Honey Trap: ಹನಿಟ್ರ್ಯಾಪ್ ಪ್ರಕರಣ, ತನಿಖೆ ಕೋರಿ ಸುಪ್ರೀಂಗೆ ಪಿಐಎಲ್
ಬೆಂಗಳೂರು, ಮಾರ್ಚ್ 24: ಕರ್ನಾಟಕ ರಾಜಕೀಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವರು ಸೇರಿದಂತೆ ಹಲವರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈ ಪ್ರಕರಣ ಈಗ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದೆ. ಈ ಆರೋಪದ ಬಗ್ಗೆ ಸ್ವತಂತ್ರ ತನಿಖೆಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಆರೋಪದ ಕುರಿತು ಮುಖ್ಯಮಂತ್ರಿಗಳಿಂದ ವಿವರವನ್ನು ಪಡೆದಿದ್ದಾರೆ.
ಸೋಮವಾರ ಈ ಕುರಿತು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆ ಮಾಡಲಾಗಿದೆ. ಸರ್ಕಾರದ ಹಿರಿಯ ಸಚಿವರು, ನ್ಯಾಯಾಧೀಶರು ಸೇರಿದಂತೆ ಹಲವರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಆರೋಪವಿದ್ದು, ಈ ಕುರಿತ ಪಿಐಎಲ್ ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಗಿದೆ.

ಮಾಧ್ಯಮಗಳ ವರದಿ ಆಧರಿಸಿ ಧನ್‌ಬಾದ್ ನಿವಾಸಿ ವಿನಯ್ ಕುಮಾರ್ ಸಿಂಗ್ ಈ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ವಿನಯ್ ಕುಮಾರ್ ಪರವಾಗಿ ವಕೀಲ ವರುಣ್ ಕುಮಾರ್ ಸಿಂಗ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಿದರು.
ಕಳೆದ ಗುರುವಾರ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಧುಗಿರಿಯ ಕಾಂಗ್ರೆಸ್ ಶಾಸಕ, ಸಹಕಾರ ಸಚಿವ ಕೆ. ಎನ್. ರಾಜಣ್ಣ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿದ್ದರು. ಬಳಿಕ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷ ಬಿಜೆಪಿ ಈ ಕುರಿತು ಸಿಬಿಐ ಅಥವ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿದೆ.
ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಸೇರಿ ಸುಮಾರು 48 ಜನರು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದ್ದರಿಂದ ಈ ಕುರಿತು ಸ್ವತಂತ್ರ್ಯವಾದ ತನಿಖೆಯಾಗಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದೇವೆ ಎಂದು ವಕೀಲ ವರುಣ್ ಕುಮಾರ್ ಸಿಂಗ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು.

ವಿಚಾರಣೆಗೆ ಒಪ್ಪಿಗೆ: ಮುಖ್ಯ ನ್ಯಾಯಮೂರ್ತಿಗಳು ಈ ಪಿಐಎಲ್ ವಿಚಾರಣೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ಅಥವ ಮಂಗಳವಾರ ಅರ್ಜಿಯ ವಿಚಾರಣೆ ನಡೆಯಲಿದ್ದು, ಕೋರ್ಟ್ ತನಿಖೆಗೆ ಆದೇಶ ಮಾಡಲಿದೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪಿಐಎಲ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿಯೇ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಹಾಲಿ ಸಚಿವರೇ ಈ ಕುರಿತು ಸದನದಲ್ಲಿ ಮಾತನಾಡಿದ್ದಾರೆ. ಆದ್ದರಿಂದ ಈ ಕುರಿತು ಸ್ವತಂತ್ರ ತನಿಖೆಯಾಗಬೇಕು ಎಂದು ಮನವಿ ಮಾಡಲಾಗಿದೆ.
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ವಿಚಾರ ಪ್ರಸ್ತಾಪವಾದಾಗ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದರೆ ಇಲ್ಲಿಯ ತನಕ ಹನಿಟ್ರ್ಯಾಪ್ ಕುರಿತು ಯಾರೂ ಸಹ ದೂರು ನೀಡಿಲ್ಲ. ನನ್ನನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದ ಸಚಿವ ಕೆ. ಎನ್. ರಾಜಣ್ಣ ಸಹ ದೂರು ನೀಡಿಲ್ಲ.
ಹನಿಟ್ರ್ಯಾಪ್ ಆರೋಪದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಭಾರೀ ಚರ್ಚೆ ಆರಂಭವಾಗಿದೆ. ಕರ್ನಾಟಕ ಸರ್ಕಾರ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಯಾವುದೇ ಎಸ್‌ಐಟಿ ರಚನೆ ಮಾಡಿಲ್ಲ. ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿದ್ದು, ಯಾವ ತನಿಖೆಗೂ ಇನ್ನೂ ಆದೇಶವನ್ನು ಮಾಡಿಲ್ಲ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಹನಿಟ್ರ್ಯಾಪ್ ಬಗ್ಗೆ ಏಕೆ ಮೌನವಾಗಿದೆ? ಎಂಬುದು ಪ್ರಶ್ನೆಯಾಗಿದೆ. ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಸ್ವತಂತ್ರ ತನಿಖೆಗೆ ಆದೇಶ ನೀಡಲಿದೆಯೇ ಎಂದು ಅರ್ಜಿ ವಿಚಾರಣೆ ಬಳಿಕ ತಿಳಿಯಲಿದೆ.












Click it and Unblock the Notifications