್‌ಕ್ರೈಂ ಪ್ರಕರಣಗಳಿಗೆ ಹೊಸ ರೂಲ್ಸ್‌, ಠಾಣೆಗಳಿಗೆ ಖಡಕ್‌ ಸೂಚನೆ

ಬೆಂಗಳೂರು: ಸೈಬರ್‌ ಅಪರಾಧ ಪ್ರಕರಣಗಳ ತನಿಖೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಸೈಬರ್‌ಕ್ರೈಂ ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಪ್ರಕರಣಗಳನ್ನು ಎಫ್‌ಐಆರ್‌ ದಾಖಲಿಸಿದ ಬಳಿಕ ತಕ್ಷಣವೇ ಸಂಬಂಧಪಟ್ಟ ಮೀಸಲು ಸೈಬರ್ ಪೊಲೀಸ್ ಠಾಣೆಗಳಿಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ.

ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕ (DG&IGP) ಮತ್ತು ಪೊಲೀಸ್ ಪಡೆಯ ಮುಖ್ಯಸ್ಥ (HoPF) ಎಂ.ಎ. ಸಲೀಂ ಅವರು ಸೆಪ್ಟೆಂಬರ್‌ 15ರಂದು ಈ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

Karnataka Police Order Major Change in Cybercrime Cases FIR to Be Transferred to Dedicated Cyber Police

ಎಫ್‌ಐಆರ್‌ ಬಳಿಕ ತಕ್ಷಣ ವರ್ಗಾವಣೆ

ಸೈಬರ್‌ ಅಪರಾಧ ಮತ್ತು IT ಕಾಯ್ದೆಯಡಿ ಬರುವ ದೂರುಗಳನ್ನು ಇದುವರೆಗೆ ಸ್ಥಳೀಯ ಅಥವಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿಯೂ, ಮೀಸಲು ಸೈಬರ್‌ಕ್ರೈಂ ಪೊಲೀಸ್ ಠಾಣೆಗಳಲ್ಲಿಯೂ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.

ಆದರೆ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಡಿಜಿಟಲ್‌ ಸಾಕ್ಷ್ಯಗಳನ್ನು ತ್ವರಿತವಾಗಿ ಸಂರಕ್ಷಿಸಿ ವಿಶ್ಲೇಷಿಸುವುದು, ಮೊಬೈಲ್‌ ಹಾಗೂ ಇತರ ಎಲೆಕ್ಟ್ರಾನಿಕ್‌ ಸಾಧನಗಳ ತಾಂತ್ರಿಕ ಪರಿಶೀಲನೆ ನಡೆಸುವುದು ಮತ್ತು ಬ್ಯಾಂಕ್‌ಗಳು, ಪಾವತಿ ಸಂಸ್ಥೆಗಳು, ಟೆಲಿಕಾಂ ಸೇವಾ ಪೂರೈಕೆದಾರರು, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಅಗತ್ಯವಿದೆ. ಹೀಗಾಗಿ ಇಂತಹ ಪ್ರಕರಣಗಳ ತನಿಖೆಯನ್ನು ಪರಿಣತಿ ಹೊಂದಿರುವ ಸೈಬರ್‌ಕ್ರೈಂ ಪೊಲೀಸ್‌ ಠಾಣೆಗಳಿಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ವಂಚನೆಯ ಹಣ ಫ್ರೀಜ್‌ ಮಾಡಲು ತ್ವರಿತ ಕ್ರಮ

ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಹಣವನ್ನು ತಕ್ಷಣವೇ ತಡೆಹಿಡಿಯುವುದು ಅಥವಾ ಫ್ರೀಜ್‌ ಮಾಡುವುದು ಪ್ರಮುಖವಾಗಿರುವುದರಿಂದ, ಪ್ರಕರಣ ದಾಖಲಾದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಂಚನೆಗೆ ಸಂಬಂಧಿಸಿದ ಅನುಮಾನಾಸ್ಪದ ವಹಿವಾಟುಗಳನ್ನು ಗುರುತಿಸಿ ಅವುಗಳ ಮೇಲೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.

Karnataka Police: ಸ್ಥಳೀಯ ಠಾಣೆಗಳ ಜವಾಬ್ದಾರಿ ಮುಂದುವರಿಕೆ

ಹೊಸ ಆದೇಶದ ಪ್ರಕಾರ, ಸ್ಥಳೀಯ ಅಥವಾ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳು ಸೈಬರ್‌ಕ್ರೈಂ ಹಾಗೂ IT ಕಾಯ್ದೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸುವುದನ್ನು ಮುಂದುವರಿಸಲಿವೆ.

ಆದರೆ ಎಫ್‌ಐಆರ್‌ ದಾಖಲಿಸಿದ ಕೂಡಲೇ ಪ್ರಕರಣವನ್ನು ನಗರ ಅಥವಾ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸಂಬಂಧಪಟ್ಟ ಮೀಸಲು ಸೈಬರ್‌ಕ್ರೈಂ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು. ಪ್ರಕರಣ ವರ್ಗಾವಣೆಯಾದ ಬಳಿಕ ಸೈಬರ್‌ಕ್ರೈಂ ಠಾಣೆಯ ಅಧಿಕಾರಿಗಳು ತಕ್ಷಣವೇ ತನಿಖೆ ಆರಂಭಿಸಬೇಕು.‌

Karnataka Police: ಅಧಿಕಾರಿಗಳಿಗೆ ಮೇಲ್ವಿಚಾರಣೆಯ ಹೊಣೆ

ಪ್ರಕರಣಗಳ ವರ್ಗಾವಣೆ ಮತ್ತು ತನಿಖೆಯ ಪ್ರಕ್ರಿಯೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ನಗರ ಪೊಲೀಸ್ ಆಯುಕ್ತರು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಿಲ್ಲೆ ಅಥವಾ ನಗರದ ಸೈಬರ್‌ಕ್ರೈಂ ಪೊಲೀಸ್ ಠಾಣೆಗಳು ಸ್ಥಳೀಯ ಪೊಲೀಸ್ ಠಾಣೆಗಳಿಂದ ವರ್ಗಾವಣೆಯಾಗುವ ಪ್ರಕರಣಗಳ ಸೂಕ್ತ ದಾಖಲೆಗಳನ್ನು ನಿರ್ವಹಿಸಬೇಕು. ಅಲ್ಲದೆ, ಪ್ರಕರಣಗಳ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸೈಬರ್‌ ಅಪರಾಧಗಳ ತನಿಖೆಯಲ್ಲಿ ತಾಂತ್ರಿಕ ಪರಿಣತಿ, ಡಿಜಿಟಲ್‌ ಸಾಕ್ಷ್ಯ ಸಂರಕ್ಷಣೆ ಹಾಗೂ ವಿವಿಧ ಸಂಸ್ಥೆಗಳೊಂದಿಗೆ ವೇಗದ ಸಮನ್ವಯಕ್ಕೆ ಒತ್ತು ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+