ಮಕ್ಕಳಾಗದವರಿಗೆ ಸಿಹಿಸುದ್ದಿ, ಸರ್ಕಾರಿ ಆಸ್ಪತ್ರೆಯಲ್ಲೂ ಸಿಗಲಿದೆ ಈ ಚಿಕಿತ್ಸೆ
ಇತ್ತೀಚಿನ ಜೀವನಶೈಲಿಯಿಂದಾಗಿ ದಂಪತಿಗೆ ಸಂತಾನಭಾಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆಹಾರ ಕ್ರಮ ಸೇರಿದಂತೆ ಹಲವು ಕಾರಣಗಳಿಂದಾಗಿ ಸಕಾಲದಲ್ಲಿ ಮಕ್ಕಳಾಗದೆ ಜೋಡಿಗಳು ಸಂಕಟ ಅನುಭವಿಸುತ್ತಿದ್ದಾರೆ. ಇದಕ್ಕೆ ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಹಲವು ಚಿಕಿತ್ಸಾ ವಿಧಾನಗಳು ಬಂದಿದ್ದರೂ ಅವು ದುಬಾರಿಯಾದ ಕಾರಣ ದಂಪತಿ ದೇವರ ಮೇಲೆ ಭಾರ ಹಾಕಿ ಸುಮ್ಮನಾಗುತ್ತಿದ್ದರು. ಆದರೆ ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲೂ ಸಿಗಲಿದೆಯಂತೆ.
ವಿವಾಹಿತ ಮಹಿಳೆಯರು ಇತ್ತೀಚೆಗೆ ಗರ್ಭಧಾರಣೆ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಮದುವೆ ವಿಳಂಬ, ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣಗಳಿಂದ ಸಂತಾನ ಸಮಸ್ಯೆಯಿಂದ ನೋವು ತಿನ್ನುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ (In vitro fertilization) ಎನ್ನುವ ವಿಧಾನದಿಂದ ಹಲವರು ಸಂತಾನಭಾಗ್ಯವನ್ನ ಪಡೆದಿರುವ ನಿದರ್ಶನಗಳೂ ಇವೆ. ಆದರೆ ಇದು ಹಣವಂತರಿಗೆ ಮಾತ್ರ ಸೀಮಿತವಾಗಿದೆ ಎಂಬ ಅಳಲು ಕೂಡ ಇದೆ.

ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಈಗ ಐವಿಎಫ್ ಚಿಕಿತ್ಸಾ ವಿಧಾನ ಚಾಲ್ತಿಯಲ್ಲಿದ್ದು, ಇದು ಮಧ್ಯಮ ಹಾಗು ಬಡವರ್ಗಕ್ಕೆ ಗಗನ ಕುಸುಮವೇ ಸರಿ. ಆದರೂ ಸಾಲ ಮಾಡಿಕೊಂಡು ಈ ದುಬಾರಿ ಚಿಕಿತ್ಸೆ ಪಡೆದವರೂ ಇದ್ದಾರೆ. ಬಡವರಂತೂ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ಐವಿಎಫ್ ಚಿಕಿತ್ಸೆ ಸಿಗಬಾರದಾ? ಎಂದು ದೇವರನ್ನು ಪ್ರಾರ್ಥಿಸುತ್ತಿದ್ದರು. ಅದರಂತೆ ಶೀಘ್ರವೇ ಸರ್ಕಾರಿ ಆಸ್ಪತ್ರೆಯಲ್ಲೂ ಈ ದುಬಾರಿ ಚಿಕಿತ್ಸೆಯು ಕಡಿಮೆ ವೆಚ್ಚಕ್ಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ದುಬಾರಿ ಚಿಕಿತ್ಸೆಗೆ ಹೆದರಿ ಹಲವು ದಂಪತಿ ಮಕ್ಕಳ ಕನಸನ್ನು ದೂರವಿಟ್ಟಿದ್ದಾರೆ. ಇಂತವರಿಗಾಗಿ ಆರೋಗ್ಯ ಇಲಾಖೆ ರಿಲೀಫ್ ನೀಡಲು ಮುಂದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಉಚಿತ ಐವಿಎಫ್ ಚಿಕಿತ್ಸೆ ನೀಡಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ತಜ್ಞರಿಂದ ವರದಿ ಕೂಡ ಸಲ್ಲಿಕೆಯಾಗಿದ್ದು, ಆರಂಭಿಕ ಹಂತದಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಉಚಿತ ಐವಿಎಫ್ ಚಿಕಿತ್ಸೆ ಕಲ್ಪಿಸಲು ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಬಡವರ್ಗದ ದಂಪತಿಗಳ ಕನಸಾಗಿರುವ ಸಂತಾನಭಾಗ್ಯವನ್ನು ಕರುಣಿಸಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಇದು ಯಶಸ್ವಿಯಾದರೆ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉಚಿತ ಐವಿಎಫ್ ಚಿಕಿತ್ಸೆ ಸಿಗುವ ಸಾಧ್ಯತೆ ಇದೆ. ಕೆಸಿ ಜನರಲ್ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಇದಕ್ಕಾಗಿ ಐವಿಎಫ್ ಘಟಕಕ್ಕೂ ಪ್ರತ್ಯೇಕ ಸ್ಥಳ ಒದಗಿಸಲು ಸರ್ಕಾರ ಮುಂದೆ ಬಂದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ವಿಚಾರದಿಂದ ಸಂತಾನದ ನಿರೀಕ್ಷೆಯಲ್ಲಿದ್ದ ಹಲವರಿಗೆ ಖುಷಿಯಂತೂ ಆಗಿದೆ.
ಏನಿದು ಐವಿಎಫ್ ಚಿಕಿತ್ಸೆ?:
ಈ ಇನ್ ವಿಟ್ರೋ ಫರ್ಟಿಲೈಸೇಶನ್ (IVF) ಎಂಬುದು ಬಂಜೆ ರೋಗಿಗಳಿಗೆ ಗರ್ಭಿಣಿಯಾಗಲು ಮತ್ತು ಆರೋಗ್ಯವಂತ ಶಿಶುಗಳನ್ನು ಹೆರಿಗೆ ಮಾಡಲು ಸಹಾಯ ಮಾಡುವ ಒಂದು ರೀತಿಯ ಚಿಕಿತ್ಸೆ. ಇದೊಂದು ರೀತಿಯ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ. ಇದು ದಂಪತಿಗಳು ಅಥವಾ ಮಹಿಳೆ ಗರ್ಭಿಣಿಯಾಗಲು ತೊಂದರೆ ಹೊಂದಿರುವವರಿಗೆ ಗರ್ಭಧರಿಸಲು ಸಹಾಯ ಮಾಡುತ್ತದೆ. ಈ ಚಿಕಿತ್ಸೆಯು ಪ್ರಯೋಗಾಲಯದಲ್ಲಿ ಮಹಿಳೆಯ ದೇಹದ ಹೊರಗೆ ವೀರ್ಯದೊಂದಿಗೆ ಒಂದು ಅಥವಾ ಹೆಚ್ಚಿನ ಮೊಟ್ಟೆಗಳನ್ನು ಫಲವತ್ತಾಗಿಸುವುದನ್ನು ಒಳಗೊಂಡಿರುತ್ತದೆ. ನಂತರ ಮಹಿಳೆಯ ಗರ್ಭಾಶಯದೊಳಗೆ ಭ್ರೂಣಗಳನ್ನು ಬದಲಾಯಿಸುತ್ತದೆ. ಇದರಿಂದ ಸುಲಭವಾಗಿ ಮಕ್ಕಳಾಗಿರುವ ನಿದರ್ಶನಗಳು ಸಾಕಷ್ಟಿವೆ.












Click it and Unblock the Notifications