ಫೇಕ್ ನ್ಯೂಸ್ ವಿರುದ್ಧದ ಯುದ್ಧ ತೀವ್ರಗೊಳಿಸಿದ ಕರ್ನಾಟಕ ಸರ್ಕಾರ: ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ವಿಂಗ್
ಬೆಂಗಳೂರು, ಜೂನ್ 22: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹರಡುವುದನ್ನು ತಡೆಯಲು ಯೋಜನೆ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಗೃಹ ಸಚಿವ ಜಿ ಪರಮೇಶ್ವರ ಅವರು ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ. ರಾಜ್ಯದಾದ್ಯಂತ ಪ್ರತಿ ಪೊಲೀಸ್ ಠಾಣೆಗೂ ಸೈಬರ್ ವಿಂಗ್ ಅನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸರ್ಕಾರವು ಗೂಗಲ್, ಟ್ವಿಟರ್ ಮತ್ತು ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಲಿದೆ. ಫೇಕ್ ಸುದ್ದಿಗಳನ್ನು ನಿಭಾಯಿಸಲು ಪರಿಹಾರಗಳನ್ನು ರೂಪಿಸಲು ಪ್ರಯತ್ನಿಸುತ್ತದೆ' ಎಂದು ಹೇಳಿದ್ದಾರೆ.

'ಸೋಷಿಯಲ್ ಮೀಡಿಯಾದಲ್ಲಿ ನಕಲಿ ಸುದ್ದಿಗಳು ವ್ಯಾಪಕವಾಗಿವೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಹರಡುವಿಕೆಯನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ವದಂತಿ ಮತ್ತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.
ನಾನೂ ಕೂಡ ನಕಲಿ ಸುದ್ದಿಗಳ ಬಲಿಪಶು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಅದೃಷ್ಟವಶಾತ್, ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ, ಆದರೆ ಹಾನಿಯಾಗಿದೆ. ಧರ್ಮ, ಜಾತಿ, ಪಕ್ಷ ಯಾವುದೇ ಇರಲಿ, ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ. ಯಾರೂ ಇತರರ ಚಾರಿತ್ರ್ಯಕ್ಕೆ ಧಕ್ಕೆ ತರಬಾರದು' ಎಂದು ಅವರು ಹೇಳಿದ್ದಾರೆ.

ಈ ವಿಚಾರದಲ್ಲಿ ತಜ್ಞರು ಮತ್ತು ಇತರ ಅಧಿಕಾರಿಗಳ ಅಭಿಪ್ರಾಯವನ್ನು ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.
'ನಾವು ನಕಲಿ ಸುದ್ದಿಗಳ ಬೆದರಿಕೆಯನ್ನು ನಿಭಾಯಿಸಲು ಇತರ ರಾಜ್ಯಗಳು ಏನು ಮಾಡುತ್ತಿವೆ ಎಂಬುದನ್ನು ಅಧ್ಯಯನ ಮಾಡಬೇಕಾಗಿದೆ. ಗೃಹ ಸಚಿವರು ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.
ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವ ಬಗ್ಗೆ ಎಂಬಿ ಪಾಟೀಲ್ ಈ ಹಿಂದೆ ದೂರು ನೀಡಿದ್ದರು.
'ಸತ್ಯ-ಪರಿಶೀಲನಾ ತಂಡವು ಸತ್ಯವನ್ನು ಕಂಡುಹಿಡಿದಿದೆ ಮತ್ತು ನಕಲಿ ಸುದ್ದಿಯನ್ನು ಹರಡಿದವರನ್ನು ಹಿಡಿಯಲಾಯಿತು. ಆದರೆ, ಆ ಪೋಸ್ಟ್ ಇನ್ನೂ ಹರಿದಾಡುತ್ತಿದೆ' ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಖಡಕ್ ಸೂಚನೆ
ರಾಜ್ಯದಲ್ಲಿ ನಕಲಿ ಸುದ್ದಿಗಳನ್ನು ಎದುರಿಸಲು ಕೈಗೊಂಡ ಕ್ರಮಗಳ ಕುರಿತು ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯಿಂದ ಮಾಸಿಕ ವರದಿಗಳನ್ನು ಕೇಳಿದೆ. ಮುಖ್ಯಮಂತ್ರಿಗಳ ಕಚೇರಿಯ ಪ್ರಕಾರ, ಮಂಗಳವಾರ, ಸುಳ್ಳು ಸುದ್ದಿಗಳ ಮೂಲವನ್ನು ಪತ್ತೆಹಚ್ಚಲು ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಮತ್ತು ಜಾಗೃತಿ ಮೂಡಿಸಲು ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಗಲಭೆಗಳು ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಈ ಹಿಂದೆ, ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡಿರುವ ನಕಲಿ ಸುದ್ದಿಗಳನ್ನು ಪತ್ತೆಹಚ್ಚಲು ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ತಾಂತ್ರಿಕ ತಂಡವನ್ನು ರಚಿಸಲಾಗಿತ್ತು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸತ್ಯಾಂಶ ಪರಿಶೀಲನೆ ನಿಲ್ಲಿಸಿತ್ತು.
ಸತ್ಯಾಸತ್ಯತೆ ಪರಿಶೀಲನೆಯನ್ನು ಪುನರಾರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 'ಸೈಬರ್ ಪೊಲೀಸರು ನಕಲಿ ಸುದ್ದಿಗಳ ಮೂಲವನ್ನು ಪತ್ತೆಹಚ್ಚಲು ಹಗಲಿರುಳು ಶ್ರಮಿಸುತ್ತಿದ್ದಾರೆ' ಎಂದು ಸಿಎಂಒ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವಿಚಾರವಾಗಿ ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಅವರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಹಾವಳಿ ಮಿತಿ ಮೀರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications