ಹಂಪಿ ಮಾದರಿಯಲ್ಲಿ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ
ಬಾದಾಮಿ, ಫೆ. 8 : ಚಾಲುಕ್ಯರ ಆಳ್ವಿಕೆಯ ವ್ಯಾಪ್ತಿಯ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಒಳಗೊಂಡಂತೆ ವಿವಿಧ ಐತಿಹಾಸಿಕ ಸ್ಥಳಗಳ ಸಮಗ್ರ ಹಾಗೂ ವಿಶೇಷ ಅಭಿವೃದ್ಧಿಗಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲಿ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುವುದು ಎಂದು ಐಟಿ- ಬಿಟಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ್ ಹೇಳಿದ್ದಾರೆ.
ಬಾದಾಮಿಯಲ್ಲಿ ಫೆ.7ರಿಂದ ಆರಂಭವಾಗಿರುವ ಮೂರು ದಿನಗಳ ಚಾಲುಕ್ಯ ಉತ್ಸವ - 2014ಕ್ಕೆ ಆರ್ಯಮಂಚಿ ವೇದಿಕೆಯಲ್ಲಿ ವಿಧ್ಯುಕ್ತವಾಗಿ ಶುಕ್ರವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. ನಾಡು ಹಾಗೂ ನುಡಿಯ ಬೆಳವಣಿಗೆಗೆ ಪೂರಕವಾಗುವ ಇಂತಹ ಉತ್ಸವಗಳು, ಸಮಾಜದಲ್ಲಿ ಸಾಮರಸ್ಯ, ಭಾವೈಕ್ಯತೆ ಬೆಳೆಸುತ್ತವೆ ಎಂದು ಅವರು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. [ಚಾಲುಕ್ಯ ಉತ್ಸವದ ವಿವರಗಳು]

ಇಂತಹ ಉತ್ಸವಗಳು ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗೆ ಸರ್ಕಾರದ ಕರ್ತವ್ಯ. ಸ್ಥಳೀಯ ದೇಶ, ವಿದೇಶದ ಪ್ರವಾಸಿಗರಿಗೆ ಸಕಲ ಸೌಲಭ್ಯಗಳು ಒಂದೇ ಸೂರಿನಡಿ ದೊರಕುವಂತೆ ಅತ್ಯುತ್ತಮ ಪ್ರವಾಸಿ ಪ್ಲಾಜಾ ನಿರ್ಮಿಸಲು ಆಯವ್ಯಯದಲ್ಲಿ ಹಣ ಕಾಯ್ದಿರಿಸಲಾಗಿದೆ ಅದಕ್ಕಾಗಿ 22 ಎಕರೆ 8 ಗುಂಟೆ ಜಮೀನು ಗುರುತಿಸಲಾಗಿದೆ ಎಂದು ಅವರು ಹೇಳಿದರು. [ಚಾಲುಕ್ಯ ಉತ್ಸವದ ಚಿತ್ರಗಳು]
6-8ನೇ ಶತಮಾನದಲ್ಲಿ ಚಾಲುಕ್ಯ ಅರಸರಿಂದ ಬೆಳೆಸಲ್ಪಟ್ಟ ಈ ನೆಲೆಯನ್ನು ಭಾರತದ ದೇವಾಲಯಗಳ ತೊಟ್ಟಿಲು ಎಂದು ಕಲಾವಿಮರ್ಶಕರು ಗುರುತಿಸಿದ್ದಾರೆ. ಇದೇ ಸಂದರ್ಭದಲ್ಲಿ ವಾರ್ತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಜೊತೆಗೂಡಿ ರಚಿಸಿದ ಚಾಲುಕ್ಯರ ಪುನರ್‌ಶೋಧನೆ ಗ್ರಂಥ ಲೋಕಾರ್ಪಣೆಗೊಂಡಿದ್ದು, ಚಾಲುಕ್ಯರ ಮೆರಗಿಗೆ ಇದೊಂದು ಆಕರ ಗ್ರಂಥವಾಗಲಿದೆ ಎಂದು ತಿಳಿಸಿದರು. [ಬಾದಾಮಿ ಚಾಲುಕ್ಯರ ಇತಿಹಾಸ]
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆಗೆ, ವಸ್ತು ಪ್ರದರ್ಶನ, ಕ್ರೀಡಾಕೂಟ, ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನ ಹಾಗೂ ಚಿತ್ರಕಲಾ ಪ್ರದರ್ಶನಗಳನ್ನು ಉದ್ಘಾಟಿಸಿ ಸಾರ್ವಜನಿಕ ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟರು.
ಕಾರ್ಯಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಎಚ್.ವಾಯ್. ಮೇಟಿ, ಕಾಶಪ್ಪನವರ, ನಾರಾಯಣಸಾ ಭಾಂಡಗೆ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಪುರಸಭೆಯ ಅಧ್ಯಕ್ಷರು ಹಾಗೂ ಸದಸ್ಯರು ತಾಲೂಕ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications