ಮುಷ್ಕರ ವಾಪಸ್ : ಮಾ.26, 27ರಂದು ಬಾರ್ ತೆರೆದಿರುತ್ತೆ
ಬೆಂಗಳೂರು, ಮಾ. 26 : ಅಬಕಾರಿ ಶುಲ್ಕ ಹೆಚ್ಚಳದ ಪ್ರಸ್ತಾಪ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮದ್ಯ ಮಾರಾಟಗಾರರ ಒಕ್ಕೂಟ ಕರೆ ನೀಡಿದ್ದ ಎರಡು ದಿನಗಳ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಆದ್ದರಿಂದ ಮಾ.26 ಮತ್ತು 27ರಂದು ಬಾರ್‌ಗಳು ತೆರೆದಿರುತ್ತವೆ.
ಬುಧವಾರ ರಾತ್ರಿ ಮದ್ಯ ಮಾರಾಟಗಾರರ ಒಕ್ಕೂಟದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಒಕ್ಕೂಟ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಬಜೆಟ್ ಅಧಿವೇಶನದ ಬಳಿಕ ಈ ಬಗ್ಗೆ ಸಭೆ ನಡೆಸಿ ಬೇಡಿಕೆ ಈಡೇರಿಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.[ಮದ್ಯ ಮಾರಾಟಗಾರರ ಮುಷ್ಕರ]

ಮುಖ್ಯಮಂತ್ರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಮಾ.26 ಮತ್ತು 27ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟದ ಕಾರ್ಯದರ್ಶಿ ಎಂ.ಬಿ.ಜಾಧವ ಹೇಳಿದ್ದಾರೆ. [ಬೀಡಿ, ಸಿಗರೇಟು, ಹೆಂಡಕ್ಕೆ ತೆರಿಗೆ ಕಟ್ಟಿಕಟ್ಟಿ ಸುಸ್ತಾಯ್ತಾ?!]
ಮಾ.23ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮದ್ಯ ಮಾರಾಟಗಾರರ ಒಕ್ಕೂಟ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭಿಸಿತ್ತು. ಮಾ.26 ಮತ್ತು 27ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ಗೂ ಮುನ್ನ ನಡೆಸಿದ ಸಭೆಯಲ್ಲಿ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾವನ್ನು ಮಾಡಿರಲಿಲ್ಲ ಎಂದು ಆರೋಪಿಸಿದ್ದ ಒಕ್ಕೂಟ ಪ್ರತಿಭಟನೆ ದಾರಿ ಹಿಡಿದಿತ್ತು.












Click it and Unblock the Notifications