Honeytrap: ಹನಿಟ್ರ್ಯಾಪ್ ಕೇವಲ 40 ಮಂದಿಗೆ ಅಲ್ಲ: ಹೊಸ ಸಂಖ್ಯೆ ಹೇಳಿದ ಸತೀಶ್ ಜಾರಕಿಹೊಳಿ
ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರವು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಕೆಎನ್ ರಾಜಣ್ಣ ಅವರೇ ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಬಹಿರಂಗ ಹೇಳಿಕೆ ನೀಡಿ ಶಾಕ್ ಕೊಟ್ಟಿದ್ದಾರೆ. ನನ್ನ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಹೇಳಿದ್ದರು. ಈ ವಿಚಾರವಾಗಿ ಕಾಂಗ್ರೆಸ್‌ನ ಮತ್ತೊಬ್ಬ ಸಚಿವ ಸತೀಶ್ ಜಾರಕಿಹೊಳಿ ಅವರು ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹನಿಟ್ರ್ಯಾಪ್ ನಡೆದಿರುವುದು ಕೇವಲ 40 ನಾಯಕರಿಗಲ್ಲ, ಎಂದು ಹೊಸ ಸಂಖ್ಯೆಯನ್ನು ಹೇಳಿದ್ದಾರೆ.
ಹೌದು ಈ ಹಿಂದೆ 40ಕ್ಕೂ ಹೆಚ್ಚು ಮಂದಿಗೆ ಹನಿಟ್ರ್ಯಾಪ್ ಆಗಿದೆ ಎಂದು ರಾಜಣ್ಣ ಅವರು ಸದನದಲ್ಲಿ ಹೇಳಿದ್ದರು. ಆದರೆ, ಸತೀಶ್ ಜಾರಕಿಹೊಳಿ ಅವರ ಪ್ರಕಾರ ಹನಿಟ್ರ್ಯಾಪ್‌ಗೆ ಒಳಗಾಗಿರುವುದು ಕೇವಲ 40 ಮಂದಿ ಅಲ್ಲವಂತೆ. ಅಲ್ಲದೆ ರಾಜ್ಯದಿಂದ ಮಾತ್ರವಲ್ಲ, ದೆಹಲಿಯ ಅನೇಕ ನಾಯಕರು ಹಾಗೂ ಅಧಿಕಾರಿಗಳನ್ನ ಕೂಡ ಹನಿಟ್ರ್ಯಾಪ್ ಮಾಡಲಾಗಿದೆ. ರಾಜ್ಯದಲ್ಲಿ ಕೇವಲ 40 ಮಂದಿ ಅಲ್ಲ, ಕನಿಷ್ಠ 400 ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇಲ್ಲಿ ಒಂದು ಪಕ್ಷದವರು ಎಂದಿಲ್ಲ. ಎಲ್ಲ ಪಕ್ಷಗಳ ನಾಯಕರನ್ನು ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಸಲಾಗಿದೆ. ಹನಿಟ್ರ್ಯಾಪ್ ಮೂಲಕ ಸಿಎಂಗಳಿಗೆ ಬೆದರಿಕೆ ಹಾಕಿರುವ ಹಲವು ನಿದರ್ಶನಗಳು ಹಿಂದಿನಿಂದಲೂ ಇವೆ. ತಮ್ಮ ಕೆಲಸ ಈಡೇರಿಸಿಕೊಳ್ಳಲು ಹನಿಟ್ರ್ಯಾಪ್ ಮೂಲಕ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಕೂಡ ಮಾಡ್ತಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಹನಿಟ್ರ್ಯಾಪ್ ಪ್ರಯತ್ನಗಳ ಕುರಿತು ಕೇಸ್ ದಾಖಲಿಸುವಂತೆ ಸಚಿವ ರಾಜಣ್ಣ ಅವರಿಗೆ ಹೇಳಿದ್ದೆ. ಸುಮಾರು 20 ವರ್ಷಗಳಿಂದಲೂ ಈ ಕೃತ್ಯಗಳು ನಡೆಯುತ್ತಿವೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಅಂತ್ಯ ಹಾಡಬೇಕು. ಪಾಪ, ದೆಹಲಿ ನಾಯಕರು ಅಮಾಯಕರು. ಅವರನ್ನೂ ಹನಿಟ್ರ್ಯಾಪ್‌ಗೆ ಬೀಳಿಸಲಾಗಿದೆ. ಎಲ್ಲ ಪಕ್ಷದ ನಾಯಕರೂ ಇದರಲ್ಲಿ ಸಿಲುಕಿದ್ದಾರೆ. ಮೀನಿಗೆ ಬಲೆ ಬೀಸುವಂತೆ ಹನಿಟ್ರ್ಯಾಪ್ ಬಲೆ ಬೀಸಿದ್ದಾರೆ. ಈ ಮೂಲಕ ಅವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಜಕಾರಣದಲ್ಲಿರುವವರು ಪ್ರತಿ ಹೆಜ್ಜೆಯಲ್ಲೂ ಹುಷಾರಾಗಿರಬೇಕು. ಏಕೆಂದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಒಂದು ಸಲ ಹತ್ಯೆಯಾದರೆ ಆ ಸ್ಥಾನಮಾನ ಮರಳಿ ಪಡೆಯುವುದು ತುಂಬಾ ಕಷ್ಟ ಎಂದು ಕಿವಿಮಾತು ಹೇಳಿದ್ದಾರೆ. ಈ ಹನಿಟ್ರ್ಯಾಪ್‌ನಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದೂ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರ ಮೇಲೆ ಒಂದಲ್ಲ, ಎರಡು ಬಾರಿ ಹನಿಟ್ರ್ಯಾಪ್ ಆಗಿದೆ. ಈ ಮೂಲಕ ಸಚಿವರ ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಈ ಹನಿಟ್ರ್ಯಾಪ್ ಹಿಂದೆ ಇರೋದು ಯಾರು ಎಂದು ಹೇಳಿದರೆ ಅದು ರಾಜಕೀಯ ಆರೋಪವಾಗುತ್ತೆ. ಒಟ್ಟಿನಲ್ಲಿ ಹನಿಟ್ರ್ಯಾಪ್ ಯತ್ನವಂತೂ ನಡೆದಿದೆ. ಸಚಿವರು ಕೂಡ ಈ ಬಗ್ಗೆ ದೂರು ಕೊಟ್ಟರೆ ಮಾತ್ರವೇ ಅಧಿಕೃತವಾಗುತ್ತೆ. ಇನ್ನು ಈ ಹನಿಟ್ರ್ಯಾಪ್ ಯಾರು ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದಕ್ಕಾಗಿಯೇ ಒಂದು ತಂಡ ಇದೆ. ಇದು ಎಲ್ಲ ಪಕ್ಷದವರೂ ಚರ್ಚಿಸಬೇಕಾದ ಗಂಭೀರ ವಿಷಯ ಎಂದೂ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.












Click it and Unblock the Notifications