ರಾಜ್ಯ ವಿಧಾನ ಪರಿಷತ್ ಮೂರು ಸ್ಥಾನಕ್ಕೆ ಜೂನ್ 30 ರಂದು ಉಪಚುನಾವಣೆ: ಅಂದೇ ಫಲಿತಾಂಶ
ಬೆಂಗಳೂರು, ಜೂನ್. 07: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು ಸದಸ್ಯರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಜೂನ್ 30 ರಂದು ಉಪಚುನಾವಣೆ ನಡೆಸಲಿದೆ.
ಚುನಾವಣಾ ಆಯೋಗವು ಹೊರಡಿಸಿದ ಪತ್ರಿಕಾ ಟಿಪ್ಪಣಿಯ ಪ್ರಕಾರ, ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ವಿಧಾನಸಭೆ ಚುನಾವಣೆಗೂ ಮುನ್ನ ಪರಿಷತ್ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹೀಗಾಗಿ ತೆರವಾಗಿದ್ದ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಪರಿಷತ್‌ಗೆ ರಾಜೀನಾಮೆ ನೀಡಿ ಈ ಮೂವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಇವರಲ್ಲಿ ಕಾಂಗ್ರೆಸ್‌ನಿಂದ ಲಕ್ಷ್ಮಣ ಸವದಿ ಮಾತ್ರ ಗೆಲುವು ಸಾಧಿಸಿದ್ದಾರೆ. ಗುರ್ಮಿಟ್ಕಲ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಮತ್ತು ರಾಣೆಬೆನ್ನೂರಿನಿಂದ ಎನ್‌ಸಿಪಿ ಅಭ್ಯರ್ಥಿ ಆರ್ ಶಂಕರ್ ಸೋಲು ಕಂಡಿದ್ದಾರೆ.
ವಿಧಾನಸ ಪರಿಷತ್ ಚುನಾವಣೆಗೆ ಜೂನ್ 13 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 20. ನಾಮಪತ್ರಗಳ ಪರಿಶೀಲನೆ ಜೂನ್ 21 ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಜೂನ್ 23 ಆಗಿದೆ.

ಜೂನ್ 30 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ವಿಧಾನಸಭಾ ಸದಸ್ಯರು ಮತ ಚಲಾಯಿಸುವ ಮೂಲಕ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಜುಲೈ 4ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ಆರ್ ಶ೦ಕರ್ ಅವರ ಅವಧಿ 2026 ರ ಜೂನ್ 30ಕ್ಕೆ, ಬಾಬುರಾವ್ ಚಿ೦ಚನಸೂರು ಅವರ ಪರಿಷತ್ ಸದಸ್ಯತ್ವ ಅವಧಿ 2024ರ ಜೂನ್ 17ಕ್ಕೆ ಹಾಗೂ ಲಕ್ಷ್ಮಣ ಸವದಿ ಸದಸ್ಯತ್ವ ಅವಧಿ 2028ರ ಜೂನ್ 14ಕ್ಕೆ ಕೊನೆಗೊಳ್ಳಲ್ಲಿತ್ತು.
ಇನ್ನು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎನ್‌ಎಸ್ ಬೋಸರಾಜು ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಆದರೆ ಅವರು ಕರ್ನಾಟಕ ವಿಧಾನಮಂಡಲದ ಯಾವುದೇ ಉಭಯ ಸದನಗಳಲ್ಲಿ ಸದಸ್ಯರಾಗಿಲ್ಲ. ಹೀಗಾಗಿ ಅವರನ್ನು ಚುನಾವಣೆಗೆ ನಿಲ್ಲಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.












Click it and Unblock the Notifications