ನಾಳೆಯಿಂದ ಈ ನಿಯಮ ಜಾರಿ; ಏನದು?
ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದೆ. ನಾಳೆಯಿಂದ (ಸೆಪ್ಟೆಂಬರ್ 2) 1-5 ನಮೂನೆಯ ಡಿಜಿಟಲ್ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹಲವು ವರ್ಷಗಳ ಹಿಂದೆಯೇ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದೆ. ಆದರೆ, ಅವು ಪೋಡಿ ದುರಸ್ಥಿಯಾಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದ ಹಲವು ರೈತರು ತೊಂದರೆಗೆ ಸಿಲುಕಿದ್ದು ಅಧಿಕಾರಿಗಳು ಸೆಪ್ಟೆಂಬರ್ 2ರಿಂದ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಮುಂದಾಗಬೇಕು ಎಂದು ಸೂಚಿಸಿದ್ದಾರೆ.

ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಚೇರಿ, ಸರ್ವೆ ಕಚೇರಿಗಳಿಗೆ ಅಲೆದು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ಸಿಕ್ಕಿರಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ್ದರು. ಈ ಹಿನ್ನೆಲೆ ಕಂದಾಯ ಇಲಾಖೆಯು ಬಾಕಿಯಿರುವ ಪ್ರಕರಣಗಳ ಇತ್ಯರ್ಥಕ್ಕೆ ಯೋಜನೆ ಆರಂಭಿಸಿದೆ. ಈ ಹಿಂದೆ ಪೋಡಿ ದುರಸ್ಥಿ ಮಾಡಲು 1-5 ನಮೂನೆಗಳನ್ನು ಕಾಗದದ ಕಡತಗಳನ್ನು ತಯಾರಿಸಲಾಗುತ್ತಿತ್ತು. ಇದು ಸರಿಯಾಗಿಲ್ಲದ ಕಾರಣ ಈಗ ಡಿಜಿಟಲ್ ಕಡತಗಳನ್ನು ತಯಾರಿಸಲು ಆರಂಭಿಸಿದೆ.
ಡಿಜಿಟಲ್ ಪೋಡಿ ಎಂದರೇನು?: ಡಿಜಿಟಲ್ ಆ್ಯಪ್ ಮೂಲಕ ಈ ಪ್ರಕ್ರಿಯೆ ಸರಳ, ವೇಗವಾಗಿ ಕಡತಗಳನ್ನು ತಯಾರಿಸಬಹುದು. ಇದು ಯಾರ ಬಳಿ ವಿಳಂಬವಾಗಿದೆ ಎಂಬುದು ಕೂಡ ತಿಳಿಯಲಿದ್ದು, ವೇಗವಾಗಿ ಕೆಲಸ ನಡೆಯಲಿದೆ. ಅಲ್ಲದೆ ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ಇಡಬಹುದು.

ಅದನ್ನು ಮುಂದೊಂದು ದಿನ ತಿದ್ದಲು ಅಥವಾ ನಕಲು ಮಾಡಲು ಸಾಧ್ಯವಿಲ್ಲ. ಒಬ್ಬ ರೈತನಿಗೆ ತಯಾರು ಮಾಡಿದ 1-5 ಕಡತವು ಆ ಸರ್ವೆ ನಂಬರ್‌ನಲ್ಲಿರುವ ಎಲ್ಲ ರೈತರಿಗೂ ಅನುಕೂಲವಾಗಲಿದೆ ಹಾಗಾಗಿ, ಈ ಕಡತ ಕಾಣೆಯಾಗಲು ಅಥವಾ ಕಳೆದು ಹೋಗಲು ಸಾಧ್ಯವೇ ಇಲ್ಲ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ರೈತರಿಗೆ ಎಲ್ಲೆಲ್ಲಿ ಮಂಜೂರಾಗಿರುವ ಜಮೀನುಗಳ ದುರಸ್ಥಿಯಾಗದೆ ಬಾಕಿ ಉಳಿದಿದೆ ಎಂಬುದರ ಡಿಜಿಟಲ್ ಕಡತವನ್ನು ತಯಾರಿಸಲಿದೆ. ಈ 1-5 ಕಡತವು ಎಲ್ಲ ಸರ್ಕಾರಿ ಜಮೀನಿಗೆ, ರೈತರ ಅರ್ಜಿಗೆ ಕಾಯದೆ ಕಂದಾಯ ಇಲಾಖೆಯೇ ಸ್ವಯಂ ಕಡತಗಳನ್ನು ತಯಾರಿಸಲಿದೆ. ಬಳಿಕ ಸರ್ವೆಯೊಂದಿಗೆ ದುರಸ್ಥಿ ಮಾಡಿದ ನಂತರ ಹೊಸ ಸರ್ವೆ ನಂಬರ್ ಪಹಣಿಯೊಂದಿಗೆ ಸಂಪೂರ್ಣ ದಾಖಲೆ ಮಾಡಿಕೊಡಲಿದ್ದಾರೆ.
ಈ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ರೈತರಿಗೆ ನೆಮ್ಮದಿಯನ್ನು ನೀಡುವ ಅಭಿಯಾನ ಇದು ಎನ್ನಲಾಗಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳೂ ಈ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕಿದೆ. ಆ ಮೂಲಕ ರೈತರ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಸಹಕಾರ ನೀಡುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications