ರಾಜ್ಯದಲ್ಲಿ 2 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ
ಬೆಂಗಳೂರು, ಜುಲೈ 15 : ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ 2,22,286 ವಿವಿಧ ವರ್ಗದ ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಆಯಕಟ್ಟಿನ ಹುದ್ದೆಗಳಲ್ಲಿ ಆಡಳಿತಾತ್ಮಕ ತೊಂದರೆಗಳ ನಿವಾರಣೆಗಾಗಿ ವ್ಯವಸ್ಥೆಗಳನ್ನು ಮಾಡಿ ಕೆಲಸ ಕುಂಠಿತವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರದ ಕಲಾಪದಲ್ಲಿ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಎನ್.ಎನ್.ಹ್ಯಾರಿಸ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 70,568 ಅಧಿಕಾರಿ ಹುದ್ದೆಗಳು ಮತ್ತು 6,80,866 ಸಿಬ್ಬಂದಿ ಹುದ್ದೆಗಳು ಮಂಜೂರಾಗಿದೆ. [ಕಲಬುರಗಿಯಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ]

ಇದರಲ್ಲಿ 18,304 ಅಧಿಕಾರಿ ಹುದ್ದೆಗಳು ಮತ್ತು 2,03,982 ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ತುಂಬಲು ಇಲಾಖೆಯ ಮುಖ್ಯಸ್ಥರು ಸಚಿವಾಲಯದ ಆಡಳಿತ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಿ, ಆಡಳಿತ ಇಲಾಖೆಗಳು ಆರ್ಥಿಕ ಇಲಾಖೆ ಅನುಮತಿ ಪಡೆದು ಭರ್ತಿ ಮಾಡಬೇಕಾಗುತ್ತದೆ ಎಂದರು. [ಕೆಪಿಎಸ್ ಸಿ ನೇಮಕಾತಿ, ಅರ್ಜಿ ಸಲ್ಲಿಸಲು ಆ.1 ಕೊನೆಯ ದಿನ]
ಅನುಚ್ಛೇಧ 371 (ಜೆ)ಯಡಿ ಸ್ಥಳೀಯ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಿತವ್ಯಯ ಆದೇಶ ಅನ್ವಯವಾಗುದಿಲ್ಲ. ಇದಕ್ಕೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ ಎಂದು ಭಾವಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಉತ್ತರದಲ್ಲಿ ತಿಳಿಸಿದ್ದಾರೆ.
ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ ಪಡೆದ ನಂತರ ಇಲಾಖೆಗಳು ಆ ಖಾಲಿ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಇತರೆ ಆಯ್ಕೆ ಪ್ರಾಧಿಕಾರಗಳಿಗೆ ಬಿಡುಗಡೆ ಮಾಡುತ್ತಿವೆ. ಆಯಕಟ್ಟಿನ ಹುದ್ದೆಗಳಲ್ಲಿ ಆತಳಿತಾತ್ಮಕ ತೊಂದರೆಗಳ ನಿವಾರಣೆಗಾಗಿ ಪ್ರಭಾರಿ ವ್ಯವಸ್ಥೆಗಳನ್ನು ಮಾಡಿ ಕೆಲಸ ಕುಂಠಿತವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಅವರು ವಿವರಿಸಿದರು.












Click it and Unblock the Notifications