• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿದ ಸಿಎಂ!

|

ಬೆಂಗಳೂರು, ಮೇ 26: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.

ಸಿಎಂ ಯಡಿಯೂರಪ್ಪ ಇಂದು ಬೆಳಗಾವಿ, ಬಳ್ಳಾರಿ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಿಡಿಒಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ವಿವಿಧ ಪಂಚಾಯಿತಿ ಅಧ್ಯಕ್ಷರ ಮನವಿಗೆ ಸ್ಪಂದಿಸಿ ಈ ಘೋಷಣೆ ಮಾಡಿದರು.

ಗ್ರಾ.ಪಂ ಅಧ್ಯಕ್ಷರು, ಪಿಡಿಒಗಳೊಂದಿಗೆ ಸಂವಾದ

ಗ್ರಾ.ಪಂ ಅಧ್ಯಕ್ಷರು, ಪಿಡಿಒಗಳೊಂದಿಗೆ ಸಂವಾದ

ಕೋವಿಡ್-19 ಸೋಂಕಿನ 2ನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇಂದು ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒ ಗಳೊಂದಿಗೆ ಸಂವಾದ ನಡೆಸಿ, ಆತ್ಮಸ್ಥೈರ್ಯ ಮೂಡಿಸಿದರು.

ಕೊರೊನಾ 2ನೇ ಅಲೆ ಮೊದಲಿಗಿಂತ ವಿಭಿನ್ನವಾಗಿದೆ. ಹೆಚ್ಚು ಹಾನಿಕಾರಕವಾಗಿದೆ. ಕೊರೊನಾ ಸೊಂಕು ತ್ವರಿತವಾಗಿ ವ್ಯಾಪಿಸುತ್ತಿದ್ದು, ತುರ್ತು ನಿವಾರಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

15ನೇ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ

15ನೇ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ

ಕಳೆದ ವಾರ ಘೋಷಿಸಿದ ಪ್ಯಾಕೇಜ್‌ನಲ್ಲಿ ಎಲ್ಲಾ ಗ್ರಾಮ ಪಂಚಾಯತ್‍ಗಳಿಗೂ ಎಸ್‌ಡಿಆರ್ಎಫ್ ನಿಧಿಯಿಂದ ತಲಾ 50,000 ರೂ.ಗಳನ್ನು ಬಿಡುಗಡೆ ಮಾಡಲು ಆದೇಶಿಸಿರುತ್ತೇನೆ. ಸದ್ಯದಲ್ಲಿಯೇ ಹಣ ತಮ್ಮ ಕೈ ಸೇರಲಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈಗಾಗಲೇ 14ನೇ ಹಣಕಾಸು ಆಯೋಗದ ಅನುದಾನದ ಉಳಿಕೆ ಹಣ, 15ನೇ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ ಹಾಗೂ ಗ್ರಾಮ ಪಂಚಾಯತ್ ಸ್ವಂತ ಸಂಪನ್ಮೂಲವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.

ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು

ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು

ಕೋವಿಡ್ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳು ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಮುಖ್ಯಮಂತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಂತೆ, ಜಾತ್ರೆ ಮತ್ತಿತರ ಕಾರ್ಯಕ್ರಮಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಸೋಂಕಿತರಿಗೆ ನೆರವಾಗಲು ಗ್ರಾಮ ಪಂಚಾಯತ್‍ಗಳಲ್ಲಿ ಹೆಲ್ಪ್ ಡೆಸ್ಕ್ ಹಾಗೂ ಹೆಲ್ಪ್‌ಲೈನ್‌ಗಳನ್ನು ಪ್ರಾರಂಭಿಸಬೇಕು. ಕಾರ್ಯಪಡೆಗಳ ಜೊತೆ ಕಾರ್ಯನಿರ್ವಹಿಸಲು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ದಾನಿಗಳ ನೆರವನ್ನು ಪಡೆಯಬಹುದು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಆರ್‌ಎಟಿ ಕಿಟ್‌ಗಳನ್ನು ಒದಗಿಸಲು ಸೂಚನೆ

ಆರ್‌ಎಟಿ ಕಿಟ್‌ಗಳನ್ನು ಒದಗಿಸಲು ಸೂಚನೆ

ಮಕ್ಕಳು, ಮಹಿಳೆಯರು, ವಿಶೇಷ ಚೇತನರು ಹಾಗೂ ವೃದ್ಧರು ತೊಂದರೆಯಲ್ಲಿದ್ದಲ್ಲಿ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಬೇಕು. ಒಂದು ಪಕ್ಷ ಸೋಂಕಿತರು ಮೃತಪಟ್ಟು ಮಕ್ಕಳು ಅನಾಥರಾದಲ್ಲಿ ಅವರನ್ನು ಯಾರೂ ದತ್ತು ತೆಗೆದುಕೊಳ್ಳಲು ಬಿಡಬಾರದು. ಬದಲಾಗಿ ‘ಮಕ್ಕಳ ರಕ್ಷಣಾ ಸಮಿತಿ'ಗಳಿಗೆ ಸೇರಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬೆಳಗಾವಿ ಜಿಲ್ಲೆಯ ತೊಂಡಿಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್ ದೇಸಾಯಿ ಸಂವಾದದ ವೇಳೆ ತಮ್ಮ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ, ಜನರಿಗೆ ಸ್ಥೈರ್ಯ ತುಂಬಿರುವುದಾಗಿ ತಿಳಿಸಿದರು. ಗ್ರಾಮದಲ್ಲಿ ಪರೀಕ್ಷೆ ನಡೆಸಲು ಆರ್‌ಎಟಿ ಕಿಟ್‌ಗಳ ಕೊರತೆ ಇರುವುದರ ಕುರಿತು ಅವರು ಮುಖ್ಯಮಂತ್ರಿಯವರ ಗಮನ ಸೆಳೆದಾಗ, ಕೂಡಲೇ ಒದಗಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷರಿಗೆ ಮುಖ್ಯಮಂತ್ರಿ ಅಭಿನಂದನೆ

ಗ್ರಾ.ಪಂ ಅಧ್ಯಕ್ಷರಿಗೆ ಮುಖ್ಯಮಂತ್ರಿ ಅಭಿನಂದನೆ

ಬಳ್ಳಾರಿ ಜಿಲ್ಲೆಯ ಅಲಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, 64 ವರ್ಷದ ಶಿವಾನಂದಪ್ಪ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಸಕ್ರಿಯ ಪ್ರಕರಣಗಳನ್ನು 36ರಿಂದ 1ಕ್ಕೆ ಇಳಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಶಾಂತಿ ಸಭೆಗಳನ್ನು ನಡೆಸಿ, ಜಾತ್ರೆ ಮತ್ತಿತರ ಸಮಾರಂಭ ನಡೆಸದಂತೆ ಗ್ರಾಮಸ್ಥರ ಮನವೊಲಿಸಿರುವುದಾಗಿ ಶಿವಾನಂದಪ್ಪ ಅವರು ಮಾಹಿತಿ ನೀಡಿದರು.

ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ

ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ

ಮೈಸೂರು ಜಿಲ್ಲೆ ವರುಣಾ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಅವರು ಮಾತನಾಡಿ, ಮನೆ ಮನೆಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ವ್ಯಾಕ್ಸಿನ್‌ಗಳನ್ನು ಶೀಘ್ರವೇ ಒದಗಿಸುವಂತೆ ಮನವಿ ಮಾಡಿದರು. ವ್ಯಾಕ್ಸಿನ್‌ಗಳನ್ನು ಲಭ್ಯತೆ ಆಧರಿಸಿ ಪೂರೈಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಅರಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ಅವರು ಮಾತನಾಡಿ, ಗ್ರಾಮದಲ್ಲಿ ಸೋಂಕಿತರ ಪತ್ತೆಯಾದಾಗ, ಅವರ ಮನೆಗೇ ಔಷಧ, ಆಹಾರ ವಸ್ತುಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮನೆಗಳು ಸಣ್ಣದಾಗಿರುವ ಕುಟುಂಬಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡರೆ, ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವಂತೆ ಮುಖ್ಯಮಂತ್ರಿಗಳು ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಿದರು.

ಟಾಸ್ಕ್ ಫೋರ್ಸ್‌ಗಳ ಮಹತ್ವದ ಪಾತ್ರ

ಟಾಸ್ಕ್ ಫೋರ್ಸ್‌ಗಳ ಮಹತ್ವದ ಪಾತ್ರ

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ, ಕೋವಿಡ್-19 ಮೊದಲ ಅಲೆ ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್‌ಗಳು ಮಹತ್ವದ ಪಾತ್ರ ವಹಿಸಿವೆ. ಇದೀಗ ಎರಡನೇ ಅಲೆಯನ್ನೂ ನಿಯಂತ್ರಿಸುವಲ್ಲಿ ಈ ಟಾಸ್ಕ್ ಫೋರ್ಸ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವಲ್ಲಿ ಟಾಸ್ಕ್ ಫೋರ್ಸ್ ಪಾತ್ರ ಅತ್ಯಂತ ಮಹತ್ವಪೂರ್ಣ ಎಂದರು. ಕಂಟೇನ್ಮೆಂಟ್ ಝೋನ್‌ಗಳನ್ನು ಹೊರತುಪಡಿಸಿ, ಇತರ ಪ್ರದೇಶಗಳಲ್ಲಿ ನರೇಗಾ ಕಾಮಗಾರಿ ನಡೆಸುತ್ತಿರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದರು.

  DK Shivakumar - ದೊರೆಸ್ವಾಮಿ ನಮಗೆಲ್ಲಾ ಸ್ಪೂರ್ತಿ ! | Oneindia Kannada
  ವರ್ಚುವಲ್ ವಿಡಿಯೋ ಸಂವಾದ

  ವರ್ಚುವಲ್ ವಿಡಿಯೋ ಸಂವಾದ

  ವರ್ಚುವಲ್ ವಿಡಿಯೋ ಸಂವಾದದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್, ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಗ್ರಾಮೀಣಾಭಿವೃಧ್ಧಿ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  English summary
  Chief Minister BS Yediyurappa said the staff of the Rural Development and Panchayat Raj department would be treated as Covid-19 Warriors.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X