ಕರ್ನಾಟಕದ ಹಳ್ಳಿಗಳಲ್ಲಿ ಮಹಾರಾಷ್ಟ್ರ ಯೋಜನೆ: ಸಿದ್ದರಾಮಯ್ಯ ಕೆಂಡಾಮಂಡಲ, ಸಿಎಂ ರಾಜೀನಾಮೆಗೆ ಒತ್ತಾಯ- ವರದಿ, ವಿವರ
ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಹಳ್ಳಿಗಳಲ್ಲಿ ಯೋಜನೆಗಳ ಜಾರಿಗೆ ₹54 ಕೋಟಿ ಬಿಡುಗಡೆ ಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಸರಣಿ ಟ್ವೀಟ್ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆಂದು ತಿಳಿಯಿರಿ
ಬೆಂಗಳೂರು, ಮಾರ್ಚ್ 15: ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಹಳ್ಳಿಗಳಲ್ಲಿ ಯೋಜನೆಗಳ ಜಾರಿಗೆ ₹54 ಕೋಟಿ ಬಿಡುಗಡೆ ಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಬುಧವಾರ ಸರಣಿ ಟ್ವೀಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
#ಕನ್ನಡನೆಲ ಎಂಬ ಹ್ಯಾಶ್‌ಟ್ಯಾಗ್ ಅಡಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿರುವ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವನ್ನು ಕೇಂದ್ರ ಬಿಜೆಪಿ ಸರ್ಕಾರ ಕೂಡಲೇ ವಜಾ ಮಾಡಬೇಕು. ರಾಜ್ಯದ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ' ಎಂದು ತಿಳಿಸಿದ್ದಾರೆ.

'ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿಯೊಳಗಿರುವ 865 ಹಳ್ಳಿಗಳಿಗೆ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ ಎಂಬ ಕಾರ್ಯಕ್ರಮವನ್ನು ನೀಡಲು ಹೊರಟಿರುವುದು ನಾಡಿನ ಸಾರ್ವಭೌಮತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾಕಿರುವ ಸವಾಲು' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
'ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಹಂಚಿಕೆಗೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರ ಸರ್ಕಾರ ಕಟ್ಟುಪಾಡು ಮೀರಿ ಕರ್ನಾಟಕದ ಜನರಿಗೆ ಯೋಜನೆ ಘೋಷಿಸಿದರೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸುಮ್ಮನಿರುವುದು ನೋಡಿದರೆ ಸರ್ಕಾರಗಳು ಸತ್ತಿವೆಯಾ? ಎಂಬ ಅನುಮಾನ ಬರುತ್ತಿದೆ' ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
'ನಮ್ಮ ರಾಜ್ಯದ ಒಂದಿಂಚು ಭೂಮಿಯನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಭಾಷೆ, ಸಂಸ್ಕೃತಿ, ನೆಲ, ಜಲ ಇವು ಆರೂವರೆ ಕೋಟಿ ಕನ್ನಡಿಗರ ಹಕ್ಕು ಮತ್ತು ಸಾರ್ವಭೌಮತೆಯ ಸಂಕೇತ. ಇದಕ್ಕೆ ಚ್ಯುತಿಯಾದರೆ ನಾವು ಸುಮ್ಮನಿರುವುದಿಲ್ಲ. ಪದೇ ಪದೇ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ' ಎಂದು ಮಾಜಿ ಸಿಎಂ ತಿಳಿಸಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವು, 'ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಹಳ್ಳಿಗಳಲ್ಲಿ ಯೋಜನೆಗಳ ಜಾರಿಗೆ ₹54 ಕೋಟಿ ಬಿಡುಗಡೆ ಮಾಡಿದೆ. ಬಸವರಾಜ ಬೊಮ್ಮಾಯಿ ಅವರೇ, ಕರ್ನಾಟಕದ ಅಭಿವೃದ್ಧಿ ನಿಮ್ಮಿಂದ ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಕೈ ಇಟ್ಟಿದೆಯೇ? ಮೌನದ ಮೂಲಕ ಮಹಾರಾಷ್ಟ್ರ ಸರ್ಕಾರದ ಕಾಲು ಬುಡಕ್ಕೆ ಕನ್ನಡಿಗರ ಸ್ವಾಭಿಮಾನವನ್ನು ಅಡ ಇಟ್ಟಿದ್ದೀರಾ? ಈ ಬಗ್ಗೆ ಸಿಎಂ ಮೌನವೇಕೆ?' ಎಂದು ಕೇಳಿದೆ.
'ಬೆಳಗಾವಿಯಲ್ಲಿನ ಗಡಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆಗಳ ಜಾರಿಗೆ ₹54 ಕೋಟಿ ಬಿಡುಗಡೆ ಮಾಡಿರುವುದು ಅಮಿತ್ ಶಾ ಅವರ ಕುಮ್ಮಕ್ಕಿನಿಂದಲಾ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಇತ್ತೀಚಿಗೆ ಬೆಳಗಾವಿಗೆ ಅಮಿತ್ ಶಾ ಭೇಟಿ ನೀಡಿದ್ದು ಇದಕ್ಕಾಗಿಯೇ? ಇಂದು ಬೆಳಗಾವಿ ಪ್ರವಾಸದಲ್ಲಿರುವ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಹಿತ ಕಾಯುವ ಕ್ರಮಗಳನ್ನು ಕೈಗೊಳ್ಳುವರೇ? ಎಂದು ಕಾಂಗ್ರೆಸ್ ಕೇಳಿದೆ.

'ಮುಖ್ಯಮಂತ್ರಿಗಳೇ ಕನ್ನಡಿಗರ ಸ್ವಾಭಿಮಾನವನ್ನು ಮಹಾರಾಷ್ಟ್ರಕ್ಕೆ ಅಡವಿಡ್ತಿದ್ದೀರಾ? ಈಗಲೇ ರಾಜೀನಾಮೆ ನೀಡಿ ಮನೆ ಕಡೆ ನಡೆಯಿರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
'ಪ್ರತಿಯೊಬ್ಬ ಕನ್ನಡಿಗನೂ ನಮ್ಮ ನೆಲ ಮತ್ತು ನಮ್ಮ ಭವಿಷ್ಯವನ್ನು ಉಳಿಸಲು ಧ್ವನಿ ಎತ್ತಬೇಕೆಂದು ನಾನು ವಿನಂತಿಸುತ್ತೇನೆ. ಕರ್ನಾಟಕದ ಬೆಳಗಾವಿ ಗಡಿ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದು, ಬಿಜೆಪಿ ಸರ್ಕಾರ ನಿದ್ದೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಅದಕ್ಕೆ ಅವಕಾಶ ನೀಡುತ್ತಿಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಮತ್ತು ನಮ್ಮ ಕರ್ನಾಟಕಕ್ಕಾಗಿ ನಮ್ಮ ಶಕ್ತಿ ಮೀರಿ ಹೋರಾಡುತ್ತೇವೆ' ಎಂದೂ ಡಿಕೆಶಿ ತಿಳಿಸಿದ್ದಾರೆ.












Click it and Unblock the Notifications