ಸಚಿವ ಡಿ.ಸುಧಾಕರ್ ವಿರುದ್ದ ಎಫ್‌ಐಆರ್ : ಹೈಕೋರ್ಟ್ ಮಧ್ಯಂತರ ಆದೇಶದಲ್ಲೇನಿದೆ?
ಬೆಂಗಳೂರು. ಸೆ 16 : ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಸದ್ಯ ಬಂಧನ ಭೀತಿಯಿಂದ ಪರಾಗಿದ್ದಾರೆ. ಅವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ( ದೌರ್ಜನ್ಯ ತಡೆ)ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ. ಹಾಗಾಗಿ ಸದ್ಯಕ್ಕೆ ಅವರು ಬಂಧನ ಆಗುವುದರಿಂದ ತಪ್ಪಿಸಿಕೊಂಡಿದ್ದು, ಬಿಗ್ ರಿಲೀಫ್ ಸಿಕ್ಕಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸೆವನ್ ಹಿಲ್ಸ್ ಡೆವಲ್ಪರ‍್ಸ್ ಅಂಡ್ ಟ್ರೇಡರ‍್ಸ್‌ನ ನಿರ್ದೇಶಕರೂ ಆಗಿರುವ ಡಿ. ಸುಧಾಕರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ ನ್ಯಾಯಪೀಠ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಿದೆ.

ಪ್ರಕರಣವೇನು? ಸೆವೆನ್ ಹಿಲ್ಸ್ ಡೆವಲಪರ್ಸ್ ಅಂಡ್ ಟ್ರೇಡರ್ಸ್ , ಡಿ. ಸುಧಾಕರ್, ಜಿ. ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬುವರು ನಮ್ಮ ಕುಟುಂಬದವರಿಗೆ ಮೋಸ ಮಾಡಿ ಜಮೀನಿನ ಕ್ರಯಪತ್ರ ಮಾಡಿಕೊಂಡಿದ್ದಾರೆ. ಈ ಸಂಬಂಧ ನಗರದ ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣಾ ಹಂತದಲ್ಲಿದೆ.
ಆದರೂ ಡಿ.ಸುಧಾಕರ್ ಸೇರಿದಂತೆ ಮತ್ತಿತರರು ಬಂದು ತಾವು ನೆಲೆಸಿರುವ ಮನೆಗಳನ್ನು ತೆರವುಗೊಳಿಸಿದ್ದಾರೆ ಎಂದು ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವರು ಸೆ. ಹತ್ತರಂದು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಅಲ್ಲದೆ, ತಕ್ಷಣ ಸ್ಥಳಕ್ಕೆ ಆಗಮಿಸಿ ಪ್ರಶ್ನಿಸಿದಾಗ ಸುಮಾರು 35ಕ್ಕೂ ಹೆಚ್ಚು ಮಂದಿ ತಮ್ಮ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ. ಜತೆಗೆ, ಮಗಳ ಮೇಲೆ ಹಲ್ಲೆ ನಡೆಸಿ ನಮ್ಮ ಜಾತಿಯನ್ನು ಉಲ್ಲೇಖಿಸಿ ನಿಂಧನೆ ಮಾಡಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪಂಗಡದ(ದೌರ್ಜನ್ಯ ತಡೆ)ಕಾಯಿದೆ, ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳು ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು. ಅದನ್ನು ಪ್ರಶ್ನಿಸಿ ಸುಧಾಕರ್ ಮತ್ತಿತರರು ಹೈಕೋರ್ಟ್ ಮೊರೆ ಹೋಗಿದ್ದರು.
ಅಲ್ಪಸಂಖ್ಯಾತನಾಗಿ ಈ ಜಿಲ್ಲೆ ಜನ ನನ್ನ 4 ಬಾರಿ ಗೆಲ್ಲಿಸಿದ್ದಾರೆ
"63 ವರ್ಷ ಜಿಲ್ಲೆಯಲ್ಲಿ, ರಾಜ್ಯದಲ್ಲಿ ನಾನು ಏನು ಅಂತಾ ಜನರು ನೋಡಿದ್ದಾರೆ. ಒಬ್ಬ ಅಲ್ಪಸಂಖ್ಯಾತನಾಗಿ ಈ ಜಿಲ್ಲೆ ಜನ ನನ್ನ 4 ಬಾರಿ ಗೆಲ್ಲಿಸಿದ್ದಾರೆ. ಇದಕ್ಕೆ ಕಾರಣ ನನ್ನ ಪ್ರಾಮಾಣಿಕತೆ, ವಿಶ್ವಾಸ ನೋಡಿ ತಾನೇ ಗೆಲ್ಲಿಸಿದ್ದಾರೆ. ಜನಾಂಗ ಇಲ್ಲದವನಿಗೆ ಹೀಗೆ ಜನ ನಂಬಿಕೆ ಇಟ್ಟು ಗೆಲ್ಲಿಸುತ್ತಾರಾ? ಇದರಲ್ಲಿ ಕುತಂತ್ರ ರಾಜಕೀಯ ತುಂಬಾ ಅಡಗಿದೆ" ಎಂದು ಸಚಿವ ಡಿ.ಸುಧಾಕರ್ ಹೇಳಿದ್ದರು.
ಜೆಡಿಎಸ್ ಬೃಹತ್ ಪ್ರತಿಭಟನೆ
ಭೂ ಕಬಳಿಕೆ ಹಾಗೂ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿತ್ತು.












Click it and Unblock the Notifications