ಎಸ್‌ಎಸ್‌ಎಲ್‌ಸಿ-ಪಿಯುಸಿ ಮಂಡಳಿ ವಿಲೀನಕ್ಕೆ ರಾಜ್ಯಪಾಲರ ಅಂಕಿತ
ಬೆಂಗಳೂರು, ಅಕ್ಟೋಬರ್ 12: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿಲೀನಕ್ಕೆ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ.
ಇತ್ತೀಚೆಗಷ್ಟೇ ಮುಂಗಾರು ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವಿಧೇಯಕ 2022ಕ್ಕೆ ಅನುಮೋದನೆ ನೀಡಲಾಗಿತ್ತು. ಇದೀಗ ಆ ಅನುಮೋದನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಒಂದೇ ಮಂಡಳಿಯಾಗಿ ಅಧಿಕೃತಗೊಂಡಿವೆ.
ಇನ್ನು ಮುಂದೆ ಈ ವಿಲೀನಗೊಂಡ ಮಂಡಳಿ ಮತ್ತು ಇಲಾಖೆ ಸೇರಿ 'ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ' (ಕೆಎಸ್ಇಇಬಿ) ಎಂದು ಕರೆಯಲ್ಪಡುತ್ತವೆ. ಈ ಮಂಡಳಿಗಳಿಂದ ನಡೆಯಲ್ಪಡುವ ಮತ್ತು ಕರ್ನಾಟಕ ಪಿಯುಸಿ ಪರೀಕ್ಷೆಗಳ ಪ್ರಾಥಮಿಕ ಆಡಳಿತವು ಒಂದಾಗಿರುತ್ತದೆ. ಈ ಕುರಿತ ವಿಚಾರದಲ್ಲಿ ಅನಗತ್ಯ ಗೊಂದಲ ಬೇಡ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದ್ದಾರೆ.

ವಿಧೇಯಕ ಮಂಡಿಸಿದ್ದ ಸಚಿವರು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಕೂಲವಾಗುವಂತೆ ಎರಡು ಮಂಡಳಿಗಳಲ್ಲಿ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕಾಯಾಭಾರ ಕಡಿಮೆ ಮಾಡುವ ಉದ್ದೇಶದಿಂದ ಇಲಾಖೆ- ಮಂಡಳಿಗಳ ವಿಲೀನಕ್ಕೆ ಒಪ್ಪಿಗೆ ನೀಡಲಾಗಿದೆ. ಇದರಿಂದ ಏಕರೂಪ ಪರೀಕ್ಷಾ ಮಂಡಳಿ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದರು.
ಪರೀಕ್ಷೆಗಳ ಜವಾಬ್ದಾರಿ ಕೆಎಸ್ಇಇಬಿಗೆ
ವಿಧಾನಸಭೆ ಅನುಮೋದಿಸಿದ ಶಾಸನದ ಪ್ರಾಥಮಿಕ ಗುರಿಯು 'ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ' (ಕೆಎಸ್ಇಇಬಿ) ಎಂದು ನಾಮಕರಣ ಮಾಡುವುದು ಆಗಿದೆ. ಹತ್ತನೇ ತರಗತಿಯ ಪರೀಕ್ಷೆಗಳ ಜತೆಗೆ ಮಂಡಳಿಯು ಇದೀಗ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಿರ್ವಹಿಸಲಿದೆ. ಇನ್ನೂ ಮುಖ್ಯವಾಗಿ ಇತರ ಸಾರ್ವಜನಿಕ ಪರೀಕ್ಷೆಗಳನ್ನು ಕೂಡ ನೋಡಿಕೊಳ್ಳಲಿದೆ.

ಈ ಹೊಸ ಮಂಡಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಮಾರ್ಗದರ್ಶನ ಮಾಡುತ್ತದೆ. ಈ ಮಂಡಳಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಿಯುಸಿ ಶಿಕ್ಷಣ ಇಲಾಖೆಯಿಂದ ಜಂಟಿ ನಿರ್ದೇಶಕ ಶ್ರೇಣಿ ಸಮಾನವಾಗಿ ತಲಾ ಒಬ್ಬರಂತೆ ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ಇರಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications