ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿಯ ಭದ್ರಕೋಟೆ ಎಂಬುದು ಸಾಬೀತು: ಕಮಲ ಕಲಿಗಳು ಹೇಳಿದ್ದೇನು?
ಬೆಂಗಳೂರು, ಜೂನ್22: ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯದ ಜನರ ಆಶೀರ್ವಾದ ಲಭಿಸಿದೆ. ರಾಜ್ಯದಲ್ಲಿ 19 ಜನ ಎನ್‍ಡಿಎ ಸಂಸದರ ಆಯ್ಕೆಗೆ ಕಾರಣಕರ್ತರಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ರಾಜ್ಯದ ಕೇಂದ್ರ ಸಚಿವರ ಅಭಿನಂದನೆ ಕಾರ್ಯಕ್ರಮದಲ್ಲಿ ವಿಜಯೇಂದ್ರ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಸಾಕಷ್ಟು ಅಪಪ್ರಚಾರದ ನಡುವೆ, ಆಮಿಷಗಳ ನಡುವೆ ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದ ನೂತನ ಸಂಸದರಿಗೆ ಅಭಿನಂದನೆಗಳು ಎಂದು ಹೇಳಿದರು.

ಹಿಂದೆ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷ ಈಗ 9 ಸ್ಥಾನ ಗೆದ್ದಿರಬಹುದು. ಆದರೆ, ಮತ್ತೊಂದು ಕಡೆ ರಾಜ್ಯದಲ್ಲಿ 145ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುನ್ನಡೆ ಸಾಧಿಸಿವೆ. ಕಾಂಗ್ರೆಸ್ ಸಚಿವರಿರುವ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಲೀಡ್ ಪಡೆದಿದ್ದಾರೆ. ಮುಂದಿನ 4 ವರ್ಷ ರಾಜ್ಯದ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿತ್ತು. ಆದರೆ, ಕಳೆದ ಒಂದು ವರ್ಷದ ಕಾಂಗ್ರೆಸ್ ದುರಾಡಳಿತದಲ್ಲಿ ರಾಜ್ಯವು ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಸಾಧಿಸುವಂತಾಗಿದೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ವೈಫಲ್ಯವನ್ನು ಮುಚ್ಚಿಡಲು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ ಎಂದು ವಿವರಿಸಿದರು. ಕಾಂಗ್ರೆಸ್ ಶಾಸಕ ನಾಡಗೌಡರು ಅಭಿವೃದ್ಧಿ ಇಲ್ಲದ ಕಾರಣಕ್ಕೆ ನಿವೃತ್ತಿ ಪಡೆಯುವ ಮಾತನಾಡಿದ್ದಾರೆ. ಗ್ಯಾರಂಟಿ ನೆಪದಲ್ಲಿ ಆದಾಯ ಮೂಲ ಹೆಚ್ಚಿಸಲು ಬೆಲೆ ಏರಿಕೆ ಮಾಡುತ್ತಿದ್ದಾರೆ. ರೈತರು ಬರಗಾಲದಿಂದ ಸಂಕಷ್ಟದಲ್ಲಿದ್ದರೂ, ಕೇಂದ್ರದಿಂದ 3,500 ಕೋಟಿ ಬರ ಪರಿಹಾರ ಕೊಟ್ಟರೂ ಸಹ ರಾಜ್ಯ ಸರಕಾರವು ರೈತರಿಗೆ ಸ್ಪಂದಿಸಿಲ್ಲ ಎಂದು ಟೀಕಿಸಿದರು.
ಆಸ್ತಿ ತೆರಿಗೆ ಹೆಚ್ಚಳ, ನೋಂದಣಿ ಶುಲ್ಕ ಏರಿಕೆ, ಮೋಟಾರು ವಾಹನ ತೆರಿಗೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಹಾಲಿನ ದರ ಜಾಸ್ತಿ ಮಾಡಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಕಾಂಗ್ರೆಸ್ ಸರಕಾರ ಬಡವರ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರಿಗೆ ಬರೆ ಎಳೆಯುವ ಸರಕಾರ ಇದಾಗಿದೆ. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಇದು ಕಾರ್ಯಕರ್ತರಿಗೆ ಶಕ್ತಿ ತುಂಬುವ ಚುನಾವಣೆ. ಇದನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ. ಎಲ್ಲರೂ ಶ್ರಮ ಹಾಕೋಣ. ವಿಧಾನಸಭಾ ಅಧಿವೇಶನದಲ್ಲೂ ನಾವು ಒಟ್ಟಾಗಿ, ಒಂದಾಗಿ ಕಾಂಗ್ರೆಸ್ ಸೊಕ್ಕನ್ನು ಮುರಿಯುತ್ತೇವೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಅಧಿವೇಶನದ ಬಳಿಕ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಭೇಟಿ ಕೊಡಲು ಪ್ರವಾಸ ಮಾಡಲಿದ್ದೇವೆ ಎಂದು ತಿಳಿಸಿದರು. ಈ ಗೆಲುವಿಗಾಗಿ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು. ನರೇಂದ್ರ ಮೋದಿಜೀ ಅವರು ರಾಜ್ಯಕ್ಕೆ 5 ಕೇಂದ್ರದ ಸಚಿವ ಸ್ಥಾನ ನೀಡಿದ್ದು, ಸಚಿವರು, ಸಂಸದರಿಂದ ರಾಜ್ಯಕ್ಕೆ ಆಗಬೇಕಾದ ಕಾರ್ಯಗಳ ಕಡೆ ಗಮನ ಕೊಡಲಾಗುವುದು ಎಂದು ತಿಳಿಸಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಎಂದರೆ ಸುಳ್ಳು ಗ್ಯಾರಂಟಿ, ಭ್ರಷ್ಟಾಚಾರ, ದುರಾಡಳಿತ ಮತ್ತು ಅಭಿವೃದ್ಧಿಶೂನ್ಯತೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಮನವಿ ಮಾಡಿದರು.
ಸದ್ಯವೇ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ನಾವು ಜೆಡಿಎಸ್ ಪಕ್ಷದ ಜೊತೆಗೂಡಿ ಇವುಗಳಲ್ಲಿ ಗೆಲುವು ಸಾಧಿಸಿ ನಮ್ಮ ಶಕ್ತಿಯನ್ನು ತೋರಿಸಬೇಕು ಎಂದು ತಿಳಿಸಿದರು. ಕಾರ್ಯಕರ್ತರ ಪರಿಶ್ರಮದಿಂದ ಈ ದೊಡ್ಡ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಚುನಾವಣಾ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ಸಿನದು ತಪ್ಪು ನೀತಿಗಳ ಜನವಿರೋಧಿ ಸರಕಾರ. ಡೀಸೆಲ್, ಪೆಟ್ರೋಲ್ ದರ ಏರಿಕೆ ಸೇರಿ ಎಲ್ಲ ವಸ್ತುಗಳ ದರ ಏರಿಸಿದ್ದಾರೆ ಎಂದು ಟೀಕಿಸಿದರು. ವಾಲ್ಮೀಕಿ (ಎಸ್‍ಟಿ) ನಿಗಮದ ಹಗರಣ ಸಂಬಂಧ ಕೇವಲ ಒಬ್ಬ ಸಚಿವರು ರಾಜೀನಾಮೆ ಕೊಟ್ಟರೆ ಸಾಲದು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಿಂದ ಕರ್ನಾಟಕದಲ್ಲಿ ಅಭೂತಪೂರ್ವ ಜಯವನ್ನು ಸಾಧಿಸಲಾಗಿದೆ. 20 ಸ್ಥಾನ ಗೆಲ್ಲುವುದಾಗಿ ಕಾಂಗ್ರೆಸ್ ಪಕ್ಷವು ಹೇಳುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷವನ್ನು ಜನರು ಕಸದ ಬುಟ್ಟಿಗೆ ಎಸೆದಿದ್ದು, ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಪೆಟ್ರೋಲ್- ಡೀಸೆಲ್ ದರ ಏರಿಸಿದ ಕಾಂಗ್ರೆಸ್ಸಿಗೆ ಈಗ ಕೇಡುಗಾಲ ಬಂದಿದೆ ಎಂದು ಹೇಳಿದರು.












Click it and Unblock the Notifications