ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್
ಬೆಂಗಳೂರು, ಸೆಪ್ಟೆಂಬರ್ 15: ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಆಗಾಗ ಹೊಸ ಸುದ್ದಿಯನ್ನು ನೀಡುತ್ತಿರುತ್ತದೆ. ಹಾಗೆಯೇ ಇದೀಗ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೌದು.. ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇನು ಎನ್ನುವ ಪ್ರಶ್ನೆ ಬಹುಯತೇಕ ಮಂದಿ ತಲೆಯಲ್ಲಿ ಕಾಡುತ್ತಿರುತ್ತದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

2025-26ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವರ್ಷದ ಅಂತ್ಯದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಉಲ್ಲೇಖ 2ರ ಪತ್ರದಲ್ಲಿ ಅನುಮತಿ ನೀಡಲಾಗಿದೆ. ಈ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನೇಮಕಗೊಂಡ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಪಾವತಿಸಲು ಅನುಮೋದನೆ ನೀಡಲಾಗಿದೆ.
2025-26ನೇ ಸಾಲಿನ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಜೂನ್ 2025ರಿಂದ ಸೆಪ್ಟಂಬರ್ 2025ರ ವರೆಗೆ 20416.20 ಲಕ್ಷ ರೂಪಾಯಿ, ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 7124.25 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆರ್ಥಿಕ ಇಲಾಖೆಯಿಂದ ಅನುದಾನವನ್ನು ನೇರವಾಗಿ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಯಾಗಿದ್ದು, ಕೂಡಲೇ ತಾಲ್ಲೂಕು ಪಂಚಾಯಿತಿಯಿಂದ ಅನುದಾನವನ್ನು ಡಿಡಿಓ ಲಾಗ್ ಇನ್‌ಗೆ ಅಪ್ಲೋಡ್ ಮಾಡಿಸಿಕೊಳ್ಳಬೇಕಾಗುತ್ತದೆ.
ವಿಳಂಬ ಆಗದಂತೆ ನಿಯಮಾನುಸಾರ ತಾತ್ಕಾಲಿಕವಾಗಿ ನೇಮಕವಾದ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಪಾವತಿಸಲು ಕ್ರಮವಹಿಸತಕ್ಕದ್ದು. ಈ ಕುರಿತು ಜಿಲ್ಲಾ ಉಪನಿರ್ದೇಶಕರು ಅವರು ಸೂಕ್ತ ಮೇಲುಸ್ತುವಾರಿ ಮಾಡುವುದರ ಜೊತೆಗೆ ಈ ಕಛೇರಿಗೆ ಅನುಪಾಲನಾ ವರದಿಯನ್ನು ಸಲ್ಲಿಸುವುದು. ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳ ತಮ್ಮ ಡಿಎಸ್‌ಸಿ ಅವಧಿ ಮುಕ್ತಾಯವಾಗುವ 15 ದಿನಗಳ ಮುಂಚಿತವಾಗಿಯೇ ನವೀಕರಣಕ್ಕೆ ಅರ್ಜಿ ಸಲ್ಲಿಸಿ, ಡಿಎಸ್ಸಿ, ನವೀಕರಣವನ್ನು ಮಾಡಿಸಿಕೊಂಡು ಸಕಾಲದಲ್ಲಿ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿಸಲು ತಿಳಿಸಿದೆ.
ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ತಾಲ್ಲೂಕು ಪಂಚಾಯಿತಿ ಅಥವಾ ಅನುಷ್ಠಾನಾಧಿಕಾರಿಗಳ ಅಥವಾ ಡಿಡಿಓಗಳ ಹಂತದಲ್ಲಿ ವಿಳಂಬವಾದಲ್ಲಿ ಮತ್ತೊಮ್ಮೆ ಅನುದಾನವನ್ನು ಒದಗಿಸುವುದಿಲ್ಲವೆಂದು ಮತ್ತು ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು, ಕ್ರಮ ಜರುಗಿಸಲಾಗುವುದು. ಮುಂದುವರೆದು, ಅತಿಥಿ ಶಿಕ್ಷಕರುಗಳಿಗೆ ಅಕ್ಟೋಬರ್ ತಿಂಗಳ ಪೂರ್ತಿ ಗೌರವ ಸಂಭಾವನೆಯನ್ನು ಪಾವತಿಸಲು ನೀಡಿರುವ ಉಲ್ಲೇಖ (3)ರ ಜ್ಞಾಪನದಲ್ಲಿರುವ ಸೂಚನೆಗಳಂತೆ ಕ್ರಮವಹಿಸುವುದು ಎಂದು ಸರ್ಕಾರ ತಿಳಿಸಿದೆ. ಹೀಗೆ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.












Click it and Unblock the Notifications