ಅಂಗೈನಲ್ಲೇ ಆರೋಗ್ಯ ಸೇವೆಗಳ ಸಮಸ್ಯೆ, ದೂರುಗಳಿಗೆ ಪರಿಹಾರ ಪಡೆಯಿರಿ: ಏನಿದು ಹೊಸ ವ್ಯವಸ್ಥೆ
ಬೆಂಗಳೂರು, ಅಕ್ಟೋಬರ್ 13: ಸರ್ಕಾರಿ ಆಸ್ಪತ್ರೆಗಳು ಎಂದರೆ ಸಾಕು ಮೂಗು ಮುರಿಯುತ್ತಾರೆ. ಬಡವರು, ಮಧ್ಯಮ ವರ್ಗದವರಿಗೆ ಆರೋಗ್ಯ ಒದಗಿಸುವ ಈ ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ, ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರೋಗ್ಯ ಸೇವೆ ಸುಧಾರಣೆಗಾಗಿ ಮತ್ತು ಸಮಸ್ಯೆಗಳಿಗೆ ಪರಿಹಾರ ಒಗಿಸುವ ಉದ್ದೇಶದಿಂದ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪೋಸ್ಟ್ ಮಾಡಿದೆ. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ಅಲ್ಲಿನ ಆರೋಗ್ಯ ಸೇವೆಗಳು ಮತ್ತು ಸಮಸ್ಯೆಗಳ ಕುರಿತು ಅಂಗೈನಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇಲಾಖೆ ಅಥವಾ ಮೇಲಾಧಿಕಾರಿಗಳನ್ನು ಸಂಪರ್ಕಿಸಲು ನೀವು ಒಂದು ಮೆಸೇಜ್ ಮಾಡಿದರೆ ಸಾಕು ಪರಿಹಾರ ಸಿಗುವ ಭರವಸೆಯನ್ನು ಇಲಾಖೆ ನೀಡಿದೆ.

ಸಾರ್ವಜನಿಕರು ವಾಟ್ಸಾಪ್ ಮೂಲಕ ಅಗತ್ಯ ಬಿದ್ದರೆ ಫೋಟೋ ಮತ್ತು ವಿಡಿಯೋಗಳನ್ನು ಲಗತ್ತಿಸಿ ನೀವು ದೂರು ನೀಡಬಹುದು. ಪರಿಹಾರಕ್ಕಾಗಿ ವಾಟ್ಸಾಪ್ ಸಂದೇಶ ಕಳುಹಿಸಬೇಕು. ನಿಮ್ಮ ದೂರುಗಳನ್ನು ಆರೋಗ್ಯ ಇಲಾಖೆ ಪ್ರಧಾನಿ ಕಾರ್ಯದರ್ಶಿಗಳು ನೇರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ವಾಟ್ಸಾಪ್ ಮಾಡಲು ನೀವು 94498 43001ಗೆ ಸಂಪರ್ಕಿಸಬೇಕು.
ಇನ್ನೂ ನೀವು ಆರೋಗ್ಯ ಸೇಎ, ಆಸ್ಪತ್ರೆ ಬಗ್ಗೆ ದೂರುಗಳನ್ನು, ಕುಂದು ಕೊರತೆಗಳನ್ನು ನೀಡುವವರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುವುದು. ವಿಶೇಷ ಸೂಚನೆ ಎಂದರೆ ಈ ಸಂಖ್ಯೆಯಿಂದ ನೀವು ವಿಡಿಯೋ, ಫೋಟೋ, ಸಂದೇಶ ಮೂಲಕ ಮಾತ್ರವೇ ದೂರು ನೀಡಬೇಕು, ನಮ್ಮನ್ನು ಸಂಪರ್ಕಿಸಬೇಕು. ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ನಮ್ಮ ಕ್ಲಿನ್ಲಿಕ್ ಹೀಗೆ ಸರ್ಕಾರಿ ಅಧೀನ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಹೋದಾಗ ಕೆಲವೆಡೆ ಸಾರ್ವಜನಿಕರು ನಿರ್ಲಕ್ಷ್ಯ, ವಿಳಂಬ, ಕರ್ತವ್ಯಲೋಪ, ಮೂಲಭೂತ ಸಮಸ್ಯೆ, ಅಗತ್ಯ ಸೌಕರ್ಯ ಕೊಡದಿರುವುದು ಸೇರಿದಂತೆ ಹಲವಾರು ಸಮಸ್ಯೆ ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಅಲ್ಲಿನ ಅದ್ವಾನಗಳನ್ನು ಫೋಟೋ, ವಿಡಿಯೋ ಮೂಲಕ ಇಲಾಖೆಗೆ ತಿಳಿಸಬಹುದು.
ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಮೂಲಕ ಆರೋಗ್ಯ ಸೇವೆಯ ಆಡಳಿತ ಯಂತ್ರ ಸುಧಾರಣೆಗೆ ಇಲಾಖೆ ಕ್ರಮವಹಿಸಲಿದೆ. ಇದರಿಂದ ಸಮಸ್ಯೆಗಳು ಹಂತ ಹಂತವಾಗಿ ಕಡಿಮೆ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಈ ಹೊಸ ವ್ಯವಸ್ಥೆಯ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಿದೆ.
ವೈದ್ಯರ ನೇಮಕ, ಸ್ವಚ್ಛತೆಗೆ ಆಗ್ರಹ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಮೊದಲು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು, ನರ್ಸ್, ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಿ. ಆಸ್ಪತ್ರೆಗೆ ಬರುವ ರೋಗಿಗಳ ಆರೈಕೆಗೆ ವೈದ್ಯರ ಕೊರತೆ ಇದೆ ಎಂದು ಸರ್ಕಾರಕ್ಕೆ ಕಾಮೆಂಟ್‌ಗಳ ಮೂಲಕ ಮನವಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತೆ ಕಾಪಾಡುವಂತೆಯು ಕೆಲವರು ಆಗ್ರಹಿಸಿದ್ದಾರೆ.












Click it and Unblock the Notifications