56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ; ಒಳಮೀಸಲಾತಿ ಜಾರಿಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ
ಬೆಂಗಳೂರು: ದಶಕಗಳ ಕಾಲದ ಹೋರಾಟ ಮತ್ತು ಕಾನೂನು ಸವಾಲುಗಳ ನಂತರ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ (SC) ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಮಾನ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಹೊಸ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಆರಂಭಿಸಲು ಹಸಿರು ನಿಶಾನೆ ತೋರಿಸಲಾಗಿದೆ. ಈ ಮೂಲಕ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ.
ಹೊಸ ಮೀಸಲಾತಿ ಸೂತ್ರ
ನ್ಯಾಯಾಲಯ ವಿಧಿಸಿರುವ ಶೇ. 50ರ ಒಟ್ಟು ಮೀಸಲಾತಿ ಮಿತಿಯನ್ನು ಮೀರದಂತೆ ಸರ್ಕಾರವು ಈ ಹೊಸ ಮಾದರಿಯನ್ನು ರೂಪಿಸಿದೆ. ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಒಟ್ಟು ಶೇ. 15ರಷ್ಟು ಮೀಸಲಾತಿಯನ್ನು ಮೂರು ಪ್ರಮುಖ ಪ್ರವರ್ಗಗಳಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರವರ್ಗ-ಎ (SC ಎಡಗೈ ಸಮುದಾಯಗಳು): ಈ ವರ್ಗಕ್ಕೆ ಶೇ. 5.25 ರಷ್ಟು ಒಳಮೀಸಲಾತಿಯನ್ನು ನೀಡಲಾಗಿದೆ. ದಶಕಗಳಿಂದ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹಿಂದುಳಿದಿದ್ದ ಈ ಸಮುದಾಯಕ್ಕೆ ಇದು ದೊಡ್ಡ ಮಟ್ಟದ ಬಲ ತುಂಬಲಿದೆ.
ಪ್ರವರ್ಗ- ಬಿ (SC ಬಲಗೈ-ಹೊಲೆಯ ಮತ್ತು ಇತರ ಸಮುದಾಯಗಳು): ಈ ವರ್ಗಕ್ಕೂ ಸಹ ಸಮಾನವಾಗಿ ಶೇ. 5.25 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.
ಪ್ರವರ್ಗ- ಸಿ: ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿದಂತೆ ಇತರ ಸಮುದಾಯಗಳಿಗೆ ಶೇ. 4.5 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಈ ಪ್ರವರ್ಗಕ್ಕೆ ಲಭ್ಯವಾಗುವ ಒಟ್ಟು ಹುದ್ದೆಗಳಲ್ಲಿ ಶೇ. 20ರಷ್ಟು ಭಾಗವನ್ನು (ಅಂದರೆ ಪ್ರತಿ 5 ಹುದ್ದೆಗಳಲ್ಲಿ 1 ಹುದ್ದೆ) ಪರಿಶಿಷ್ಟ ಜಾತಿಯಲ್ಲಿರುವ 59 ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳಿಗೆ ಮೀಸಲಿಡಲು ಆದೇಶಿಸಲಾಗಿದೆ.
ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ
ಸರ್ಕಾರವು ಈ ಹಂಚಿಕೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ಪಡೆದಿರುವ 56,432 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಹಳೆಯ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ಒಳಮೀಸಲಾತಿ ಸೂತ್ರದ ಅಡಿಯಲ್ಲಿ ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತು ಕರ್ನಾಟಕ ಲೋಕಸೇವಾ ಆಯೋಗ (KPSC) ಸೇರಿದಂತೆ ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಒಂದೇ ಹುದ್ದೆ ಲಭ್ಯವಿದ್ದಲ್ಲಿ, ಅದನ್ನು 'ಸಾಮಾನ್ಯ ಪರಿಶಿಷ್ಟ ಜಾತಿ' ಎಂದು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ನಿರ್ಧರಿಸಲಾಗಿದೆ.

ನನಗೆ ಅತೀವ ಸಂತೋಷವಾಗುತ್ತಿದೆ
ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡುವ ವಿಚಾರದಲ್ಲಿ ನಮ್ಮ ಸರ್ಕಾರವು ಕೈಗೊಂಡಿರುವ ಮಹತ್ವದ ನಿರ್ಧಾರದ ಅನ್ವಯ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಮುಂದುವರೆಸಲು ಸರ್ಕಾರವು ಆದೇಶಿಸಿದೆ. ಈಗಾಗಲೇ ಆರ್ಥಿಕ ಇಲಾಖೆಯು ಅನುಮೋದನೆಯನ್ನು ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡುವ ವಿಚಾರದಲ್ಲಿ ನಮ್ಮ ಸರ್ಕಾರವು ಕೈಗೊಂಡಿರುವ ಮಹತ್ವದ ನಿರ್ಧಾರದ ಅನ್ವಯ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಮುಂದುವರೆಸಲು ದಿ.27.04.2026ರಂದು ಸರ್ಕಾರವು ಆದೇಶಿಸಿದೆ.
— Siddaramaiah (@siddaramaiah) April 28, 2026
ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ಆದೇಶದನ್ವಯ ಶೇ.50 ಮೀಸಲಾತಿ ಪ್ರಮಾಣವನ್ನು… pic.twitter.com/JxeB1NH6rT
ಈ ಕುರಿತಾದ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲ ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಲು ನನಗೆ ಅತೀವ ಸಂತೋಷವಾಗುತ್ತಿದೆ. ನಮ್ಮ ಸರ್ಕಾರವು ಒಳಮೀಸಲಾತಿ ವಿಚಾರದಲ್ಲಿ ನುಡಿದಂತೆ ನಡೆದಿದ್ದು, ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವದೆಡೆಗಿನ ತನ್ನ ಬದ್ಧತೆಯನ್ನು ಎತ್ತಿಹಿಡಿಯುವ ಮೂಲಕ ರಾಜ್ಯದ ಜನತೆಯ ವಿಶ್ವಾಸಕ್ಕೆ ಮುಕ್ಕಾಗದಂತೆ ನಡೆದುಕೊಂಡಿದೆ ಎಂದಿದ್ದಾರೆ. ಈ ನಿರ್ಧಾರವು ರಾಜ್ಯದ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದು, ದೀರ್ಘಕಾಲದ ನೇಮಕಾತಿ ವಿಳಂಬಕ್ಕೆ ಈಗ ತೆರೆ ಬಿದ್ದಂತಾಗಿದೆ.












Click it and Unblock the Notifications