Lokayukta Raid: ರಾಯಚೂರು, ರಾಮನಗರ ಸೇರಿದಂತೆ ವಿವಿಧೆಡೆ ಮುಂದುವರಿದ ಲೋಕಾಯುಕ್ತ ಬೇಟೆ
Lokayukta Raid: ರಾಯಚೂರು, ಅಕ್ಟೋಬರ್ 30: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಕ್ಯಾಶುಟೆಕ್ ಸಂಸ್ಥೆಯ ಯೋಜನಾ ನಿರ್ದೇಶಕ ಶರಣ ಬಸಪ್ಪ ಪಟ್ಟೇದ್ ಮನೆ ಹಾಗೂ ಕಚೇರಿಯ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಯಚೂರು ನಗರದ ಐಡಿಎಸ್ ಎಂಟಿ ಲೇಔಟ್‌ನ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ, ಶಕ್ತಿನಗರದ ಕ್ಯಾಶುಟೆಕ್ ಕಚೇರಿ, ಅವರ ಸಂಬಂಧಿಕರ ಮನೆ ಹಾಗೂ ಅವರ ಸ್ವಗ್ರಾಮ ಲಿಂಗಸೂಗುರಿನ ಚಿಕ್ಕಹೆಸರೂರು ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಲಾಗಿದೆ.

ದೇವಸೂಗೂರಿನ ರಾಘವೇಂದ್ರ ಕಾಲೋನಿಯಲ್ಲಿ ಪಟ್ಟೇದ್ ಅವರ ಸಹೋದರಿ ಮಕ್ಕಳ ಮನೆ ಮೇಲೂ ದಾಳಿ ನಡೆಸಲಾಗಿದೆ. ಅಕ್ಕನ ಮಕ್ಕಳ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಲೋಕಾಯುಕ್ತ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆದಿದೆ. ಸದ್ಯ ಅಧಿಕಾರಿಗಳ ತಂಡ ಅಗತ್ಯ ದಾಖಲೆ ಕಲೆ ಹಾಕುತ್ತಿದೆ. ಲಿಂಗಸುಗೂರಿನ ಚಿಕ್ಕಹೆಸರೂರಿನಲ್ಲಿ ಜಮೀನು ಸೇರಿ ಆಸ್ತಿಗಳ ಶೋಧ ನಡೆಸಲಾಗುತ್ತಿದೆ. ಜಿಲ್ಲಾಡಳಿತದ ಬಹುತೇಕ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕ್ಯಾಶುಟೆಕ್ ಸಂಸ್ಥೆಗೆ ವಹಿಸಲಾಗುತ್ತಿತ್ತು.
ಕೊಳ್ಳೇಗಾಲದಲ್ಲೂ ಲೋಕಾಯುಕ್ತ ದಾಳಿ: ಫಾರಂ ಹೌಸ್, ಸಂಬಂಧಿಕರ ಮನೆ ತಲಾಶ್
ಚಾಮರಾಜನಗರ: ಇಂದು ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದು, ಕೊಳ್ಳೇಗಾಲದ ಫಾರಂ ಹೌಸ್, ಅಧಿಕಾರಿ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿ ಅಕ್ರಮ ಸಂಪತ್ತು ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನ ಕಾರ್ಮಿಕ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಅವರಿಗೆ ಸೇರಿಸ ಫಾರಂ ಹೌಸ್, ಮಾವನ ಮನೆ, ಸಂಬಂಧಿಕರ ಮನೆ ಸೇರಿ 9 ಕಡೆ ಈ ದಾಳಿ ನಡೆಸಲಾಗಿದೆ.
ಕೊಳ್ಳೇಗಾಲದ ಉಪ್ಪಾರ ಮೋಳೆಯಲ್ಲಿರುವ ಫಾರಂ ಹೌಸ್, ಕೊಳ್ಳೇಗಾಲದ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ಕಡತಗಳು, ಆಸ್ತಿ ಪತ್ರಗಳನ್ನು ಹುಡುಕಾಡುತ್ತಿದ್ದು, ಆರಕ್ಕೂ ಹೆಚ್ಚು ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಚನ್ನಪಟ್ಟಣದಲ್ಲೂ ಲೋಕಾಯುಕ್ತ ದಾಳಿ
ರಾಮನಗರ: ಕೆಐಡಿಬಿ ಇಂಜಿನಿಯರ್ ಶಶಿಕುಮಾರ್ ಬಾಮೈದನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಟೌನ್ ಕುವೆಂಪು ನಗರದಲ್ಲಿರುವ ಮದನ್ ಎಂಬುವರ ಮನೆ ಮೇಲೆ ದಾಳಿ ಮಾಡಿರುವ ಲೋಕಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ. ಬೆಳಗ್ಗೆ 5 ಗಂಟೆಗೆ ಸುಮಾರಿಗೆ ಟಾಟಾ ಸುಮೋ ಕಾರಿನಲ್ಲಿ ಬಂದಿರುವ ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಕೆಆರ್‌ಡಿಎಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಶಿಕುಮಾರ್ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ದಾಳಿ ಮುಂದುವರಿದ ಭಾಗವಾಗಿ ಶಶಿಕುಮಾರ್ ಮಾವ ರಾಮಲಿಂಗಯ್ಯ ಅವರ ಚನ್ನಪಟ್ಟಣ ನಗರದ ವಿವೇಕಾನಂದ ನಗರದ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.












Click it and Unblock the Notifications