ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಇನ್ಮುಂದೆ ವಿಸಿಟೇಶನ್ ಇಲ್ಲ: ಪೇರೆಂಟಿಂಗ್ ಟೈಮ್ ಪದ ಬಳಕೆಗೆ ಹೈಕೋರ್ಟ್ ಸೂಚನೆ
ವಿಚ್ಛೇದನ ಅಥವಾ ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ನಡೆಯುವ ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡುವ ತೀರ್ಪುಗಳು ಹಾಗೂ ಬಳಸುವ ಪದಗಳು ಅತ್ಯಂತ ಸೂಕ್ಷ್ಮವಾಗಿರಬೇಕು. ಇದೇ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದ್ದು, ರಾಜ್ಯದ ಎಲ್ಲಾ ಕೌಟುಂಬಿಕ ನ್ಯಾಯಾಲಯಗಳಿಗೆ ಸ್ಪಷ್ಟ ನಿರ್ದೇಶನವೊಂದನ್ನ ನೀಡಿದೆ.
ಇನ್ನು ಮುಂದೆ ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ವಿಸಿಟೇಶನ್ ಎಂಬ ಪದದ ಬದಲಾಗಿ ಪೇರೆಂಟಿಂಗ್ ಟೈಮ್ ಎಂಬ ಅರ್ಥಪೂರ್ಣ ಹಾಗೂ ಮಾನವೀಯ ಪದವನ್ನ ಬಳಸುವಂತೆ ಆದೇಶಿಸಿದೆ.

ಯಾವುದೇ ಮಗುವಿನ ಜೀವನದಲ್ಲಿ ತಂದೆ ಅಥವಾ ತಾಯಿ ಕೇವಲ ಸಂದರ್ಶಕ ಅಂದ್ರೆ ವಿಸಿಟರ್ ಆಗಿರಲು ಸಾಧ್ಯವಿಲ್ಲ. ಹೀಗಾಗಿ ಪೋಷಕರು ಮಗುವನ್ನ ಭೇಟಿಯಾಗುವ ಸಮಯವನ್ನು ವಿಸಿಟೇಶನ್ ಎಂದು ಕರೆಯುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಗಾರ್ಡಿಯನ್ ಅಂಡ್ ವಾರ್ಡ್ಸ್ ಕಾಯ್ದೆ ಅಡಿ ಬರುವ ಪ್ರಕರಣಗಳು ಸೇರಿದಂತೆ ಎಲ್ಲಾ ಕೌಟುಂಬಿಕ ವ್ಯಾಜ್ಯಗಳಲ್ಲಿ ಕಡ್ಡಾಯವಾಗಿ ಪೇರೆಂಟಿಂಗ್ ಟೈಮ್ ಪದವನ್ನೇ ಬಳಸಬೇಕು ಎಂದು ನ್ಯಾಯಮೂರ್ತಿ ಲಲಿತಾ ಕನ್ನೇಗಂಟಿ ಅವರಿದ್ದ ಏಕಸದಸ್ಯ ಪೀಠವು ನಿರ್ದೇಶನ ನೀಡಿದೆ.
ಈ ಕುರಿತು ರಾಜ್ಯದ ಎಲ್ಲಾ ಕೌಟುಂಬಿಕ ನ್ಯಾಯಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಲಾಗಿದೆ.
ವಿಸಿಟೇಶನ್ ಪದದ ಬದಲು ಪೇರೆಂಟಿಂಗ್ ಟೈಮ್ ಬಳಕೆಗೆ ಕಾರಣ
"ಸಾಮಾನ್ಯವಾಗಿ ವಿಸಿಟೇಶನ್ ಎಂಬ ಪದವು ಕಾನೂನು ಪ್ರಕ್ರಿಯೆಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಆದರೆ, ಇದು ದುರದೃಷ್ಟವಶಾತ್ ಒಬ್ಬ ಪೋಷಕರು ಮಗುವಿನ ಜೀವನದ ಅವಿಭಾಜ್ಯ ಅಂಗವಾಗಿದ್ದರೆ, ಮತ್ತೊಬ್ಬರು ಕೇವಲ ಭೇಟಿ ನೀಡುವ ಅತಿಥಿ ಎಂಬ ತಪ್ಪು ಸಂದೇಶವನ್ನು ರವಾನಿಸುತ್ತದೆ. ಅತಿಥಿಯಾಗಿ ಬಂದು ಹೋಗುವವರಿಗೆ 'ವಿಸಿಟೇಶನ್' ಪದ ಬಳಸಲಾಗುತ್ತದೆ.
ಮಗು ತನ್ನ ಪೋಷಕರೊಂದಿಗಿನ ಸಂಬಂಧವನ್ನ ಈ ಪದದ ಮೂಲಕ ಅರ್ಥಮಾಡಿಕೊಳ್ಳಬಾರದು. ಪದಗಳ ಬದಲಾವಣೆಯು ಕಸ್ಟಡಿ ವಿಚಾರವನ್ನ ಸಂಪೂರ್ಣವಾಗಿ ಬಗೆಹರಿಸದಿದ್ದರೂ, ನ್ಯಾಯಾಲಯವು ವಿಧಿಸುವ ನಿರ್ಬಂಧಗಳನ್ನ ವಿವರಿಸುವಾಗ ಪೇರೆಂಟಿಂಗ್ ಎಂಬ ಪದದ ಬಳಕೆ ಹೆಚ್ಚು ಮಾನವೀಯತೆಯನ್ನ ತೋರ್ಪಡಿಸುತ್ತದೆ" ಎಂದು ನ್ಯಾಯಮೂರ್ತಿಗಳು ತಮ್ಮ ವಿವರವಾದ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಕ್ಕಳ ಕಸ್ಟಡಿ ಪ್ರಕರಣದ ಹಿನ್ನೆಲೆ
ಹೈಕೋರ್ಟ್‌ನ ಈ ನಿರ್ದೇಶನವು 9 ವರ್ಷದ ಬಾಲಕನ ಕಸ್ಟಡಿಗೆ ಸಂಬಂಧಿಸಿದ ವಿವಾದದ ವಿಚಾರಣೆಯ ವೇಳೆ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಪತಿ ಹಾಗೂ ಪತ್ನಿ 2017ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಗುವಿಗೆ ಕೇವಲ ಮೂರು ತಿಂಗಳಾಗಿದ್ದಾಗ ತಂದೆ ಕೊನೆಯ ಬಾರಿಗೆ ನೋಡಿದ್ದರು.
ಅದಾದ ಒಂಬತ್ತು ವರ್ಷಗಳ ಬಳಿಕ ಕೌಟುಂಬಿಕ ನ್ಯಾಯಾಲಯವು ತಂದೆ ಮತ್ತು ಮಗನ ಭೇಟಿಗೆ ಕೇವಲ 30 ನಿಮಿಷಗಳ ಕಾಲಾವಕಾಶವನ್ನು ನೀಡಿತ್ತು. ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೌಟುಂಬಿಕ ನ್ಯಾಯಾಲಯಗಳಿಗೆ ಹೈಕೋರ್ಟ್ ಕಿವಿಮಾತು
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೇಗಂಟಿ ಅವರು, ವಿವಾದಗಳ ಸ್ವರೂಪವನ್ನ ಚರ್ಚಿಸದೆ, ಮಗುವಿನೊಂದಿಗೆ ಮಾತನಾಡದೆ ಹಾಗೂ ವ್ಯವಸ್ಥೆಯ ಸಾಧಕ-ಬಾಧಕಗಳನ್ನ ಪರಿಶೀಲಿಸದೆ ಕೌಟುಂಬಿಕ ನ್ಯಾಯಾಲಯಗಳು ಯಾಂತ್ರಿಕವಾಗಿ ಆದೇಶಗಳನ್ನ ಹೊರಡಿಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಕುಟುಂಬದ ವಿವಾದಗಳು ಮತ್ತು ಮಕ್ಕಳ ಕಸ್ಟಡಿ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಒಂದು ನಿರ್ದಿಷ್ಟ ಸೂತ್ರವನ್ನ ಅಳವಡಿಸಲು ಸಾಧ್ಯವಿಲ್ಲ. ನ್ಯಾಯಾಲಯಗಳು ಇಲ್ಲಿ ಪೋಷಕರು ಹಾಗೂ ಮಕ್ಕಳ ಭಾವನೆಗಳು ಮತ್ತು ಜೀವನದ ಜೊತೆ ವ್ಯವಹರಿಸುತ್ತಿರುತ್ತವೆ. ಆದ್ದರಿಂದ ಪ್ರತಿಯೊಂದು ಪ್ರಕರಣದ ಸತ್ಯಾಸತ್ಯತೆ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಬೇಕು" ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ 30 ನಿಮಿಷಗಳ ಸಮಯವು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲು ಅಸಾಧ್ಯವೆಂದು ಗಮನಿಸಿದ ಹೈಕೋರ್ಟ್, ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪೇರೆಂಟಿಂಗ್ ಟೈಮ್‌ಗೆ ಅವಕಾಶ ಕಲ್ಪಿಸಿ, ಮುಂದಿನ ವಿಚಾರಣೆಯನ್ನ ಮುಂದೂಡಿದೆ.


Click it and Unblock the Notifications
