Maize Price Today: ಕರ್ನಾಟಕದಲ್ಲಿ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು
Maize Price Today: ಕರ್ನಾಟಕ ರಾಜ್ಯದಲ್ಲಿ ಈ ವರ್ಷ (2025) 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಪ್ರತಿ ಕ್ವಿಂಟಾಲ್ ಬೆಲೆ ಸಹ ಕುಸಿಯುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಆರಂಭಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಕ್ಕೆಜೋಳವನ್ನು ಕರ್ನಾಟಕದ ಬಹುತೇಕ ಭಾಗದಲ್ಲಿ ಬೆಳೆಯುತ್ತಾರೆ. ಕಳೆದ ವರ್ಷ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಇಳುವಂತಿ ಬಂದಿದೆ. ಆದರೆ ರೈತರಿಗೆ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ಗೆ 2,000 ರೂ. ಮೇಲೆ ಇತ್ತು. ಈ ವರ್ಷ ಬೆಲೆ ಕುಸಿದು ಪ್ರತಿ ಕ್ವಿಂಟಾಲ್ ಗೆ 1400 ರೂಪಾಯಿಗೆ ಕುಸಿದಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನಲ್ಲಿ ವ್ಯಾಪಕವಾಗಿ ಮೆಕ್ಕೆಜೋಳ ಬೆಳೆದಿರುವ ಅತೀ ಹೆಚ್ಚು ರೈತರ ಬದುಕಿನ ಪ್ರಶ್ನೆ ಇದೆ. ಕಬ್ಬು ಆರೇಳು ಜಿಲ್ಲೆಗೆ ಸೀಮಿತವಾಗಿದ್ದರೆ, ಮೆಕ್ಕೆಜೋಳ19-20 ಜಿಲ್ಲೆಯಲ್ಲಿ ಇದೆ. ಈಗಾಗಲೇ ಕೇಂದ್ರ ಸರ್ಕಾರ 2400 ರೂಪಾಯಿ ಎಂಎಸ್ ಪಿ ಮಾಡಿದೆ. ಅದಕ್ಕಿಂತ ಹೆಚ್ಚಿಗೆ ಬೆಲೆ ನೀಡಿ ಖರೀದಿ ಮಾಡಬೇಕು. ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರಕ್ಕೆ ವರದಿ ಕಳುಹಿಸುತ್ತೇವೆ ಅಂತ ಹೇಳುತ್ತಾರೆ. ಅದರ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಖರೀದಿ ಮಾಡಿದರೆ ಕೇಂದ್ರ ಸರ್ಕಾರ ಬೇಡ ಎನ್ನುವುದಿಲ್ಲ. ಹಿಂದೆ ರಾಜ್ಯ ಸರಕಾರ ಖರೀದಿ ಮಾಡಿ ಕೇಂದ್ರಕ್ಕೆ ವರದಿ ಕಳುಹಿಸಿದ ಹಲವಾರು ಉದಾಹರಣೆಗಳಿವೆ ಎಂದರು.
ಮೆಕ್ಕೆಜೋಳ ಹಾಳಾಗದ ವಸ್ತು ಅದನ್ನು ಇಟ್ಟು ದರ ಬಂದಾಗ ಮಾರಾಟ ಮಾಡಿ ಹಣ ವಾಪಸ್ ಪಡೆಯಬಹುದು ವ್ಯತ್ಯಾಸ ಆದರೆ ಕೇಂದ್ರ ಸರ್ಕಾರ ಹಣ ಕೊಡುತ್ತದೆ. ಆದ್ದರಿಂದ ತಡಮಾಡದೇ ರೈತರು ಬೀದಿಗಿಳಿದು ಹೋರಾಟ ಮಾಡುವುದುವುದಕ್ಕೆ ಅವಕಾಶ ನೀಡಬಾರದು. ಕೂಡಲೇ ಮೆಕ್ಕೆ ಜೋಳ ಖರೀದಿ ಮಾಡಬೇಕು, ರೈತರ ಪರ ನಿಲ್ಲಬೇಕು. ಇದವರೆಗೂ ರಾಜ್ಯ ಸರ್ಕಾರ ನಡೆದು ಬಂದ ರೈತ ವಿರೋಧಿ ನಿಲುವು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಜನರ ಪರ ಕೆಲಸ ಮಾಡಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿಎಂ ಪ್ರಧಾನಿಯವರನ್ನು ಭೇಟಿ ಮಾಡಿರುವ ಸಂಪೂರ್ಣ ಮಾಹಿತಿ ನೀಡಿದರೆ ನಮ್ಮಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಜನರ ಸಮಸ್ಯೆಗಳ ಬಗ್ಗೆ ಯೋಚಿಸದೆ ಸಂಪುಟ ಪುನಾರಚನೆ, ಸಿಎಂ ಬದಲಾವಣೆಯಲ್ಲಿ ಮುಳುಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಈಗಲಾದರೂ ಪುನರ್ ರಚನೆ, ಸಿಎಂ ಬದಲಾವಣೆ ವಿಚಾರ ಬದಿಗಿಟ್ಟು ಜನರ ಪರ ಕೆಲಸ ಮಾಡಲಿ ಎಂದರು.
ರಾಜ್ಯದ ಹಿತಾಸಕ್ತಿಗೆ ಧಕ್ಕೆ ಆಗದಿರಲಿ: ಸಲಹೆ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೇಂದ್ರದ ಜೊತೆಗೆ ವಿಶ್ವಾಸದಲ್ಲಿ ಸೌಹಾರ್ದತೆಯಲ್ಲಿ ಅನುಮತಿ ಪಡೆದರೆ ಮುಂದೆ ಕಾನೂನು ಹೋರಾಟದಲ್ಲಿ ಅನುಕೂಲವಾಗಲಿದೆ. ಇದರಲ್ಲಿ ರಾಜಕೀಯ ಬೆರೆಸಿದರೆ, ರಾಜಕೀಯ ಪ್ರತಿಷ್ಠೆ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮೇಕೆದಾಟು ಯೋಜನೆ ಇದು ಬಹಳ ವರ್ಷದ ರಾಜ್ಯದ ಜನರ ಕನಸಾಗಿದೆ. ಇದು 1996ರಿಂದ ಆರಂಭವಾಗಿದೆ. ಪವರ್ ಪ್ರಾಜೆಕ್ಟ್ ನಿಂದ ಆರಂಭವಾಗಿದ್ದು. ನಾನು ನೀರಾವರಿ ಸಚಿವ ಆಗಿದ್ದಾಗ ಬಹಳಷ್ಟು ಪ್ರದೇಶ ಮುಳುಗಡೆ ಆಗುತ್ತದೆ ಎಂದು ಕೇಳಿಬಂದಿತ್ತು. ಅದನ್ನು ಬದಲಾವಣೆ ಮಾಡಿ ಡಿಪಿಆರ್ ಸಿದ್ದ ಪಡೆಸಿದ್ದೇವು. ಕಾಂಗ್ರೆಸ್ ನವರು ಪಾದಯಾತ್ರೆ ಮಾಡದಿದ್ದರೆ ಇಷ್ಟೋತ್ತಿಗೆ ಯೋಜನೆ ಒಂದು ಹಂತಕ್ಕೆ ಬರುತ್ತಿತ್ತು. ಇವರು ಪಾದಯಾತ್ರೆ ಮಾಡಿದ್ದರಿಂದ ತಮಿಳುನಾಡಿನವರು ಮಿಸ್ ಲೀನಿಯಸ್ ಕೇಸ್ ಹಾಕಿದ್ದಾರೆ ಎಂದು ತಿಳಿಸಿದರು.












Click it and Unblock the Notifications