ನಾಲ್ವರು ಪರಿಷತ್ ಸದಸ್ಯರಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆ. 24 : ವಿಧಾನಪರಿಷತ್ತಿಗೆ ನಾಮ ನಿರ್ದೇಶನಗೊಂಡ ಸದಸ್ಯರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ನಾಮ ನಿರ್ದೇಶನದ ಸಮಯದಲ್ಲಿ ನಿಯಮ ಪಾಲನೆ ಆಗಿಲ್ಲ ಎಂಬ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಎಂಎಲ್‌ಸಿಗಳಿಗೆ ನೋಟಿಸ್ ನೀಡಿದೆ.
ಸೋಮವಾರ ಕರ್ನಾಟಕ ಹೈಕೋರ್ಟ್ ವಿಧಾನಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜಾ ಮತ್ತು ಇಕ್ಬಾಲ್ ಅಹ್ಮದ್ ಸರಡಗಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ಮುಂದೂಡಿದೆ. [ಪರಿಷತ್ ನಾಮನಿರ್ದೇಶನದ ಗೊಂದಲಕ್ಕೆ ತೆರೆ]

ಪರಿಷತ್ತಿಗೆ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಿಲ್ಲ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಪಿ.ಕೋದಂಡರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಏಕ ಸದಸ್ಯ ಪೀಠ, ನಾಲ್ವರು ಸದಸ್ಯರಿಗೆ ನೋಟಿಸ್ ನೀಡಿದೆ.
ವಿವಾದವೇಕೆ : ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ಸಾಹಿತ್ಯ, ಕಲೆ, ವಿಜ್ಞಾನ, ಶಿಕ್ಷಣ, ಸಾಮಾಜಿಕ ಸೇವೆಯ ಅನುಭವ ಸೇರಿದಂತೆ ಸಾಮಾಜಿಕ ಕ್ಷೇತ್ರದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದವರನ್ನು ನಾಮ ನಿರ್ದೇಶನ ಮಾಡಬೇಕು ಎಂಬ ನಿಮಯವಿದೆ.
ಆದರೆ, ವಿ.ಎಸ್.ಉಗ್ರಪ್ಪ, ಅಬ್ದುಲ್ ಜಬ್ಬಾರ್, ಐವಾನ್ ಡಿ'ಸೋಜಾ ಮತ್ತು ಇಕ್ಬಾಲ್ ಅಹ್ಮದ್ ಸರಡಗಿ ಸಕ್ರಿಯ ರಾಜಕಾರಣಿಗಳು. ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಇದರಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಪ್ರಕರಣದಲ್ಲಿ ನಾಮ ನಿರ್ದೇಶನಗೊಂಡ ಇನ್ನೊಬ್ಬ ಸದಸ್ಯೆ ನಟಿ ಜಯಮಾಲಾ ಅವರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಆದರೆ, ಚಲನಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕಾರಣ ಜಯಮಾಲಾ ಅವರಿಗೆ ನೋಟಿಸ್ ನೀಡಿಲ್ಲ.
ಅಂದಹಾಗೆ ರಾಜ್ಯ ಸರ್ಕಾರ ಕಳುಹಿಸಿದ್ದ ನಾಮ ನಿರ್ದೇಶಿತರ ಪಟ್ಟಿಗೆ ಜೂ.25ರಂದು ರಾಜ್ಯಪಾಲರು ಅಂಕಿತ ಹಾಕಿದ್ದರು. ಜೂ.30ರ ನಂತರ 5 ಸದಸ್ಯರು ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.












Click it and Unblock the Notifications