ಕ್ಷೇತ್ರ ವಿಂಗಡನೆ ಕಸರತ್ತು: ಪಟ್ಟು ಸಡಿಲಿಸದ ಕೈ-ಜೆಡಿಎಸ್ ಮುಖಂಡರು

ನವದೆಹಲಿ, ಮಾರ್ಚ್ 12: ಜೆಡಿಎಸ್-ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದೆಯಾದರೂ ಕ್ಷೇತ್ರ ವಿಂಗಡನೆ ಅಂತಿಮವಾಗುತ್ತಿಲ್ಲ. ಎರಡೂ ಪಕ್ಷಗಳು ಕೆಲವು ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿದ್ದು, ಅಂತಿಮ ಪಟ್ಟಿ ಘೋಷಿಸಲು ತಡವಾಗುತ್ತಿದೆ.
ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ವಿಜಯಪುರ, ಬೆಂಗಳೂರು ಉತ್ತರ ಮತ್ತು ಉತ್ತರ ಕನ್ನಡ ಕ್ಷೇತ್ರಗಳು ಯಾರಿಗೆ ಸಿಗಬೇಕು ಎಂಬ ಬಗ್ಗೆ ನಿನ್ನೆ ಸುದೀರ್ಘ ಚರ್ಚೆ ನಡೆದಿದೆ ಆದರೆ ಅಂತಿಮ ನಿರ್ಧಾರಕ್ಕೆ ಬರಲು ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ವಿಫಲವಾಗಿವೆ.
ಸೀಟು ಹಂಚಿಕೆ: ಜೆಡಿಎಸ್‌ಗೆ 7, ಕಾಂಗ್ರೆಸ್ 21: ಯಾವ ಕ್ಷೇತ್ರ ಯಾರಿಗೆ?
ಹಾಸನ, ಮಂಡ್ಯ ಜೆಡಿಎಸ್‌ಗೆ ಈಗಾಗಲೇ ಒಪ್ಪಿಸಿಯಾಗಿದೆ. ಆದರೆ ಇನ್ನೂ ಐದು ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮೈಸೂರು ಹಾಗೂ ತುಮಕೂರಿನ ಮೇಲೆ ಜೆಡಿಎಸ್ ವಿಶೇಷವಾಗಿ ಕಣ್ಣಿಟ್ಟಿರುವುದು ಕಾಂಗ್ರೆಸ್ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ತುಮಕೂರು ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಸಂಸದರೇ ಇದ್ದಾರೆ. ಹಾಗಾಗಿ ಅದನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಇನ್ನು ಮೈಸೂರನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ. ಚಿಕ್ಕಬಳ್ಳಾಪುರದ ಮೇಲೂ ಜೆಡಿಎಸ್ ಕಣ್ಣು ಹಾಕಿದೆ. ಆದರೆ ಅಲ್ಲಿಯೂ ಸಹ ಕಾಂಗ್ರೆಸ್ ಸಂಸದರು ಹಾಲಿ ಇದ್ದಾರೆ.

ಹಾಲಿ ಸಂಸದರ ಕ್ಷೇತ್ರ ಬದಲಾವಣೆ ಇಲ್ಲ
2014ರಲ್ಲಿ ದೇಶದಾದ್ಯಂತ ಮೋದಿ ಅಲೆ ಇದ್ದಾಗ್ಯೂ ಸಹ ಕರ್ನಾಟಕದಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದಿತ್ತು, ಹಾಗಾಗಿ ಯಾವುದೇ ಕಾರಣಕ್ಕೂ ಹಾಲಿ ಇರುವ ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂಬುದು ಕಾಂಗ್ರೆಸ್ ಮುಖಂಡರ ಪಟ್ಟು.

ಹಳೆ ಮೈಸೂರು ಭಾಗದ ಮೇಲೆ ಕಣ್ಣು
ಮಂಡ್ಯ, ಹಾಸನದ ಜೊತೆಗೆ, ಹಳೆ ಮೈಸೂರು ಭಾಗದ ಇನ್ನೂ ಎರಡು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದು ಜೆಡಿಎಸ್‌ನ ಲೆಕ್ಕಾಚಾರ. ಆದರೆ ಇದಕ್ಕೆ ಕಾಂಗ್ರೆಸ್ ಒಪ್ಪುತ್ತಿಲ್ಲ, ಜೆಡಿಎಸ್‌ಗೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಕೊಟ್ಟರೆ ಈ ಭಾಗದಲ್ಲಿ ಕಾಂಗ್ರೆಸ್‌ನ ಅಸ್ಮಿತೆಗೆ ಧಕ್ಕೆ ಆಗುತ್ತದೆ ಎಂಬುದು ಅದರ ಲೆಕ್ಕಾಚಾರ.
ಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಎಲ್ಲ ನಾಯಕರಿಂದಲೂ ಅಭಿಪ್ರಾಯ ಸಂಗ್ರಹ
ನಿನ್ನೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಎಂಬಿ.ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ಪರಮೇಶ್ವರ್ ಅವರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಕೆ.ಸಿ.ವೇಣುಗೋಪಾಲ್ ಅವರು ಅಭಿಪ್ರಾಯ ಪಡೆದಿದ್ದಾರೆ. ಆ ನಂತರ ನಡೆದ ಸಭೆಯಲ್ಲೂ ಬಹು ಸಮಯ ಕ್ಷೇತ್ರ ಹಂಚಿಕೆ ಚರ್ಚೆ ಆಗಿದೆ.

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
ಇಂದು ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆಯು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆಯುತ್ತಿರುವ ಕಾರಣ ಇಂದು ಸೀಟು ಹಂಚಿಕೆ ಸಂಬಂಧ ಸಭೆ ನಡೆಯುವುದು ಅನುಮಾನ. ನಾಳೆ ಅಥವಾ ನಾಡಿದ್ದು ಕ್ಷೇತ್ರ ಹಂಚಿಕೆ ಅಂತಿಮವಾಗುವ ಸಾಧ್ಯ ಇದ್ದು, ಬಹಿರಂಗ ಘೋಷಣೆ ಸಹ ಆಗಲಿದೆ.
ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಹೊಸ ತಂತ್ರಕ್ಕೆ ಮೊರೆಹೋದ ಕಾಂಗ್ರೆಸ್

ಕಾಂಗ್ರೆಸ್‌ಗೆ 21, ಜೆಡಿಎಸ್‌ಗೆ 7
ಕಾಂಗ್ರೆಸ್ ಪಕ್ಷವು 21 ಹಾಗೂ ಜೆಡಿಎಸ್ ಪಕ್ಷವು 7 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಬಹುತೇಕ ಅಂತಿಮವಾಗಿದೆ. ಮಂಡ್ಯ, ಹಾಸನ, ಶಿವಮೊಗ್ಗ ಕ್ಷೇತ್ರಗಳು ಸಹ ಜೆಡಿಎಸ್‌ಗೆ ಎನ್ನುವುದು ಸಹ ತೀರ್ಮಾನವಾಗಿಬಿಟ್ಟಿದೆ. ವಿಜಯಪುರ, ಬೆಂಗಳೂರು ಉತ್ತರ, ಉತ್ತರ ಕನ್ನಡ ಕ್ಷೇತ್ರಗಳು ಸಹ ಜೆಡಿಎಸ್ ಪಾಲಿಗೆ ಹೋಗಲಿವೆ. ಆದರೆ ಮೈಸೂರು ಮತ್ತು ತುಮಕೂರು ಕ್ಷೇತ್ರಗಳ ಹಂಚಿಕೆ ನಡುವೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.