Karnataka Lakes Water Level: ಉತ್ತಮ ಮಳೆಯಾದರು ನೀರು ಕಾಣದ ಕೆರೆಗಳು: ಶೇ.60ರಷ್ಟು ಕೆರೆಗಳಲ್ಲಿ ಅರ್ಧಕ್ಕಿಂತ ಕಡಿಮೆ ನೀರು!
ಬೆಂಗಳೂರು ಸೆಪ್ಟೆಂಬರ್ 17: ಕರ್ನಾಟಕದಲ್ಲಿ ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿದೆ. ಆದರೆ ರಾಜ್ಯದ ಬಹುತೇಕ ಕೆರೆಗಳಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ನೀರಿಲ್ಲ. ಇದಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದಾರೆ. ಮಳೆಯಾದರೂ ಕೆರೆಯಲ್ಲಿ ನೀರಿಲ್ಲ ಎನ್ನುವ ವಿಚಾರ ಜನರನ್ನು ಆತಂಕಕ್ಕೆ ತಳ್ಳಿದೆ.
ನೈಋತ್ಯ ಮುಂಗಾರು, ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತಾಪಿ ಸಮುದಾಯಕ್ಕೆ ಒಳ್ಳೆಯ ಸುದ್ದಿಯನ್ನು ನೀಡುವಲ್ಲಿ ವಿಫಲವಾಗಿದೆ. ಇದರಿಂದಾಗಿ ರಾಜ್ಯದ 60% ಕ್ಕಿಂತ ಹೆಚ್ಚು ಕೆರೆಗಳು ಅರ್ಧಕ್ಕಿಂತ ಕಡಿಮೆ ಭರ್ತಿಯಾಗಿವೆ. ಇದು ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆಯ ಬಗ್ಗೆ ಆತಂಕವನ್ನು ಸೃಷ್ಟಿ ಮಾಡಿದೆ.

ಹೌದು.... ಸಣ್ಣ ನೀರಾವರಿ, ದೊಡ್ಡ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಡಿಯಲ್ಲಿರುವ 40,225 ಜಲಮೂಲಗಳ ಪೈಕಿ ಸುಮಾರು 25,000 ಪ್ರಸ್ತುತ ತಮ್ಮ ಸಂಗ್ರಹಣಾ ಸಾಮರ್ಥ್ಯದ 30-50% ವರೆಗೆ ನೀರನ್ನು ಹೊಂದಿದ್ದರೆ, 15,225 ಕೆರೆಗಳಲ್ಲಿ ಮಾತ್ರ ಶೇಕಡ 50ಕ್ಕಿಂತ ಹೆಚ್ಚು ನೀರು ಸಂಗ್ರಹವಿದೆ.
ರಾಜ್ಯದಲ್ಲಿ ಉತ್ತಮ ಮಳೆಯಾದರು ನೀರು ಕಾಣದ ಕೆರೆಗಳು
ಸರ್ಕಾರದ ಅಂಕಿಅಂಶಗಳ ಪ್ರಕಾರ 3,683 ಸಣ್ಣ ನೀರಾವರಿ ಕೆರೆಗಳಲ್ಲಿ ಶೇಕಡ 40ರಷ್ಟು ಕೆರೆಗಳಲ್ಲಿ ಮಾತ್ರ ಶೇಕಡ 50ಕ್ಕಿಂತ ಹೆಚ್ಚು ನೀರು ಇದೆ. ಇನ್ನೂ ಶೇಕಡ 50ರಷ್ಟು ಕೆರೆಗಳಲ್ಲಿ ಶೇಕಡ 30ರಷ್ಟು ರಿಂದ ಶೇಕಡ 50ರಷ್ಟು ಮಾತ್ರ ನೀರಿದೆ. ಉಳಿದ ಶೇಕಡ 10ರಷ್ಟು ಕೆರೆಗಳು ಒಣಗಿ ಹೋಗಿವೆ. ಅದೇ ರೀತಿ ಪ್ರಮುಖ ನೀರಾವರಿಯ ಭಾಗವಾಗಿರುವ 2,400 ಕೆರೆಗಳಲ್ಲಿ 1,322 ಕೆರೆಗಳು ಅರ್ಧದಷ್ಟು ತುಂಬಿವೆ.

ಇದರಿಂದ ರಾಜ್ಯದಲ್ಲಿ ನೀರಿನ ಅಭಾವ ಎದುರಾಗುವ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾದರೂ ಕೆರೆಗಳು ಭರ್ತಿಯಾಗಿಲ್ಲ. ಇದಕ್ಕೆ ಕಾರಣವನ್ನು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಪರಿಸ್ಥಿತಿಯ ಹಿಂದಿನ ಕಾರಣವೆಂದರೆ ಕಡಿಮೆ ಮಳೆ ಸೇರಿದಂತೆ ಅನೇಕ ಅಂಶಗಳನ್ನು ಎತ್ತಿ ತೋರಿಸಲು ಸರ್ಕಾರಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ನೀರಾವರಿ ತಜ್ಞರ ಪ್ರಕಾರ ಇದಕ್ಕೆ ಕಾರಣ ಕಾಲುವೆಗಳಲ್ಲಿ ಬೆಳೆದ ಕಳೆ ಮತ್ತು ಕಾಲುವೆಗಳ ಹಾನಿಗೊಳಗಾದ ಒಳಗೋಡೆಗಳ ಮರುಸ್ಥಾಪನೆಯ ಕೊರತೆ ಎಂದು ಗಮನ ಸೆಳೆದಿದ್ದಾರೆ.
ಹೌದು... ರಾಜ್ಯದಲ್ಲಿ ಕೆರೆಗಳ ದುರಸ್ಥಿ ಕಾರ್ಯ ಆಗಬೇಕಿದೆ. ಆದರೆ ಅಧಿಕಾರಿಗಳು ಇತ್ತ ಗಮನ ಹರಿಸದೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಸನ್ನಿವೇಶದಲ್ಲಿ ಲಿಫ್ಟ್ ನೀರಾವರಿಯನ್ನು ಒಳಗೊಂಡಿರುವ ಟ್ಯಾಂಕ್ ಫಿಲ್ಲಿಂಗ್ ಸ್ಕೀಮ್ (ಟಿಎಫ್‌ಎಸ್) ಮೂಲಕ ಕೆರೆಗಳನ್ನು ತುಂಬಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇದು ಒಡೆದ ಬಿಂದಿಗೆಯಲ್ಲಿ ನೀರು ತುಂಬಿದಂತೆ ಎನ್ನುವುದು ಕೆಲವರ ವಾದವಾಗಿದೆ.

ಆಗಸ್ಟ್ ಅಂತ್ಯದವರೆಗೆ ರಾಜ್ಯದಲ್ಲಿ 847 ಮಿಮೀ ಮಳೆಯಾಗಿದೆ. ಇದು ಸಾಮಾನ್ಯ 691 ಮಿಮೀಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಅಂದರೆ ಸರಿಸುಮಾರು ಶೇಕಡ 23ರಷ್ಟು ಹೆಚ್ಚುವರಿ ಮಳೆಯಾಗಿದೆ. ಕುಡಿಯುವ ನೀರು ಮತ್ತು ನೀರಾವರಿಗಾಗಿ ಜನರು ಪ್ರಧಾನವಾಗಿ ಕೆರೆಗಳನ್ನು ಅವಲಂಬಿಸಿರುವ ದಕ್ಷಿಣ-ಆಂತರಿಕ ಕರ್ನಾಟಕದ ಭಾಗಗಳು ಸಾಕಷ್ಟು ಮಳೆಗೆ ಸಾಕ್ಷಿಯಾಗಿದೆ.
ಮಳೆಯಾದರು ಕೆರೆಯಲ್ಲಿ ನೀರು ಕಾಣದ ಜಿಲ್ಲೆಗಳು
ಆದರೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಜೂನ್ ಮತ್ತು ಜುಲೈನಲ್ಲಿ ಸಾಕಷ್ಟು ಮಳೆಯಾಗಿಲ್ಲ. ಈ ಜಿಲ್ಲೆಗಳಲ್ಲಿ ಕಳೆದ ತಿಂಗಳು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರೂ, ಈ ತಿಂಗಳು ಒಣಹವೆಯನ್ನು ಅನುಭವಿಸುತ್ತಿವೆ. ಇದರಿಂದಾಗಿ ಈ ಭಾಗದ ಕೆರೆಗಳು ಹೆಚ್ಚುವರಿಯಾಗಿ ನೀರನ್ನು ಕಂಡಿಲ್ಲ. ಇನ್ನೂ ರಾಯಚೂರು, ಗುಲ್ಬರ್ಗ, ಯಾದಗಿರಿ, ಗದಗ, ಕೊಪ್ಪಳದಲ್ಲೂ ಹೆಚ್ಚೇನು ಮಳೆಯಾಗಿಲ್ಲ. ಈ ಭಾಗದಲ್ಲಿ ನೀರು ಗಗನಕುಸುಮವಾಗುವ ಆತಂಕ ಎದುರಾಗಿದೆ.

ಈ ಬಗ್ಗೆ ಉಪ ತಾಂತ್ರಿಕ ಸಲಹೆಗಾರ ಜೈಪ್ರಕಾಶ್ ಕೆ ಮಾತನಾಡಿ, 'ಉತ್ತಮ ಮುಂಗಾರು ಮಳೆಯಿಂದಾಗಿ ಅಣೆಕಟ್ಟುಗಳು ಮತ್ತು ಸಮತೋಲನ ಜಲಾಶಯಗಳು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು ಜೂನ್‌ನಲ್ಲಿಯೇ ತುಂಬಿವೆ. ಅಣೆಕಟ್ಟುಗಳಿಂದ ನೀರು ಹರಿಸುವುದರಿಂದ ಪ್ರಮುಖ ನದಿ ಜಲಾನಯನ ಪ್ರದೇಶಗಳಲ್ಲಿನ ಕೆರೆಗಳಿಗೆ ಒಳಹರಿವು ಹೆಚ್ಚಾಗಲಿದೆ" ಎಂದು ಹೇಳಿದ್ದಾರೆ.
ಈ ನೈಋತ್ಯ ಮಾನ್ಸೂನ್ ಋತುವಿನಲ್ಲಿ ರಾಜ್ಯದಾದ್ಯಂತ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದರೆ ಈ ಬಾರಿ ರಾಜ್ಯದ ಮಲೆನಾಡು ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಆದರೆ ಅನೇಕ ಪ್ರದೇಶಗಳು ಇನ್ನೂ ಮಳೆಯನ್ನೇ ಕಂಡಿಲ್ಲ. ಮಳೆ ಅಭಾವ ಹಾಗೂ ದುರಸ್ಥಿಯಿಂದಾಗಿ ರಾಜ್ಯದ ಹೆಚ್ಚಿನ ಕೆರೆಗಳು ಬತ್ತಿ ಹೋಗಿವೆ. ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌ಎಸ್ ಬೋಸ್‌ರಾಜು ಹೇಳಿದ್ದಾರೆ.
ಕೆರೆ ತುಂಬಿಸಲು ಮುಂದಾದ ಸರ್ಕಾರ
ಹೀಗಾಗಿ ಕರ್ನಾಟಕದ ದಕ್ಷಿಣ-ಆಂತರಿಕ ಮತ್ತು ಉತ್ತರ-ಆಂತರಿಕ ಎರಡೂ ಮಳೆಯಾಶ್ರಿತ ಪ್ರದೇಶಗಳಲ್ಲಿನ ಕೆರೆಗಳು ನೈಸರ್ಗಿಕ ನೀರಿನ ಹರಿವನ್ನು ಪಡೆಯುವಲ್ಲಿ ವಿಫಲವಾಗಿವೆ. ಅಂತಹ ಕೆರೆಗಳನ್ನು TFS ಅಡಿಯಲ್ಲಿ ಅಣೆಕಟ್ಟುಗಳಿಂದ ನೀರನ್ನು ವರ್ಗಾಯಿಸುವ ಮೂಲಕ ತುಂಬಿಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು.
ಒಟ್ಟಿನಲ್ಲಿ ತಜ್ಞರು ಹೇಳುವ ಪ್ರಕಾರ ಕೆರೆಗಳ ದುರಸ್ಥಿ ಕಾರ್ಯ ಆಗಬೇಕಿದೆ. ಆದರೆ ಇದನ್ನು ಪರಿಗಣಿಸದೆ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ತರಾತುರಿಯಲ್ಲಿದೆ. ಹೀಗಾದಲ್ಲಿ ಕೆರೆಯಲ್ಲಿ ನೀರು ಉಳಿಯಲು ಸಾಧ್ಯವಿಲ್ಲ, ಜನರು ನೀರು ಕೂಡ ಕಾಣಲು ಸಾಧ್ಯವಿಲ್ಲ. ಸರ್ಕಾರದ ಕೆರೆ ತುಂಬಿಸುವ ಪ್ರಯತ್ನ ಯಶಸ್ವಿಯಾದರೂ ಜನಗಳಿಗೆ ಅದರ ಉಪಯೋಗ ಆಗುವುದಿಲ್ಲ ಎನ್ನುವುದಂತು ಸತ್ಯ.












Click it and Unblock the Notifications