ಕರ್ನಾಟಕ | ಪಠ್ಯಕ್ರಮದಲ್ಲಿ ಮಕ್ಕಳ ಆರೋಗ್ಯ ಕಾಳಜಿ ವಿಷಯ ಸೇರ್ಪಡೆಗೆ ಸರ್ಕಾರ ಚಿಂತನೆ
ಬೆಂಗಳೂರು, ಸೆಪ್ಟಂಬರ್ 03: ಮಕ್ಕಳೇ ಭಾರತದ ದೇಶದ ಭವಿಷ್ಯ. ಅವರಿಗೆ ಶಿಕ್ಷಣದ ಜೊತೆ ಜೊತೆಗೆ ಆರೋಗ್ಯದ ಅರಿವೂ ಇರಬೇಕು. ಈ ಕಾರಣದಿಂದ ಆರೋಗ್ಯ ಮತ್ತು ಗುಣಮಟ್ಟದ ಜೀವನಶೈಲಿ ಬಗ್ಗೆ ಮಕ್ಕಳಿಗೆ ಪಠ್ಯಕ್ರಮದಲ್ಲಿಯೇ ಸೇರಿಸುವ ಚಿಂತನೆ ಇದೆ. ಈ ಸಂಬಂಧ ಶಿಕ್ಷಣ ಇಲಾಖೆ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಹೇಳಿದರು.
ಬೆಂಗಳೂರಲ್ಲಿ ಇಂದು ಏಮ್ಸ್ ರಿಷಿಕೇಶ್ ಮತ್ತು ಇಂಡಿಯನ್ ಪಾಲಿಸಿ ರಿಸರ್ಚ್ ಸಹಯೋಗದಲ್ಲಿ ನಡೆದ 'ಕರ್ನಾಟಕದಲ್ಲಿ ಹೈಪರ್ ಡೆನ್ಷನ್ ಹೊರೆ' ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಆರೋಗ್ಯ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಆಹಾರ, ಶುಚಿತ್ವ, ಜೀವನಕ್ರಮ, ಒಳ್ಳೆಯ ನಿದ್ರೆ ಮುಂತಾದವುಗಳ ಬಗ್ಗೆ ಪಠ್ಯಕ್ರಮದ ಮೂಲಕವೇ ಜಾಗೃತಿ ಮೂಡಿಸಬೇಕಿದೆ. ಇದರ ಜೊತೆಗೆ ಶಾಲೆಗಳಲ್ಲಿಯೇ ಮಕ್ಕಳ ಆರೋಗ್ಯ ತಪಾಸಣೆ (ಸ್ಕ್ರೀನಿಂಗ್) ಬಗ್ಗೆಯೂ ಗಮನವಹಿಸಲಾಗುವುದು ಎಂದು ಹೇಳಿದರು.

ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್) ಬಗ್ಗೆ ಸಮಾಜದಲ್ಲಿ ಎಲ್ಲರಿಗೂ ತಿಳಿದಿದೆ. ಆದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಇದು ಈಗ ವ್ಯಾಪಕವಾಗಿ ಹರಡುತ್ತಿರುವುದು ಆಘಾತಕಾರಿಯಾಗಿದೆ. ರಕ್ತದೊತ್ತಡ ಮತ್ತು ಮಧುಮೇಹದಿಂದಲೇ ಹೃದ್ರೋಗ, ಕಿಡ್ನಿ ಸಮಸ್ಯೆ, ಸ್ಟ್ರೋಕ್ ಮುಂತಾದ ಅಸಂಕ್ರಾಮಿಕ ಖಾಯಿಲೆಗಳು ಹೆಚ್ಚಾಗಿದೆ ಎಂದರು.
ಯುವಕರು ಈ ದೇಶದ ಭವಿಷ್ಯ. ಯುವಕರು ಆರೋಗ್ಯವಂತರಾಗಿದ್ದರೆ ದೇಶ ಸದೃಡವಾಗಿರುತ್ತದೆ. ಉತ್ಪಾದನೆ ಹೆಚ್ಚಳವಾಗುತ್ತದೆ ಜೊತೆಗೆ ಅವರನ್ನು ನಂಬಿರುವ ಕುಟುಂಬವೂ ಚೆನ್ನಾಗಿರುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ತಿಳಿದಿದ್ದರೂ ಸಹ ಅದರ ಬಗ್ಗೆ ಮಾಹಿತಿಯ ಕೊರತೆಯೋ, ತಾತ್ಸಾರವೋ ಅವರನ್ನು ಅನಾರೋಗ್ಯಕ್ಕೆ ದೂಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿ ಮಾಡಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಮೊದಲ ಹಂತದ ಕ್ಯಾನ್ಸರ್ ಸೇರಿ 14 ರೋಗಗಳ ತಪಾಸಣೆಯ ಜೊತೆಗೆ ಅಗತ್ಯ ಇರುವವರಿಗೆ ಉಚಿತ ಔಷಧಗಳನ್ನೂ ವಿತರಣೆ ಮಾಡಲಾಗುತ್ತಿದೆ ಎಂದರು.
ಆಟೋ ಮತ್ತು ಕ್ಯಾಬ್ ಚಾಲಕರಿಗೆ ತಪಾಸಣೆ
ಮುಂದಿನ ದಿನಗಳಲ್ಲಿ ಮುಖ್ಯವಾಗಿ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಮುಖ್ಯವಾಗಿ ಹೃದ್ರೋಗ ತಪಾಸಣೆ ಹಮ್ಮಿಕೊಳ್ಳಲಾಗುತ್ತಿದೆ. ಜಯದೇವ ಆಸ್ಪತ್ರೆಗೆ ಬರುವ ಹೃದ್ರೋಗಿಗಳ ಪೈಕಿ ಶೇ.25-30ರಷ್ಟು ಮಂದಿ ಚಾಲಕ ವೃತ್ತಿಯಲ್ಲಿ ಇರುವವರು ಎಂಬ ವಿಷಯ ಕಳವಳಕಾರಿಯಾಗಿದೆ. ಹೀಗಾಗಿ ಇಸಿಜಿ, ಇಕೋ, ಟಿಎಂಟಿ ಸೇರಿದಂತೆ ಸಂಪೂರ್ಣ ಹೃದಯ ಆರೋಗ್ಯ ತಪಾಸಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಇಂಡಿಯನ್ ಪಾಲಿಸಿ ರಿಸರ್ಚ್ ಅಧ್ಯಕ್ಷ ಡಾ.ಯು.ಎಸ್. ವಿಶಾಲ್ ರಾವ್ ಅವರು, ಕೋವಿಡ್ ನಂತರದಲ್ಲಿ ಹೈಪರ್ ಟೆನ್ಷನ್ ತೀವ್ರವಾಗಿ ಹರಡುತ್ತಿದೆ. ಹೃದಯ, ಕಿಡ್ನಿ, ಸ್ಟ್ರೋಕ್ ನಂತಹ ಅಸಂಕ್ರಾಮಿಕ ರೋಗಗಳಿಗೆ ಇದು ಕಾರಣ ಆಗುತ್ತಿದೆ ಎಂದು ತಿಳಿಸಿದರು.
ಕಾಡಲಿದೆ ಹೈಪರ್ ಟೆನ್ಷನ್..
ಹೈಪರ್ ಟೆನ್ಷನ್ ಇತ್ತೀಚೆಗೆ 18 ವರ್ಷಗಳಿಗಿಂತ ಕೆಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಶಾಲೆಗಳಲ್ಲಿ ಸ್ಕ್ರೀನಿಂಗ್ ಮಾಡಿದರೆ ಇದು ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಊಟದಲ್ಲಿ ಉಪ್ಪು ಹೆಚ್ಚಾಗಿ ಬಳಕೆ ಮಾಡುವುದು, ತಂಬಾಕು ಸೇವನೆ, ಚಟುವಟಿಕೆಗಳು ಇಲ್ಲದೇ ಇರುವುದು ಮುಂತಾದ ಕಾರಣಗಳಿಂದ ಇದರ ಹರಡುವಿಕೆ ಹೆಚ್ಚಾಗುತ್ತಿದೆ. ಈ ಮಕ್ಕಳು ಯುವಕರಾಗುವ ವಯೋಮಾನದ ವೇಳೆಗೆ ಹೈಪರ್ ಟೆನ್ಷನ್ ಅವರ ಆರೋಗ್ಯಕ್ಕೆ ತೀವ್ರವಾಗಿ ಕಾಡುವ ಸಾಧ್ಯತೆ ಇದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಮಹತ್ವದ ಕಾರ್ಯಕ್ರಮಗಳು
ಸಮುದಾಯದ ಆರೋಗ್ಯ ವೃದ್ಧಿ ಮಾಡುವುದು ಎಂದರೆ ಆಸ್ಪತ್ರೆಗಳ ಸಂಖ್ಯೆ, ಬೆಡ್ ಗಳ ಸಂಖ್ಯೆ, ವೈದ್ಯರ ಸಂಖ್ಯೆ ಹೆಚ್ಚಳ ಮಾಡುವುದು ಅಲ್ಲ. ಜನರು ಆಸ್ಪತ್ರೆಗೆ ಬಾರದಂತೆ ಅವರ ಜೀವನ ಶೈಲಿ ಬದಲಾವಣೆ ಮಾಡಿ ಆರೋಗ್ಯವಂತರನ್ನಾಗಿ ಮಾಡುವುದು. ಈ ನಿಟ್ಟಿನಲ್ಲಿ ರಾಜ್ಯದ ಆರೋಗ್ಯ ಇಲಾಖೆಯು ಪುನೀತ್ ಹೃದಯ ಆರೋಗ್ಯ ಯೋಜನೆ, ಗೃಹ ಆರೋಗ್ಯ ಯೋಜನೆಗಳನ್ನು ಜಾರಿಮಾಡಿ ಮನೆ ಮನೆಗಳಲ್ಲಿಯೇ ಜನರ ಆರೋಗ್ಯ ತಪಾಸಣೆ ಮಾಡಿ ಮುಂದೆ ಆಗಬಹುದಾದ ತೊಂದರೆಗಳನ್ನು ನಿವಾರಿಸುವ ಕೆಲಸ ಮಾಡುತ್ತಿದೆ. ಅದರ ಜೊತೆಗೆ ಕಲಬೆರಕೆ ಆಹಾರ, ಅಪಾಯಕಾರಿ ರಸಾಯನಿಕಗಳನ್ನು ಅಹಾರಕ್ಕೆ ಬೆರೆಸುವುದರ ನಿಷೇಧದಂತಹ ದಿಟ್ಟ ಕ್ರಮಗಳನ್ನೂ ಕೈಗೊಂಡಿದೆ ಎಂದು ಪ್ರಶಂಸಿದರು.












Click it and Unblock the Notifications