ರಾಜ್ಯದಲ್ಲಿ ಮೈಕೊರೆವ ಚಳಿಗೆ ಅನಾರೋಗ್ಯ ಭೀತಿ: ಆರೋಗ್ಯ ಇಲಾಖೆ ಅಲರ್ಟ್, ಎಲ್ಲ ಜಿಲ್ಲೆಗಳಿಗೆ ಮಾರ್ಗಸೂಚಿ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೈಕೊರೆವ ಚಳಿ ಹೆಚ್ಚಾಗಿದೆ. ತಾಪಮಾನ ಕುಸಿದಿದೆ. ಈ ವಾತಾವರಣವು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಈ ಚಳಿಗಾಲ ಋತುವಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇನ್ಫ್ಲುಯೆಂನ್ಜಾ ಪ್ರಕರಣಗಳು ಹೆಚ್ಚಾಗಿ ವರದಿ ಆಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಆರೋಗ್ಯ ಇಲಾಖೆಯು ಎಲ್ಲ ಜಿಲ್ಲೆಗಳಿಗೆ ಅಗತ್ಯ ಮಾರ್ಗಸೂಚಿ ಹೊರಡಿಸಿದೆ.
2026 ಜನವರಿ ಮತ್ತು ಮಾರ್ಚ್ ವರೆಗೆ ಚಳಿ ಹಾಗೂ ಒಣಹವೆ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಇನ್ಫ್ಲುಯೆಂನ್ಜಾ ಪ್ರಕರಣಗಳು (ಶೀತ, ಜ್ವರ, ಶಾಸಕೋಶ ಸಂಬಂಧ ಸಾಂಕ್ರಾಮಿಕ ಕಾಯಿಲೆಗಳು) ಹೆಚ್ಚು ವರದಿ ಆಗುವ ನಿರೀಕ್ಷೆ ಇದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ದ ಸಲಹೆ ಮೇರೆಗೆ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ವಹಿಸಲು ತಿಳಿಸಿದೆ. ಇನ್ಫ್ಲುಯೆಂನ್ಜಾ ತರಹದ ಅನಾರೋಗ್ಯ (ILI) ಮತ್ತು ತೀವ್ರ ಉಸಿರಾಟದ ಸೋಂಕು (SARI) ಹರಡದಂತೆ ಕಣ್ಗಾವಲು ಹೆಚ್ಚಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇಲಾಖೆ ನಿರ್ದೇಶಿಸಿದೆ.

ಲ್ಯಾಬ್‌ಗಳಲ್ಲಿ ಸೋಂಕು ಮಾದರಿ ಪರೀಕ್ಷೆಗಳಿಗೆ ಸೂಚನೆ
ತಂಪು ಹವಾಮಾನ ವಾತಾವರಣದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ. ವರದಿ ಆಗುವ ಇನ್ಫ್ಲುಯೆಂನ್ಜಾ ಸಂಬಂಧಿತ ಪ್ರಕರಣಗಳಲ್ಲಿ ಐಎಲ್‌ಐ ರೋಗಿಗಳ ಶೇ. 5ರಷ್ಟು ಮಾದರಿ ಮತ್ತು ಹಾಗೂ ಉಸಿರಾಟ, ಶ್ವಾಸಕೋಶಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ.100 ರಷ್ಟು ಮಾದರಿಗಳನ್ನು ಇನ್ಫ್ಲುಯೆಂನ್ಜಾ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಮಾದರಿ ಪರೀಕ್ಷೆಗೆಂದೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಬೆಂಗಳೂರಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಸೇರಿದಂತೆ ರಾಜ್ಯದಲ್ಲಿ ಒಂಬತ್ತು ಲ್ಯಾಬ್‌ಗಳಿವೆ.
ಎಲ್ಲ ಜಿಲ್ಲೆಗಳಲ್ಲಿ ಒಸೆಲ್ಟಾಮಿವಿರ್, ವೈಯಕ್ತಿಕ ರಕ್ಷಣಾ ಸಾಧನಗಳು, ಎನ್95 ಮಾಸ್ಕ್‌ಗಳು ಸಾಕಷ್ಟು ದಾಸ್ತಾನುಗಳು ಇವೆಯೇ ಎಂದು ನೋಡಿಕೊಳ್ಳಬೇಕು. ವೆಂಟಿಲೇಟರ್‌ಗಳು ಸುಸ್ಥಿತಿಯಲ್ಲಿವೆಯೇ, ತುರ್ತು ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಕೇಳಿದೆ. ಶಿಶುಗಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ದುರ್ಬಲ ವ್ಯಕ್ತಿಗಳ ಗುಂಪುಗಳಿಗೆ ಲಸಿಕೆ ನೀಡಲು ಕ್ರಮ ವಹಿಸಿ ಆರೋಗ್ಯ ಕಾಪಾಡುವಂತೆ ಸೂಚಿಸಿದೆ.
ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ
ಚಳಿಗಾಲದ ಸಾಂಕ್ರಾಮಿಕ ರೋಗಗಳ ವಿರುದ್ಧ ಸಮಗ್ರ ಕಣ್ಗಾವಲು ಕಾರ್ಯಕ್ರಮ, ಜಿಲ್ಲೆಗಳಲ್ಲಿನ ಆರೋಗ್ಯ ಮಾಹಿತಿ ವೇದಿಕೆ (IDSP-IHIP) ಪೋರ್ಟಲ್ ಮೂಲಕ ಜಾಗೃತಿ ಮೂಡಿಸಬೇಕು. ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲು ಅಭಿಯಾನಗಳನ್ನು ಹೆಚ್ಚಿಸುವತ್ತ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ಇನ್ಫ್ಲುಯೆಂನ್ಜಾ ಸೋಂಕುಗಳು ಸದರಿ ಕಲುಷಿತ ವಾತಾವರಣದಲ್ಲಿ ವೇಗವಾಗಿ ಹರಡುತ್ತವೆ. ಇದನ್ನು ವೈರಲ್ ಸೋಂಕು ಅಂತಲೂ ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ದೇಹದಲ್ಲಿ ಆಕ್ಟಿವ್ ಅಗಿರುತ್ತದೆ. ನಿಮಗೆ ಜ್ವರ, ಶೀತ, ಕೆಮ್ಮು ಮತ್ತು ಸ್ನಾಯು ನೋವುಗಳ ಲಕ್ಷಣ ಕಂಡು ಬಂದಲ್ಲಿ ನಿರ್ಲಕ್ಷಿಸದೇ ಹತ್ತಿರ ಆಸ್ಪತ್ರೆಗೆ ಭೇಟಿ ನೀಡುವಂತೆ ಆರೋಗ್ಯ ವಿನಂತಿಸಿದೆ.












Click it and Unblock the Notifications