ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಆಯೋಗ? ಸಿಎಂ ಕಾನೂನು ಸಲಹೆ ಮೊರೆ!
ಬೆಂಗಳೂರು: ಅಲೆಮಾರಿ ಜನಾಂಗದವರಿಗೆ ಆಯೋಗ ರಚನೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ಕಾನೂನು ಸಲಹೆ ಪಡೆದು ತೀರ್ಮಾನಕ್ಕೆ ಬರಲಾಗುವುದು, ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಅಲ್ಲದೆ ಇನ್ನೂ ಹಲವು ಮಹತ್ವದ ಸಂಗತಿಗಳ ಬಗ್ಗೆ ಇದೇ ಸಭೆಯಲ್ಲಿ ಚರ್ಚಿಸಲಾಗಿದೆ.
ಅಷ್ಟಕ್ಕೂ ಪರಿಶಿಷ್ಟ ಜಾತಿ & ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಅಲೆಮಾರಿ ಜನಾಂಗಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು. ವಿಶೇಷವಾಗಿ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಪರಿಶೀಲಿಸಲಾಗುವುದು. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯದ ಎಸ್‌ಸಿ, ಎಸ್‌ಟಿ & ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆ ಸಮನ್ವಯ ಸಮಿತಿ ರಾಜ್ಯ ಮುಖಂಡರ ಜೊತೆ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸರ್ಕಾರ ಔದಾರ್ಯ ತೋರಬೇಕು
ಅಲೆಮಾರಿಗಳ ಸಮಸ್ಯೆಗಳು ವಿಶಿಷ್ಟವಾಗಿದ್ದು, ಒಟ್ಟು 120 ಜಾತಿಗಳಿವೆ. ಇದರಲ್ಲಿ ಎಸ್.ಸಿ 51, ಎಸ್.ಟಿ 23 ಹಾಗೂ ಹಿಂದುಳಿದ ವರ್ಗದ 46 ಜಾತಿಗಳಿವೆ. ವಿವಿಧ ಸಂಘಟನೆಗಳಿದ್ದು, ಅವುಗಳನ್ನು ಒಟ್ಟು ಸೇರಿಸಿ ಸಮನ್ವಯ ಸಮಿತಿ ರಚಿಸಲಾಗಿದೆ. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಬದುಕುತ್ತಿರುವ, ಅಸ್ಮಿತೆ ಇಲ್ಲದ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರ ಅಲೆಮಾರಿಗಳನ್ನು ಗುರುತಿಸಬೇಕಿದೆ. ದಾಖಲೆಗಳಲ್ಲಿ ಇವರು ಇಲ್ಲದಿರುವುದರಿಂದ ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಜಾತಿ ಪ್ರಮಾಣಪತ್ರ ಕೂಡ ಇವರಿಗಿಲ್ಲ. ಸರ್ಕಾರ ಕೆಲ ಜಾತಿಗಳನ್ನು ಮಾತ್ರ ಗುರುತಿಸಿದ್ದು, ಇವರನ್ನು ಗುರುತಿಸುವ ಔದಾರ್ಯವನ್ನ ತೋರಬೇಕು. ಸಮಾನ ಕುಲ, ಗೋತ್ರ, ಭಾಷೆ ಇರುವ ಜಾತಿಗಳನ್ನು ಗುರುತಿಸಬೇಕಿದೆ ಎಂದರು.
ಅಲೆಮಾರಿ ಸಮುದಾಯಗಳಿಗಾಗಿ ಆಯೋಗ?
ತಬ್ಬಲಿ ಸಮುದಾಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಅಲೆಮಾರಿ ಸಮುದಾಯಗಳಿಗಾಗಿ ಆಯೋಗ ರಚಿಸಬೇಕು. ಜೋಗಿ, ಪಿಚ್ಚಗುಂಟಲು ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ಪೂರ್ಣವಾಗಿದೆ. ಅವುಗಳನ್ನ ಸೂಕ್ತ ಜಾತಿಗೆ ಸೇರಿಸಿ ಮೀಸಲಾತಿ ಕಲ್ಪಿಸಬೇಕು & ಅಲೆಮಾರಿ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಸಮಿತಿ ಮುಖಂಡರು ಇದೇ ಸಂದರ್ಭ ಮನವಿ ಮಾಡಿದರು. ಹಲವು ಜಾತಿಗಳು ಬಹುನಾಮಿ ಆಗಿರುವ ಕಾರಣದಿಂದಾಗಿ ಜಾತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ. ಅಗೋಚರ ಸಮುದಾಯಗಳು ಪ್ರಾತಿನಿಧ್ಯವೇ ಇಲ್ಲದೆ ಇದ್ದಾರೆ. ಅವರಿಗೆ ಗುರುತು ಸಿಕ್ಕರೆ, ಶಿಕ್ಷಣ, ಸರ್ಕಾರದ ಯೋಜನೆ ಪಡೆಯಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ಇನ್ನು ಈ ಸಂದರ್ಭದಲ್ಲಿ ಸಚಿವ ಭೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ , ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಹಂಪಿ ಕನ್ನಡ ವಿ.ವಿ ಹಿರಿಯ ಉಪನ್ಯಾಸಕ ಡಾ. ಮೇತ್ರಿ, ಲೀಲಾ ಸಂಪಿಗೆ ಮತ್ತಿತರರು ಇದ್ದರು.












Click it and Unblock the Notifications