ಉತ್ತರ ಕರ್ನಾಟಕದ ನೂತನ 'FMCG ಉತ್ಪಾದನಾ ಪಾರ್ಕ್' ಲೋಕಾರ್ಪಣೆ
ಬೆಂಗಳೂರು, ಅಕ್ಟೋಬರ್ 29: ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯಾಗಲಿರುವ ಹಾಗೂ ಈ ಭಾಗದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಗೆ ಕಾರಣವಾಗಲಿರುವ ನೂತನ 'ಪ್ಲಗ್ ಅಂಡ್ ಪ್ಲೇ' ಮಾದರಿಯ FMCG ತಯಾರಿಕಾ ಪಾರ್ಕ್ ಕಾರ್ಯಾಚರಣೆಗೆ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ ಅವರು ಚಾಲನೆ ನೀಡಿದರು.
ಬೆಂಗಳೂರಿನ FKCCI ಕಚೇರಿಯಲ್ಲಿ ಮಂಗಳವಾರ ಅವರು ಈ ಹೊಸ ಉದ್ಯಮ ಲೋಕಾರ್ಪಣೆಗೊಳಿಸಿದರು ಅವರು, ಉತ್ತರ ಕರ್ನಾಟಕದ ಸಾವಿರಾರು ಉದ್ಯೋಗಗಳ ಸೃಷ್ಟಿಯಾಗಲಿವೆ. ಏಕಸ್ ಇನ್ಫ್ರಾ ಕಂಪನಿಯು ಹುಬ್ಬಳ್ಳಿಯಲ್ಲಿ ಈ ತಯಾರಿಕಾ ಪಾರ್ಕ್ ನಿರ್ಮಿಸಿದೆ ಎಂದು ಮಾಹಿತಿ ನೀಡಿದರು.

ಪ್ಲಗ್ ಅಂಡ್ ಪ್ಲೇ ಮಾದರಿಯ ಮೂಲ ಸೌಕರ್ಯ ಇರುವುದರಿಂದ ಪೂರಕ ಉದ್ದಿಮೆಗಳು ನೇರವಾಗಿ ಕಾರ್ಯಾಚರಣೆಯಲ್ಲಿ ತೊಡಗಬಹುದಾಗಿದೆ . ಈ ನೂತನ ಉತ್ಪಾದನಾ ವ್ಯವಸ್ಥೆಯು ಎಫ್ಎಂಸಿಜಿ ಉತ್ಪಾದನಾ ಪ್ರಮಾಣ ಮತ್ತು ಉತ್ಪಾದನಾ ಘಟಕಗಳ ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ಮೂಲಕ ಉತ್ಪಾದನಾ ಘಟಕಗಳು ರಫ್ತು ಹೆಚ್ಚಳಕ್ಕೆ ಪೂರಕವಾಗ ಈ ಭಾಗದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ ಎಂದು ಅವರು ಹೇಳಿದರು.
ಮಾರುಕಟ್ಟೆಯಲ್ಲಿ ಅಧಿಕ ಪಾಲು
ಉತ್ತರ ಕರ್ನಾಟಕದ ಹೃದಯಭಾಗದಲ್ಲಿ ನಿರ್ಮಾಣಗೊಂಡಿರುವ ಈ ಪಾರ್ಕ್‌ನಿಂದ ಈ ಭಾಗದ ಸುಮಾರು 400 ಕಿಲೋಮೀಟರ್ ಸುತ್ತಳತೆಯಲ್ಲಿನ ಉತ್ಪಾದನಾ ಘಟಕಗಳು ದೇಶದ ಎಫ್ಎಂಸಿಜಿ ಸರಕುಗಳ ಪೈಕಿ 35% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿವೆ.
ಈ ಹಿನ್ನೆಲೆಯಲ್ಲಿ ಇಕಾಸ್ ಇನ್ಫ್ರಾ ಸಂಸ್ಥೆ (ಎಇಕ್ಯೂಯುಎಸ್ ಇನ್ಫ್ರಾ) ಈ ನೂತನ ವ್ಯವಸ್ಥೆ ಈ ಭಾಗದಲ್ಲಿ ಈ ಕೈಗಾರಿಕೆಗಳ ಬಲವರ್ಧನೆ ನಿಟ್ಟಿನಲ್ಲಿ ದೊಡ್ಡ ಪಾತ್ರವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಕೈಗಾರಿಕಾ ಮೂಲಸೌಕರ್ಯ ಸೃಷ್ಟಿಸುವ ಮೂಲಕ ಈ ಭಾಗದ ಸಾಮಾಜಿಕ ಪ್ರಗತಿಗೆ ಮತ್ತು ಸಾವಿರಾರು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಇದು ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಹೊಸ ಕೈಗಾರಿಕಾ ನೀತಿಯು ಎಫ್ಎಂಸಿಜಿ ವಲಯದ ಬೆಳವಣಿಗೆಗೆ ಉತ್ತೇಜನ ನೀಡುವಂತಿದೆ. ಈ ವಲಯವು ದೇಶದ ಆರ್ಥಿಕತೆ, ಜಿಡಿಪಿ ಮತ್ತು ಉದ್ಯೋಗ ಸೃಷ್ಟಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಈ ಭಾಗದ ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಹಾಯವಾಗಲಿದೆ. ಸುಸ್ಥಿರ ಬೆಳವಣಿಗೆಗೆ ಮಾದರಿ ಸೃಷ್ಟಿ ಆಗಲಿದೆ ಎಂದು ವಿವರಿಸಿದರು.
ರಾಜ್ಯದ ಕೈಗಾರಿಕಾ ನೀತಿಯಲ್ಲಿ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಹಾಗೂ ನವೋದ್ಯಮಗಳಿಗೆ ಸಾಕಷ್ಟು ಬೆಂಬಲ ಕೊಡಲಾಗಿದೆ ಎಂದು ಹೇಳಿದರು.












Click it and Unblock the Notifications