Election Bond: ನಿರ್ಮಲಾ ಸೀತರಾಮನ್ ಸೇರಿ ಬಿಜೆಪಿ ನಾಯಕರ ವಿರುದ್ಧ SIT ಇಲ್ಲ CID ತನಿಖೆಗೆ ಇಂದು ಆದೇಶ ಸಾಧ್ಯತೆ
ಬೆಂಗಳೂರು, ಸೆಪ್ಟಂಬರ್ 30: ಚುನಾವಣಾ ಬಾಂಡ್ ಮೂಲಕ ಬಿಜೆಪಿ ಸುಲಿಗೆ ಮಾಡಿದೆ. ಇದೊಂದು ದೊಡ್ಡ ಆರ್ಥಿಕ ಹಗರಣ ಎಂದು ಕರೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ದಾಖಲಿಸಲಾದ ದೂರಿನ ತನಿಖೆಯನ್ನು ಇಂದು ಸಿಐಡಿ, ಇಲ್ಲವೇ ಎಸ್‌ಐಟಿಗೆ ವಹಿಸುವ ಸಾಧ್ಯತೆ ಇದೆ.
ಹೌದು, 8000 ಕೋಟಿ ಚುನಾವಣಾ ಬಾಂಡ್ ಹಗರಣ ಸಲುವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅಮಿತ್ ಶಾ, ರಾಜ್ಯ ಬಿಜೆಪಿ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದೊಂದು ಬೃಹತ್ ಹಗರಣವಾಗಿದ್ದರಿಂದ ಪೊಲೀಸ್ ಠಾಣೆ ಮಟ್ಟದಲ್ಲಿ ತನಿಖೆ ಬದಲಾಗಿ ಎಸ್‌ಐಟಿ, ಸಿಐಡಿಗೆ ವಹಿಸಬೇಕೆಂಬ ಆಗ್ರಹ ಜೋರಾಗಿದೆ. ಆದ್ದರಿಂದ ಹಿರಿಯ ಐಪಿಎಸ್ ಅಧಿಕಾರಿ ಮಟ್ಟದಲ್ಲಿ ವಿಶೇಷ ತನಿಖೆ ತಂಡ (ಎಸ್‌ಐಟಿ) ರಚನೆ ಮಾಡಬೇಕು. ಇಲ್ಲವೇ ಸಿಐಡಿಗೆ ತನಿಖೆಗೆ ಪ್ರಕರಣ ವಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಕುರಿತು ಇಂದು ಸೋಮವಾರ (ಸೆ.30) ಅಧಿಕೃತ ಆದೇಶ ಹೊರ ಬೀಳಲಿದೆ.
ಇದರೊಂದಿಗೆ ಮುಡಾ ಹಗರಣಕ್ಕೆ ಆದೇಶಿಸಿದ ಬಳಿಕ ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಬಾಂಡ್ ಕುರಿತು ಪ್ರಕರಣ ದಾಖಲಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ತನಿಖಾ ಸಂಸ್ಥೆಗಳ ಜಂಗಿ ಕುಸ್ತಿ ಶುರುವಾಗಿದೆ.
ಏನಿದು ಚುನಾವಣಾ ಬಾಂಡ್ ಪ್ರಕರಣ?
ಚುನಾವಣೆ ಬಾಂಡ್ ಹೆಸರಿನಲ್ಲಿ ಖಾಸಗಿ ಕಂಪನಿಗಳಿಂದ ರೂ. 8000 ಕೋಟಿ ರೂಪಾಯಿ ಹಣವನ್ನು ಕೇಂದ್ರ ಬಿಜೆಪಿ ನಾಯಕರು ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದು ದೇಶವ್ಯಾಪಿ ಭಾರಿ ಸದ್ದು ಮಾಡಿತ್ತು. ಈ ಬಗ್ಗೆ ಜನಾಧಿಕಾರ ಸಂಘರ್ಷ ಸಮಿತಿ ಆದರ್ಶ ಅಯ್ಯರ್ ಅವರು ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿತ್ತು.
ಇದರ ಬೆನ್ನಲ್ಲೆ ಬೆಂಗಳೂರಿನ ತಿಲಕ್ ನಗರದಲ್ಲಿ ವಿತ್ತ ಸಚಿವೆ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ವಿವಿಧ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಹಗರಣ ಇದಾಗಿದ್ದರಿಂದ ಬಿಜೆಪಿ ವಿರುದ್ಧ ಎಸ್‌ಐಟಿ, ಇಲ್ಲವೇ ಸಿಐಡಿ ಮೂಲಕ ತನಿಖೆಗೆ ಆದೇಶಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.
ರಾಜೀನಾಮೆಗೆ ಆಗ್ರಹ
ಚುನಾವಣಾ ಬಾಂಡ್ ಹಗರಣ ಸಲುವಾಗಿ ಎಫ್‌ಐಆರ್ ದಾಖಲಾಗಿದ್ದು, ಈ ಸಂಬಂಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಆಗ್ರಹಿಸಿದೆ. ಈ ಸಂಬಂಧ ಪಕ್ಷದ ವಕ್ತಾರ ಅಭಿಷೇಕ ಸಿಂಘ್ವಿ ಹಾಗೂ ಜೈರಾಮ್ ರಮೇಶ್ ಅವರು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದರು.
ಪ್ರಜಾಪ್ರಭುತ್ವ ದುರ್ಬಲಗೊಳಿಸಿರುವ ನಿರ್ಮಲಾ ಸೀತಾರಾಮನ್ ಕೂಡಲೇ ರಾಜೀನಾಮೆ ಕೊಡಬೇಕು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಎಸ್‌ಐಟಿಯಿಂದ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದರಿಂದ ಕಾಂಗ್ರೆಸ್ ಬಿಜೆಪಿ ಮಧ್ಯೆ ರಾಜೀನಾಮೆ ಆಗ್ರಹಗಳು ಶುರುವಾಗಿವೆ.












Click it and Unblock the Notifications